ಸಿದ್ದರಾಮಯ್ಯ ವ್ಯಕ್ತಿತ್ವದ ಕುರಿತು ಚಂದ್ರಶೇಖರ್ ಐಜೂರ್ ಬರಹ
- – ಕೆ.ಎಲ್.ಚಂದ್ರಶೇಖರ್ ಐಜೂರ್, ಪ್ರಾಧ್ಯಾಪಕರು
ಮೈಸೂರಿನಲ್ಲಿ ಬಾಡಿಗೆಗೆ ಮನೆ ಹುಡುಕುವಾಗ ಕುವೆಂಪುನಗರದ ಸೆರಗಿಗಂಟಿಕೊಂಡಿರುವ ಕಾಮಾಕ್ಷಿ ಆಸ್ಪತ್ರೆಯ ಸಮೀಪ ಮನೆಯೊಂದನ್ನು ನೋಡಲು ಹೋದಾಗ ಅರವತ್ತು ದಾಟಿದ ಮನೆಯೊಡತಿಯಂತೆ ಕಾಣುತ್ತಿದ್ದ ಹೆಂಗಸೊಂದು ‘ನೋಡಪಾ, ನಾವು ಕುರುಬ್ರು. ಈ ಯೇಕೇಸ್ಗಳ್ಗು, ಸಾಬ್ರುಗಳ್ಗು ಮನೆ ಬಾಡ್ಗೆಗೆ ಕೊಡಕಿಲ್ಲ, ಮೊದ್ಲೇ ಹೇಳ್ಬಿಡ್ತಿದ್ದೀವಿ…’ ಅಂದಳು.
‘ನಿಮ್ಮ ಕುರುಬರ ಸಿದ್ರಾಮಯ್ಯನ್ನಾ ನಾನು ನನ್ನೆದೆಲಿಟ್ಕಂಡಿದಿನಿ ಕಣವ್ವಾ…’ ಅಂಥ ಆ ಹೆಂಗಸಿಗೆ ಎದೆಯ ಮಾತೊಂದನ್ನು ಬಿಚ್ಚಿಡಬೇಕು ಅಂದಕೊಂಡವನಿಗೆ, ಯಾಕೋ ಆ ಮಾತು ಎದೆಯಿಂದ ಹೊರಬರದೆ ಎದೆಯಲ್ಲೇ ಉಳಿಯಿತು. ಅಲ್ಲೊಂದು ಕ್ಷಣ ಕೂಡ ನಿಲ್ಲದೆ ಹೊರಟು ಬಂದೆ.
ಇದೇ ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದಾಗ SC ಪಕ್ಕ OBC, ಅವನ ಪಕ್ಕ ಮುಸ್ಲಿಮ್, ಮತ್ತವನ ಪಕ್ಕ ಬ್ರಾಹ್ಮಣ… ಅವನ ಪಕ್ಕ ST… ಹೀಗೆ ವಸತಿ ಹಂಚಿಕೆಯ (Site Allottment) ಕ್ರಾಂತಿಕಾರಿ ಮಾದರಿಯೊಂದನ್ನು ಹುಟ್ಟು ಹಾಕಿದವರು. ಇಂಥ ಅವೆಷ್ಟೋ ಜನಪರ ಕೆಲಸಗಳಿಗಾಗಿ ನಾನು ಸದಾ ಸಿದ್ದರಾಮಯ್ಯನವರನ್ನು ನೆನೆಯುವೆ.
ನಾನು ಇಂಡಿಯಾದ ಕನ್ನಡದ ಅನೇಕ ಲೇಖಕರನ್ನು ತೀವ್ರವಾಗಿ ಪ್ರೀತಿಸಿರುವೆ; ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸಿನಿಮಾ ನಿರ್ದೇಶಕರನ್ನು, ಕಲಾವಿದರನ್ನು ಇನ್ನಿಲ್ಲದಷ್ಟು ತೀವ್ರವಾಗಿ ಹಚ್ಚಿಕೊಂಡು ಪ್ರೀತಿಸಿದ್ದೇನೆ. ಒಬ್ಬ ರಾಜಕಾರಣಿಯನ್ನೂ ಅಷ್ಟೇ ತೀವ್ರವಾಗಿ ಪ್ರೀತಿಸಬಹುದು, ಗೌರವಿಸಬಹುದು ಎಂದೆಲ್ಲಾ ನನಗೆ ಅನ್ನಿಸಿದ್ದು ಸಿದ್ದರಾಮಯ್ಯನವರನ್ನು ಕಂಡ ಮೇಲೆಯೇ.
