ಈ ದೇಶದಲ್ಲಿ ಕೆಲವೇ ಕೆಲವು ಪ್ರಧಾನಿಗಳು ಪಕ್ಷಪಾತ ಮಾಡದೇ ಪಕ್ಷದ ಪ್ರಧಾನಿಯಾಗದೇ ದೇಶದ ಪ್ರಧಾನಿಯಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ನೆಹರೂರವರು, ಶಾಸ್ತಿರವರು, ಐ.ಕೆ.ಗುಜ್ರಾಲ್ ರವರು, ಚಂದ್ರಶೇಖರ್‌ರವರು, ಡಾ.ಮನಮೋಹನ್ ಸಿಂಗ್‌ರವರು, ಅಟಲ್ ಬಿಹಾರಿ ವಾಜಪೇಯಿರವರು ಮತ್ತು ಪಿ.ವಿ.ನರಸಿಂಹರಾವ್‌ರವರು ಇಂತಹ ನಿಟ್ಟಿನಲ್ಲಿ ದುಡಿದಂತಹ ಮಹನೀಯರು.
ಇವರುಗಳಲ್ಲಿ ಹೆಚ್ಚಿನ ಸಮಯ ಚುನಾವಣೆಯ ಭಾಷಣಕ್ಕೆ ಮೀಸಲಿಡುವ ಮನೋಭಾವ ಇರಲಿಲ್ಲ. ವಿರೋಧಪಕ್ಷದವರ ವಿಚಾರದಲ್ಲಿ ದ್ವೇಷದ ಭಾವನೆ ಹೊಂದಿರಲಿಲ್ಲ. ಅನ್ಯ ಪಕ್ಷದ ರಾಜ್ಯ ಸರ್ಕಾರಗಳ ವಿಚಾರಗಳಲ್ಲಿ ಸಹಾಯ ಮಾಡುವ ಸಂದರ್ಭ ಬಂದಾಗ ಬೇಧಭಾವ ಎಣಿಸುತ್ತಿರಲಿಲ್ಲ. ಇವರುಗಳಿಗೆ ತಾವು ಒಂದು ಪಕ್ಷದ ಪ್ರಧಾನಿ ಎಂಬ ಭಾವನೆ ಎಂದೂ ಇರಲಿಲ್ಲ. ತಾನು ಈ ದೇಶದ ಪ್ರಧಾನಿ ಎಂಬ ವಿಶಾಲ ಮನೋಭಾವವಿತ್ತು.
ಆದರೆ, ಇತ್ತೀಚಿನ ದಿನಗಳಲ್ಲಿ ಕಳೆದ ಏಳು ವರ್ಷದ ಅವಧಿಯಲ್ಲಿ ಈಗ ನಾವು ಕಾಣುತ್ತಿರುವುದು ಒಂದು ಪಕ್ಷದ ಪ್ರಧಾನಿಯನ್ನು, ಹೆಚ್ಚಿನ ಸಮಯವನ್ನು ಚುನಾವಣಾ ರ್ಯಾಲಿಗಳಿಗೆ ಭಾಷಣಗಳಿಗೆ ಹಾಗೂ ವಿರೋಧಪಕ್ಷದವರ ಟೀಕೆಗೆ ಮೀಸಲಿಟ್ಟು ಎಲ್ಲಾ ಸಂದರ್ಭಗಳಲ್ಲಿಯೂ ಅವರ ಮಾತು ರಾಜಕೀಯ ಲೇಪಿತವಾಗಿರುತ್ತದೆ.
ಸಣ್ಣ ಪುಟ್ಟ ರಾಜ್ಯಗಳ ಚುನಾವಣೆಗಳಲ್ಲಿ ಹತ್ತಾರು ಬಾರಿ ಭೇಟಿ ನೀಡಿ, ಸಭೆಗಳನ್ನು ನಡೆಸಿ ಭಾವನೆಗಳನ್ನು ಕೆರಳಿಸುವಂತಹ ಮಾತುಗಳನ್ನಾಡುವುದು ತರವಲ್ಲ. ಚುನಾವಣೆಯ ಸಂದರ್ಭದಲ್ಲಿ ರಾಜ್ಯಗಳಿಗೆ ಲಕ್ಷಾಂತರ ಕೋಟಿ ರೂಪಾಯಿಗಳ ಪ್ಯಾಕೇಜ್‌ಗಳನ್ನು ಘೋಷಿಸುವುದು ಪಕ್ಷಪಾತದ ನಡವಳಿಕೆಗಳಾಗುತ್ತದೆ.
