ಮಂಗಳೂರು: ಖಾಸಗೀ ಬಸ್ಸುಗಳ ಪ್ರಯಾಣ ದರ ವಿಪರೀತ ಏರಿಕೆಯನ್ನು ಖಂಡಿಸಿ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ ಐಕ್ಯ ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ.
ಖಾಸಗಿ ಬಸ್ಸ್ಗಳ ಪ್ರಯಾಣ ದರದಲ್ಲಿ ವಿಪರೀತ ಏರಿಕೆಯನ್ನು ಹಾಗೂ ದ.ಕ. ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಜಾತ್ಯಾತೀತ ಜನತಾದಳ ಸೇರಿದಂತೆ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಸಂಘಟನೆಗಳ ಒಕ್ಕೂಟವು ಪ್ರಬಲವಾಗಿ ಖಂಡಿಸಿದ್ದು, ಸದ್ಯಕ್ಕೆ ದರ ಏರಿಕೆಯನ್ನು ತಡೆಹಿಡಿದು ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದೆ.
ಇಲ್ಲವಾದಲ್ಲಿ ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ, ರಸ್ತೆ ತಡೆ ಚಳುವಳಿ, ಕರಪತ್ರ ಹಂಚಿಕೆ, ಮನೆ ಮನೆ ಪ್ರಚಾರ ಸೇರಿದಂತೆ ಐಕ್ಯ ಹೋರಾಟಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಪ್ರಯಾಣ ದರವನ್ನು ಶೇಕಡಾ 25ಕ್ಕಿಂತ ಜಾಸ್ತಿ ಮಾಡಲು ಅವಕಾಶ ನೀಡಿರುವುದು ತೀವ್ರ ಆಕ್ಷೇಪಾರ್ಹವಾಗಿದೆ. ಕಳೆದ ವರ್ಷ ಕೂಡಾ ಬಸ್ಸು ಮಾಲಕರು ಏಕಪಕ್ಷೀಯವಾಗಿ ಈ ಮೊದಲು ನಿರ್ಧರಿಸಲಾದ ದರದ ಮೇಲೆ 25% ಹೆಚ್ಚಳ ಮಾಡಿದ್ದು, ಈ ಬಾರಿ ಜಿಲ್ಲಾಡಳಿತವೇ ಮತ್ತೇ 25% ಹೆಚ್ಚಳಕ್ಕೆ ನೋಟಿಫಿಕೇಶ್ ಮಾಡಿರುವುದರಿಂದ ಬಡ, ಕೂಲಿ ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ.
ದಿನದ ಸಂಪಾದನೆಯ 25% ಭಾಗವನ್ನು ಪ್ರಯಾಣದರಕ್ಕೆ ಖರ್ಚು ಮಾಡಬೇಕಾದ ಅನಿವರ್ಯತೆಯನ್ನು ಜಿಲ್ಲಾಡಳಿತ ನಿರ್ಮಿಸಿರುವುದು ತೀವ್ರ ಖಂಡನೀಯ. ಜಿಲ್ಲೆಯಲ್ಲಿ ಸಾಮಾನ್ಯವಾಗಿ ಪ್ರತೀ ಎರಡು ವರ್ಷಕ್ಕೆ ಒಂದು ಬಾರಿ 7%ದಿಂದ 12.5೫%ವರೆಗೆ ಹೆಚ್ಚಳಕ್ಕೆ ಅವಕಶವನ್ನು ನೀಡಲಾಗುತ್ತಿತ್ತು. ಈ ರೀತಿ ಹೆಚ್ಚಳ ಮಾಡುವಾಗ ಜಿಲ್ಲಾಧಿಕಾರಿಯವರು ಸಂಘ, ಸಂಸ್ಥೆಗಳು, ರಾಜಕೀಯ ಪಕ್ಷಗಳು ಹಾಗೂ ಬಸ್ಸು ಮಾಲಕರ ಸಭೆಗಳನ್ನು ಕರೆದು ಮುಕ್ತ ಚರ್ಚೆ ನಡೆದು ಸರ್ವ ಸಮ್ಮತದ ದರವನ್ನು ನಿಗದಿ ಮಾಡಲಾಗುತ್ತಿತ್ತು. ಈ ರೀತಿ ಮಾಡುವಾಗ ಮೊದಲಿನ ಎರಡು ಸ್ಟೇಜ್ಗಳಲ್ಲಿ ಕೇವಲ 7% ಮಾತ್ರ ಅವಕಾಶ ನೀಡಲಾಗುತ್ತಿತ್ತು. ಆ ರೀತಿ ನಿರ್ಧಾರಿತವಾಗುವಾಗ ಚಿಲ್ಲರೆ ಪೈಸೆಯನ್ನು ಕೆಳಗಿನ ರೂಪಾಯಿಗೆ ಹೊಂದಾಣಿಕೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲಾಗುತ್ತಿತ್ತು. ಆದರೆ ಈ ಬಾರಿ ಎಲ್ಲಾ ವಿಧದಲ್ಲೂ ಪ್ರಯಾಣಿಕರ ಜೇಬಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ. ಈಗಾಗಲೇ ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಉದ್ಯೋಗ ಕಡಿತ, ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುವಾಗ ಜಿಲ್ಲಾಡಳಿತಕ್ಕೆ ಕನಿಷ್ಠ ಮಾನವೀಯ ಸ್ಪರ್ಶ ಇಲ್ಲದಿರುವುದು ಆಘಾತಕಾರಿಯಾದ ಘಟನೆಯಾಗಿದೆ.
