ಆಡಳಿತ – ವಿಪಕ್ಷ ನಾಯಕರ ವಾಕ್ಸಮರ: ಕಲಾಪ ನಾಳೆಗೆ ಮೂಂದೂಡಿಕೆ

3 years ago

ಬೆಳಗಾವಿ: ಪ್ರತಿಪಕ್ಷ ಸದಸ್ಯರ ಬಗ್ಗೆ ಸಚಿವರು ಮತ್ತು ಆಡಳಿತ ಪಕ್ಷದ ಸದಸ್ಯರು ಮಾಡಿದ ಟೀಕೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ಧರಣಿ ನಡೆಸಿದ ಪರಿಣಾಮ ಗದ್ದಲ, ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.

ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ಇಲಾಖೆ ಕುರಿತು ಪ್ರಶ್ನೆ ಕೇಳಿದ ಕಾಂಗ್ರೆಸ್ ನ ಡಾ. ರಂಗನಾಥ್ ತಮ್ಮ ಪ್ರಶ್ನೆಗೆ ಸಮರ್ಪಕ ಉತ್ತರ ಸಿಕ್ಕಿಲ್ಲ ಎಂದು ಆರೋಪಿಸಿ ಸಭಾದ್ಯಕ್ಷರ ಪೀಠದ ಮುಂದೆ ಧರಣಿಗೆ ಮುಂದಾದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಚಿವರಾದ ಮಾಧುಸ್ವಾಮಿ ಮತ್ತು ಗೋವಿಂದ ಕಾರಜೋಳ ಶಾಸಕ‌ ಡಾ.ರಂಗನಾಥ್ ಅವರನ್ನು ಸಭಾದ್ಯಕ್ಷರ ಪೀಠದ ಬಳಿಯಿಂದ ತೆರಳುವಂತೆ ತಾಕೀತು ಮಾಡಿದರು. ಈ ವೇಳೆ ಅವರು ಬಳಸಿದ ಶಬ್ದ ಪ್ರತಿಪಕ್ಷ ಸದಸ್ಯರನ್ನು ಕೆರಳುವಂತೆ ಮಾಡಿತು.

ಡಾ.ರಂಗನಾಥ್ ಅವರನ್ನು ಬೆಂಬಲಿಸಿ‌ ಸಭಾದ್ಯಕ್ಷರ ಪೀಠದ ಮುಂಭಾಗಕ್ಕೆ ಧಾವಿಸಿದ ಕಾಂಗ್ರೆಸ್ ಸದಸ್ಯರು ಸಚಿವರುಗಳ ನಡವಳಿಕೆ ಸರಿ ಇಲ್ಲ. ಅವರು ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು  ಪರಸ್ಪರ ನಿಂದಿಸಿಕೊಂಡರು. ಈ ಗದ್ದಲದಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಕೇಳಲಿಲ್ಲ. ಸಭಾಧ್ಯಕ್ಷರ ಸ್ಥಾನದಲ್ಲಿದ್ದ ಕುಮಾರ್ ಬಂಗಾರಪ್ಪ ಅವರು ಮಾಡಿದ ಮನವಿಗೂ ಸದಸ್ಯರು ಸ್ಪಂದಿಸದೆ ಮಾತಿನ ಚಕಮಕಿ, ವಾಕ್ಸಮರ ಮುಂದುವರೆಸಿದ್ದರಿಂದ ಗದ್ದಲ ತಾರಕಕ್ಕೇರಿ ಸಭಾಧ್ಯಕ್ಷರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

ಮತ್ತೆ ಸದನ ಸಮಾವೇಶಗೊಂಡಾಗ ಇದೇ ಪರಿಸ್ಥಿತಿ ಮುಂದುವರೆಯಿತು. ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದರು. ಧರಣಿ ನಡುವೆ ಸಭಾಧ್ಯಕ್ಷ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಮತ್ತೆ ಪ್ರಶ್ನೋತ್ತರ ಕಲಾಪ ನಡೆಸಲು ಮುಂದಾದರು. ಆಗ ಎದ್ದು ನಿಂತ ಸಿದ್ದರಾಮಯ್ಯ ಅವರು ಇದೇನು ನಾವೇನು ಧರಣಿ ನಡೆಸಿರುವಾಗ ಕಲಾಪ ನಡೆಸುವುದು ಸರಿಯಲ್ಲ. ಸಚಿವರುಗಳು ಕಾಂಗ್ರೆಸ್ ಸದಸ್ಯ ರಂಗನಾಥ್ ಜತೆ ನಡೆದುಕೊಂಡು ರೀತಿ ಸರಿ ಇಲ್ಲ. ಅವರು ವಿಷಾದ ವ್ಯಕ್ತಪಡಿಸಬೇಕು. ಒಬ್ಬ ಸದಸ್ಯನಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವುದು ಸದನಕ್ಕೆ ಗೌರವ ತರಲ್ಲ. ಅವರೂ ಸಹ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಎಲ್ಲರಿಗೂ ಗೌರವವಿದೆ ಎಂದು ಹೇಳಿ, ನಾವು ಧರಣಿ ಮುಂದುವರೆಸುತ್ತೇವೆ ಎಂದರು.

