ಬೆಂಗಳೂರು: ಬಂಗಾರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಶಿಕ್ಷಣ ಹಾಗೂ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಳಕ್ಕೆ ಹೆಚ್ಚು ಒತ್ತು ನೀಡಿದ್ದರು. ನಮ್ಮ ಆಡಳಿತದಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಹೊಸ ರೂಪವನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಹಲವರೊಂದಿಗೆ ಚರ್ಚಿಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈಜಿಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಿದ ಅವರು, ರಾಜ್ಯದಲ್ಲಿ ಯಾವ ಭಾಗದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆಯಿದೆ. ಅಂತಹ ಶಾಲೆಗಳನ್ನು ಗುರುತಿಸಿ ಶಿಕ್ಷಣ ಸಂಸ್ಥೆಗಳು ಒಂದೊಂದು ಶಾಲೆಯನ್ನು ದತ್ತು ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಲಿಯುವ ಮಕ್ಕಳಿಗೆ ಪೌಷ್ಟಿಕ ಆಹಾರ ಅತ್ಯವಶ್ಯಕ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇನ್ಮುಂದೆ ಬೆಂಗಳೂರು ನಗರ ಭಾಗದ ಶಾಲಾ ಕಾರ್ಯಕ್ರಮವನ್ನು ಮಕ್ಕಳೇ ನಿರೂಪಿಸುವಂತೆ ಆಗಬೇಕು. ಮಕ್ಕಳಿಗೆ ಬೇಕಿರುವ ಅಗತ್ಯ ತರಬೇತಿ, ಕೌಶಲ್ಯವನ್ನು ಶಿಕ್ಷಕರು ನೀಡಬೇಕು. ವಿದ್ಯಾರ್ಥಿಗಳ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಿಕ್ಷಕರು ನೆರವಾಗಬೇಕು ಎಂದು ಹೇಳಿದರು.
ಆಧುನಿಕ ಯುಗದಲ್ಲಿ ಮಕ್ಕಳ ಕಲಿಕೆಗೆ ತಂತ್ರಜ್ಞಾನ ನೆರವಾಗುತ್ತಿದೆ. ಬಿಟಿಎಂ ಲೇಔಟ್‌ನಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸರ್ಕಾರಿ ಶಾಲೆಗಳನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದಾರೆ. ಇನ್ನು, ಮಕ್ಕಳಿಗೆ ಜ್ಞಾನದ ಜೊತೆಗೆ ಪರಿಸರ ಕಾಳಜಿ ಇರಬೇಕು. ಹಾಗಾಗಿ, ”ಒಂದು ಮಗು ಒಂದು ಗಿಡ” ಅಭಿಯಾನದ ಮೂಲಕ ಪ್ರತಿಯೊಂದು ಮಗುವಿಗೆ ಒಂದು ಗಿಡದ ಪೋಷಣೆ ಮಾಡುವ ಜವಾಬ್ದಾರಿ ಕೊಡಬೇಕು. ಗಿಡಗಳನ್ನು ಬೆಳಸುವಂತೆ ಮಕ್ಕಳಿಗೆ ನೆರವಾಗಲು ಪಾಲಿಕೆಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.