ಅವೈಜ್ಞಾನಿಕವಾದ ನೋಟಿಫಿಕೇಶನ್
೧. ಜಿಲ್ಲಾ ಸಾರಿಗೆ ಪ್ರಾಧಿಕಾರದ ಶಿಫಾರಸ್ಸಿನ ಮೇರೆಗೆ ಘೋಷಿಸಿರುವ ನೋಟಿಫಿಕೇಶನ್ ಅವೈಜ್ಞಾನಿಕವಾಗಿದೆ. ಇದರಲ್ಲಿ ಮೊದಲಿನ ಎರಡು ಸ್ಟೇಜ್ಗಳ ದರ ಈಗ ಚಾಲ್ತಿಯಲ್ಲಿರುವ ಕೆ.ಎಸ್.ಆರ್.ಟಿ.ಸಿ. ದರಕ್ಕೆ ಸಮಾನಾಗಿ ಇದೆ. ಅನಂತರ ಯಾವ ಕಾರಣಕ್ಕಾಗಿ ವಿಪರೀತವಾದ ದರವನ್ನು ಏರಿಸಲಾಗಿದೆ ಎಂಬುದು ತಿಳಿದು ಬರುತ್ತಿಲ್ಲ.
೨. ಈ ಮೊದಲು ನಗರ, ಗ್ರಾಮಾಂತರ ಹಾಗೂ ಸರ್ವಿಸ್ಸು, ಎಕ್ಸ್ಪ್ರೆಸ್ ಬಸ್ಸು ದರ ಎಂಬ ವಿಭಾಗವಿತ್ತು. ಸಿಟಿ ಬಸ್ಸಿನಲ್ಲಿ ಇದ್ದ ನಗರ ಮತ್ತು ಗ್ರಾಮಾಂತರ ಎಂಬ ವರ್ಗೀಕರಣವನ್ನು ಕೈಬಿಟ್ಟಿರುವುದು ಮಾಲಕರ ಪರವಾದ ಧೋರಣೆಯಾಗಿದೆ. ಗ್ರಾಮಾಂತರ ಸಾರಿಗೆಯಲ್ಲಿ ೪ ಕಿ.ಮೀ. ವರೆಗೆ ಪ್ರಥಮ ಸ್ಟೇಜ್ ಇತ್ತು. ಈಗ ಅದನ್ನು ೨ ಕಿ.ಮೀ.ಗೆ ಇಳಿಸಲಾಗಿದೆ. ಇದು ತೀರಾ ಖಂಡನೀಯ.
೩. ಮೂರನೆಯದಾಗಿ ಈಗ ಘೋಷಿಸಿದ ಸಿಟಿ ಬಸ್ಸು ದರಪಟ್ಟಿಯಲ್ಲಿ ಎರಡನೇ ಸ್ಟೇಜನ್ನು ರದ್ದು ಮಾಡಿ ಅದರ ಮುಂದಿನ ಸ್ಟೇಜ್ನ ದರ ವಸೂಲಿಗೆ ಅವಕಾಶ ಕಲ್ಪಿಸಲಾಗಿದೆ. ಇದು ಕೂಡಾ ಮಾಲಕರ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಾಡಿರುವ ಕ್ರಮವಾಗಿದೆ.
೪. ಬಸ್ಸು ಮಾಲಕರು ನಷ್ಟದಲ್ಲಿ ಉದ್ಯಮ ನಡೆಸುತ್ತಿದ್ದಾರೆ ಎಂಬ ಮಾಮೂಲೀ ಹೇಳಿಕೆಯನ್ನು, ಡೀಸೆಲ್, ಬಿಡಿ ಭಾಗಗಳ ದರ ಏರಿಕೆಯನ್ನು ಕಾರಣವನ್ನಾಗಿ ತೋರಿಸುತ್ತಿದ್ದಾರೆ. ಇದು ಸತ್ಯವೇ ಆಗಿದ್ದಲ್ಲಿ ಬಾಕಿ ಉಳಿದಿರುವ ನರ್ಮ್ ಬಸ್ಸುಗಳ ಸಂಚಾರವನ್ನು ತಡೆ ಹಿಡಿಯಲು ಹೈಕೋರ್ಟಿನಲ್ಲಿ ಪ್ರಕರಣವನ್ನು ವಾದಿಸಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುವ ಉದ್ದೇಶವಾದರೂ ಏನು? ಲಕ್ಷಾಂತರ ರೂಪಾಯಿಯಲ್ಲಿ ಬಸ್ಸಿನ ಪರವಾನಿಗೆ ಅಕ್ರಮವಾಗಿ ಮಾರಾಟವಾಗುವುದು ಬಸ್ಸು ಉದ್ಯಮ ಸಾಲದಿಂದ ಇರುವ ಕಾರಣಕ್ಕಾಗಿಯಂತೂ ಅಲ್ಲ.