ಈ ಹಂತದಲ್ಲಿ ಸದನಕ್ಕೆ ಬಂದ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು, ಈ ವಿಚಾರವನ್ನು ಪ್ರತಿಷ್ಠೆ ಮಾಡಿಕೊಳ್ಳವುದು ಬೇಡ. ಧರಣಿ ಕೈಬಿಡಿ ಎಂದು ವಿರೋಧ ಪಕ್ಷದ ಸದಸ್ಯರಲ್ಲಿ ಮನವಿ ಮಾಡಿದರಾದರೂ ಅದಕ್ಕೆ ಕಾಂಗ್ರೆಸ್ ಸದಸ್ಯರು ಸ್ಪಂದಿಸದೆ ಧರಣಿ ಮುಂದುವರೆಸಿದರು. ಅಲ್ಲದೆ ‌ಸಚಿವ ಮಾಧುಸ್ವಾಮಿ ಮತ್ತು ಗೋವಿಂದ ಕಾರಜೋಳ ಕ್ಷಮೆಯಾಚಿಸಬೇಕೆಂದು ಪಟ್ಟು‌ ಹಿಡಿದರು.

ಈ ವೇಳೆ ‌ಎದ್ದು ನಿಂತ ಮಾಧುಸ್ವಾಮಿಯವರು, ಗೋವಿಂದ ಕಾರಜೋಳ ಕ್ಷಮೆ ಕೇಳುವ ಮೊದಲು ಅಂಜಲಿ ಲಿಂಬಾಳ್ಕರ್ ಅವರನ್ನು ಅಮಾನತುಪಡಿಸಬೇಕು. ಅವರ ವಿರುದ್ಧ ನಾನು ನಿರ್ಣಯ ಮಂಡಿಸುತ್ತೇನೆ ಎಂದರು.

ಈ ಬಗ್ಗೆ ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿ ನಿರ್ಣಯ ಮಾಡುತ್ತೇನೆ. ಸದನದಿಂದ‌ ಆಚೆ ಹಾಕಲೇಬೇಕು. ಹೊರಗಡೆ ಹಾಕ್ತೀರೋ ಇಲ್ವಾ? ಎಂದು ಪೀಠದಲ್ಲಿ ಇದ್ದ ಕುಮಾರ್ ಬಂಗಾರಪ್ಪ ಅವರಿಗೆ ಮಾಧುಸ್ವಾಮಿ ಪ್ರಶ್ನೆ ಮಾಡಿದರು.

ಮಾಧುಸ್ವಾಮಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ, ಈವರೆಗೆ ಸದನದಲ್ಲಿ ಯಾವ ಮಹಿಳೆಯನ್ನೂ ಹಾಗೆ ನಡೆಸಿಕೊಂಡಿಲ್ಲ. ಇದು ಸರಿಯಲ್ಲ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ಸಿದ್ದರಾಮಯ್ಯ, ಇದು ಪ್ರಜಾಪ್ರಭುತ್ವ ರೀತಿಯಲ್ಲಿ ಸರಿಯಾದ ನಡೆಯಲ್ಲ ಎಂದು ಆಕ್ಷೇಪಿಸಿದರು.

ಈ ವೇಳೆ ಸದನದಲ್ಲಿ  ಗದ್ದಲ ತೀವ್ರಗೊಂಡಿತು. ಇದರಿಂದ ಸುಗಮ ಕಲಾಪ ಸಾಧ್ಯವಾಗದೆ ಸದನವನ್ನು ಮುಂದೂಡಲಾಯಿತು.

Leave a Reply