ಸಂಕಷ್ಟಗಳು ಬಂದಾಗ ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಆ ರಾಜ್ಯದ ಜನರು ಸಹ ಈ ದೇಶದ ಒಂದು ಭಾಗದ ಜನರು ಎನ್ನುವ ಭಾವನೆಗಳು ಅನೇಕ ಬಾರಿ ಇವರ ನಡವಳಿಕೆಗಳಲ್ಲಿ ಕಾಣದಾಗಿದೆ. ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ ನಂತರ ತಾವು ಒಂದು ಪಕ್ಷದ ಪ್ರತಿನಿಧಿಯಲ್ಲ ನೂರ ಮೂವತ್ತು ಕೋಟಿ ಜನತೆಯ ಪ್ರತಿನಿಧಿ ಎಂಬ ಭಾವನೆಯನ್ನು ಇನ್ನು ಮುಂದಿನ ದಿನದಲ್ಲಾದರೂ ರೂಢಿಸಿಕೊಂಡು ತಮ್ಮ ಗುರುಗಳಾದ ಅಟಲ್ ವಾಜಪೇಯಿರವರಿಗೆ ಯಾವ ರೀತಿಯಲ್ಲಿ ಪಕ್ಷಾತೀತವಾಗಿ ಜನ ಗೌರವಿಸುತ್ತಿದ್ದಾರೋ ಅಂತಹ ದಾರಿಯಲ್ಲಿ ಸಾಗುವ ನಡವಳಿಕೆಯನ್ನು ಮತ್ತು ಮಾತುಗಾರಿಕೆಯನ್ನು ಅಳವಡಿಸಿಕೊಂಡರೆ ದೇಶದ ಪ್ರಜಾಪ್ರಭುತ್ವಕ್ಕೆ ಪೂರಕವಾಗುತ್ತದೆ.
ಚುನಾವಣೆಗಳ ಕಾರಣಕ್ಕಾಗಿ ಅಥವಾ ಗೆಲುವಿನ ಕಾರಣಕ್ಕಾಗಿ ಧರ್ಮ, ಜಾತಿ, ಪಂಗಡ ಅಥವಾ ಇನ್ನಿತರೆ ಸಣ್ಣಪುಟ್ಟ ವಿಚಾರಗಳನ್ನು ಪ್ರಧಾನಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವ ಜನ ಮಾತನಾಡುವುದು ಆ ಹುದ್ದೆಗೆ ಆಗುವ ಅಪಚಾರವಾಗುತ್ತದೆ. ಸದಾ ದ್ವೇಷದ ಮಾತು ಯಾವ ಯಶಸ್ಸನ್ನು ತಂದುಕೊಡುವುದಿಲ್ಲ. ಇಡೀ ದೇಶವನ್ನು ತಮ್ಮ ಪಕ್ಷ ಅಧಿಕಾರದ ಹಿಡಿತಕ್ಕೆ ತೆಗೆದುಕೊಂಡ ಮಾತ್ರಕ್ಕೆ ಯಾವ ಮಹಾನ್ ಬದಲಾವಣೆಯು ಆಗುವುದಿಲ್ಲ. ನಿಮ್ಮೊಂದಿಗೆ ಕೈ ಜೋಡಿಸುತ್ತಿರುವ ಅನೇಕ ಮಂದಿ, ಅನೇಕ ರಾಜ್ಯಗಳಲ್ಲಿ ಅತ್ಯುತ್ತಮವಾದ ಅಥವಾ ಶ್ರೇಷ್ಠತೆಯ ಸಾರ್ವಜನಿಕ ಬದುಕಿನ ಹಿನ್ನೆಲೆಯೇನು ಹೊಂದಿರುವವರೇನಲ್ಲ.
ಅಲ್ಲಿ ಸಲ್ಲದವರು ಇಲ್ಲಿ, ಇಲ್ಲಿ ಸಲ್ಲದವರು ಅಲ್ಲಿ ಎಂಬಂತಹ ನಾಯಕರುಗಳಿಂದ ತುಂಬಿರುವ ಎಲ್ಲಾ ಪಕ್ಷದಂತೆ ನಿಮ್ಮದು ಒಂದು ಪಕ್ಷ.
–ಕೆ.ಎಸ್. ನಾಗರಾಜ್, ಬೆಂಗಳೂರು