೫. ಇಡೀ ದಿನದಲ್ಲಿ ಹೆಚ್ಚುವರಿ ಖರ್ಚಿನ ಸಂಪೂರ್ಣ ಪ್ರಮಾಣವನ್ನು ಬಸ್ಸು ಮಾಲಕರು ಹಾಗೂ ಜಿಲ್ಲಾಡಳಿತ ಪ್ರತಿಯೊಂದು ಟಿಕೇಟಿನ ಮೇಲೆ ಹೊರಿಸುವುದು ಎಷ್ಟು ಸರಿ?
೬. ರಾಜ್ಯದ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ, ಕೇರಳದ ಹಾಗೂ ತಮಿಳುನಾಡಿನ ಸರಕಾರಿ ಮತ್ತು ಖಾಸಗಿ ಬಸ್ಸು ದರಗಳಲ್ಲಿ ಕನಿಷ್ಠ ದರ ರೂ. ೫ ಇದೆ. ಅಲ್ಲಿನ ಬಸ್ಸು ಮಾಲಕರಿಗೆ ಲಾಭವಾಗುವಾಗ ಇಲ್ಲಿಯ ಬಸ್ಸು ಮಾಲಕರಿಗೆ ಹೇಗೆ ತಾನೇ ನಷ್ಟ ಸಂಭವಿಸಲು ಸಾಧ್ಯ?
ಒಟ್ಟಿನಲ್ಲಿ ನೂರಾರು ಸಂಖ್ಯೆಯಲ್ಲಿರುವ ಬಸ್ಸು ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವಹಿಸಿರುವ ಜಿಲ್ಲಾಡಳಿತವು ಈ ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟದ ಬಗ್ಗೆ ದಿವ್ಯಮೌನ ವಹಿಸಿರುವುದು ಎಷ್ಟು ಸರಿ? ಈ ಬಗ್ಗೆ ಒಕ್ಕೂಟದ ನಿಯೋಗವು ದ.ಕ. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು. ಇದಕ್ಕೆ ಜಿಲ್ಲಾಡಳಿತವು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ, ರಸ್ತೆ ತಡೆ ಚಳುವಳಿ, ಕರಪತ್ರ ಹಂಚಿಕೆ, ಮನೆ ಮನೆ ಪ್ರಚಾರ ಸೇರಿದಂತೆ ತೀವ್ರ ರೀತಿಯ ಹೋರಾಟಗಳನ್ನು ನಡೆಸಬೇಕಾದೀತು ಎಂಬ ಎಚ್ಚರಿಕೆಯನ್ನು ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದವರು:
- ಸುನೀಲ್ ಕುಮಾರ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರುಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ
- ಶುಭೋದಯ ಆಳ್ವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ
- ನೀರಜ್ಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ
- ವಿ. ಕುಕ್ಯಾನ್, ಕಾರ್ಯದರ್ಶಿ, ಸಿಪಿಐ, ದ.ಕ. ಜಿಲ್ಲಾ ಸಮಿತಿ
- ಎಚ್.ವಿ. ರಾವ್, ಸಿಪಿಐ ಜಿಲ್ಲಾ ನಾಯಕರು
- ಸುಮತಿ ಎಸ್. ಹೆಗ್ಡೆ, ದ.ಕ. ಜಿಲ್ಲಾಧ್ಯಕ್ಷರು, ಮಹಿಳಾ ಘಟಕ, ಜಾತ್ಯಾತೀತ ಜನತಾದಳ
- ಸಂತೋಷ್ ಬಜಾಲ್, ಡಿವೈಎಫ್ಐ ದ.ಕ. ಜಿಲ್ಲಾ ಕಾರ್ಯದರ್ಶಿ
- ಎಂ. ದೇವದಾಸ್, ರಾಜ್ಯ ಸಂಘಟನಾ ಸಂಚಾಲಕರು, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಪ್ರೊ.ಕೃಷ್ಣಪ್ಪ ಸ್ಥಾಪಿತ
- ತಿಮ್ಮಯ್ಯ ಕೊಂಚಾಡಿ, ದ.ಕ. ಜಿಲ್ಲಾಧ್ಯಕ್ಷರು, ದಲಿತ ಹಕ್ಕುಗಳ ಸಮಿತಿ
- ಅಲ್ತಾಫ್ ತುಂಬೆ, ಜೆಡಿಎಸ್ ನಾಯಕರು
- ಮಹಮ್ಮದ್ ಕುಂಜತ್ತ್ಬೈಲ್, ಮಾಜಿ ಉಪಮೇಯರ್