ಒಬ್ಬ ರಾಜಕಾರಣಿಯೊಂದಿಗೆ ಇಷ್ಟೊಂದು ಜಗಳವಾಡಬಹುದು, ಪ್ರೀತಿಸಬಹುದು, ರೇಗಬಹುದು, ಮುನಿಸಿಕೊಂಡು ದೂರ ಉಳಿಯಬಹುದು… ಎಂದೆಲ್ಲಾ ನನಗೆ ಅನ್ನಿಸಿದ್ದು ಸಿದ್ದರಾಮಯ್ಯನವರನ್ನು ಕಂಡ ಮೇಲೆಯೇ.
ಆ ಬಿಕ್ಕಟ್ಟಿನ ಕಾಲವೇ ತನ್ನ ನಾಯಕನೆಂದು ರೂಪಿಸಿಕೊಂಡ ಇಂಥ ಸಿದ್ದರಾಮಯ್ಯನವರನ್ನು ಕಾಲ ಅಷ್ಟು ಬೇಗ ಮರೆಯಲಾರದು.
***
ನನ್ನ ಕಾಲದ ತಲ್ಲಣಗಳಿಗೆ, ಬಿಕ್ಕಟ್ಟಿನ ಸಂದರ್ಭಗಳಿಗೆ ಒಬ್ಬ ರಾಜಕಾರಣಿಯಾಗಿ, ಒಬ್ಬ ಮನುಷ್ಯನಾಗಿ ಸಿದ್ದರಾಮಯ್ಯನವರು ಸ್ಪಂದಿಸುವ ಪರಿಗೆ ನನಗವರ ಮೇಲೆ ವಿಶೇಷ ಪ್ರೀತಿ ಮತ್ತು ನಂಬಿಕೆಗಳಿವೆ. ಮನುಷ್ಯರು ಮಾತ್ರ ಮನುಷ್ಯರ ಕಷ್ಟಕ್ಕೆ ಎದೆಕೊಡಬಲ್ಲರು. ಇಂಥ ನಡೆಗಳಿಂದಾಗಿಯೇ ಕಳೆದ ಒಂದು ದಶಕದಲ್ಲಿ ಸಿದ್ದರಾಮಯ್ಯನವರಿಗೆ ಸೆಲೆಕ್ಟಿವ್ ಅಂಡ್ ಕಲೆಕ್ಟಿವ್ ಶತ್ರುಗಳು ನಿತ್ಯ ಹೆಚ್ಚಾದರೇ ಹೊರತು ಕಮ್ಮಿಯಾಗಲಿಲ್ಲ.
ಕರ್ನಾಟಕದಲ್ಲಿ ಕ್ಷುದ್ರ ರಾಜಕಾರಣ ಮತ್ತು ಜಡ್ಡುಗಟ್ಟಿದ ರಾಜಕಾರಣಿ ಹೇಗಿರಬಾರದು ಅನ್ನುವುದಕ್ಕೆ ಒಂದೆರಡಲ್ಲ ಹತ್ತಾರು ಹೆಸರು ಕೊಡಬಹುದು. Suicidal politics ಮಾಡುವುದಕ್ಕಿಂಥ suicide ಮಾಡಿಕೊಳ್ಳುವುದು ಅತ್ಯಂತ ಗೌರವಯುತವಾದುದು ಎಂದೇ ನಾನು ನಂಬಿರುವೆ.
ಕೊನೆಗೆ ಇಷ್ಟು ಮಾತ್ರ ಹೇಳಬಲ್ಲೆ: ಸಿದ್ದರಾಮಯ್ಯ ಮತ್ತೆ ಅಧಿಕಾರ ಹಿಡಿಯುವರೋ ಇಲ್ಲವೋ ಗೊತ್ತಿಲ್ಲ. ಆದರೆ ಕರ್ನಾಟಕದ ಪರಮನೀಚ ರಾಜಕಾರಣದ ಕೊಳೆತು ಗಬ್ಬುನಾರುವ ಹೆಸರುಗಳ ಸಾಲಿನಲ್ಲಿ ಮಾತ್ರ ‘ಸಿದ್ದರಾಮಯ್ಯ’ ಎಂಬ ಹೆಸರು ಇರುವುದಿಲ್ಲ.




