ಎಲ್ಲಾ ಗ್ಯಾರಂಟಿ ಬಾಗ್ಯ ಯೋಜನೆಗಳೂ ಜಾರಿ
ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ
ಬಡವರ-ಮಹಿಳೆಯರ ಸಬಲೀಕರಣವೇ ಸರ್ಕಾರದ ಗುರಿ!
ಬಡವರಿಗೆ ಅಕ್ಕಿ ನೀಡದ ಕೇಂದ್ರದ ವಿರುದ್ಧ ಆಕ್ರೋಶ
ಬೆಂಗಳೂರು: ದಿನೋಪಯೋಗಿ ವಸ್ತುಗಳ ಬೆಲೆ ದಿನನಿತ್ಯ ಏರಿಕೆಯಾಗುತ್ತಿದ್ದು, ಬಡವರ ಬದುಕು ದುಸ್ಥರವಾಗಿದೆ. ಈ ಹಿನ್ನೆಲೆಯಲ್ಲಿ ಬಡವರಿಗೆ ಅನುಕೂಲವಾಗಲಿ, ಪ್ರತಿಯೊಂದು ಕುಟುಂಬಗಳಿಗೆ ತಿಂಗಳಿಗೆ 4 ರಿಂದ 5 ಸಾವಿರ ಹಣ ಉಳಿತಾಯವಾಗಲಿ ಎಂಬ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ 52 ಸಾವಿರ ಕೋಟಿ ರೂ. ಹಣವನ್ನು ಜನಪರ ಯೋಜನೆಯ ಅಡಿಯಲ್ಲಿ ಜನರ ಕೈಗೇ ನೀಡುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕೋಗಿಲು ವಾರ್ಡ್ ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಂಚಣಿ ಹಾಗೂ ಗೃಹಲಕ್ಷ್ಮಿ ಮಂಜೂರಾತಿ ಪತ್ರ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಸರ್ಕಾರ ರಚನೆಯಾಗಿ ಕೇವಲ ಎರಡೇ ತಿಂಗಳಲ್ಲಿ ಆಶ್ವಾಸನೆ ನೀಡಿದ ಎಲ್ಲಾ ಯೋಜನೆಗಳನ್ನೂ ಜಾರಿಗೆ ತರುವ ಮೂಲಕ ಬಡ-ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಮೂಲಕ ಕಾಂಗ್ರೆಸ್ ಬಡವರ ಪರ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದೆ” ಎಂದರು.
ಮಹಿಳೆಯರ ಸಬಲೀಕರಣಕ್ಕಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಸಾರಿಗೆ ವ್ಯವಸ್ಥೆ ನೀಡಲಾಗಿದೆ. ಎಲ್ಲರ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯೂ ಆಗಸ್ಟ್ ತಿಂಗಳಿನಿಂದಲೇ ಜಾರಿಯಾಗಿದ್ದು, ಶೂನ್ಯ ದರದ ಬಿಲ್ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಪ್ರತಿ ಮಹಿಳೆಯರಿಗೆ 2 ಸಾವಿರ ರೂ ಹಣವನ್ನು ನೀಡಲು ಸರ್ಕಾರ ಈಗಾಗಲೇ ರೂಪುರೇಷೆ ಸಿದ್ದಪಡಿಸಿದ್ದು, ನೋಂದಣಿಯನ್ನೂ ಆರಂಭಿಸಿಯಾಗಿದೆ ಎಂದರು.
ಅನ್ನಭಾಗ್ಯದ ಅಡಿಯಲ್ಲಿ 5 ಕೆಜಿ ಅಕ್ಕಿ, ಉಳಿದ ಅಕ್ಕಿಯ ಬದಲಾಗಿ ಕೆ.ಜಿ.ಗೆ ₹34ರಂತೆ ₹750 ರೂ.ಹಣವನ್ನು ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಮೂಲಕ ಪ್ರತಿ ಮನೆಗೆ ಮಾಸಿಕ ₹4 ರಿಂದ ₹5 ಸಾವಿರ ಹಣ ಉಳಿತಾಯವಾಗಲಿದೆ. ಈ ಹಣವನ್ನು ಮಹಿಳೆಯರು ತಮ್ಮ ಕುಟುಂಬ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ ಸೇರಿದಂತೆ ಅಗತ್ಯ ವಿಚಾರಗಳಿಗೆ ಬಳಸಿಕೊಳ್ಳಬಹುದು ಎಂದರು.
ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುತ್ತಿರುವ ಬಡ-ಮಧ್ಯಮ ವರ್ಗದ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಯೋಜನೆಗಳು ಆಶಾಕಿರಣವಾಗಿದೆ. ಜನರ ಸಂಕಷ್ಟ ನಿವಾರಣೆಗಾಗಿ ₹52 ಸಾವಿರ ಕೋಟಿ ಹಣವನ್ನು ಜನರಿಗೇ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಈವರೆಗೆ ಜಗತ್ತಿನಲ್ಲಿ ಯಾರೂ ಮಾಡಲಾಗದ ಸಾಧನೆ ಮಾಡಿದೆ ಎಂದರು.
ಭಾಗ್ಯಗಳ ಜೊತೆಗೆ ವಿಧವೆಯವರು, ವಯಸ್ಸಾವರು ಹಾಗೂ ಅಂಗವಿಕಲರನ್ನೂ ಹುಡುಕಿ ಅವರಿಗೂ ಪಿಂಚಣಿ ನೀಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಅಧಿಕಾರದಲ್ಲಿದ್ದಾಗ ಯಾವ ಜನಪರ ಯೋಜನೆಗಳನ್ನೂ ಜಾರಿಮಾಡದ ಬಿಜೆಪಿ ನಾಯಕರು, ಕಾಂಗ್ರೆಸ್ ಘೋಷಿಸಿದ್ದ ಭಾಗ್ಯಗಳನ್ನು ಬೂಸಾ ಭಾಗ್ಯ, ಇದನ್ನು ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದು ಆರೋಪಿಸಿದ್ದರು. ನಾವು ಈ ಆರೋಪ-ಅಪಹಾಸ್ಯಗಳಿಗೆ ಕಿವಿಗೊಡದೆ ಜನರ ಮಾತಿಗೆ ಬದ್ಧವಾಗಿ ಕೇವಲ ಎರಡು ತಿಂಗಳಲ್ಲಿ ಎಲ್ಲಾ ಭಾಗ್ಯಗಳನ್ನೂ ಜಾರಿ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು.



