ದರ್ಶನ್ ಮತ್ತು ಆರೋಪಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಸಿದ್ಧತೆ

8 months ago

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ನಟ ದರ್ಶನ್ ಮತ್ತು ಸಹ ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ಜೈಲು ಅಧಿಕಾರಿಗಳು ಮುಂದಾಗಿದ್ದಾರೆ.

ನಟ ದರ್ಶನ್ ಮತ್ತು ಸಹ ಆರೋಪಿಗಳನ್ನು ಭದ್ರತೆ ಮತ್ತು ಆಡಳಿತಾತ್ಮಕ ಕಾರಣಗಳಿಂದ ಬೇರೆಬೇರೆ ಜೈಲುಗಳಿಗೆ ಸ್ಥಳಾಂತರಿಸಲು ನಿರ್ಧಾರ ಕೈಗೊಂಡು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ಜೈಲು ಅಧಿಕಾರಿಗಳು ಆರೋಪಿಗಳನ್ನು ಬೇರೆ ಜೈಲುಗಳಿಗೆ ವರ್ಗಾಯಿಸುವಂತೆ ಕೋರಿ 64ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜೈಲು ಅಧಿಕಾರಿಗಳಿಂದ ನೇರವಾಗಿ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದೆ. ಬದಲಾಗಿ, ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ ಪಿಪಿ) ಮೂಲಕವೇ ಅರ್ಜಿಯನ್ನು ಸಲ್ಲಿಸುವಂತೆ ಸೂಚಿಸಿದೆ. ನ್ಯಾಯಾಲಯದ ಈ ಸೂಚನೆ ಮೇರೆಗೆ, ಜೈಲು ಸೂಪರಿಂಟೆಂಡೆಂಟ್ ಅವರು ಎಸ್ಪಿಪಿ ಅವರನ್ನು ಭೇಟಿ ಮಾಡಿ, ಇಂದು ಮಧ್ಯಾಹ್ನ ಅಥವಾ ಇಂದು  ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ವರ್ಗಾವಣೆಗೆ ಕಾರಣಗಳೇನು?: ಆರೋಪಿಗಳ ರಾಜಾತಿಥ್ಯ ಮತ್ತು ಜೈಲು ಅಧಿಕಾರಿಗಳ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳೆದ ಬಾರಿಯ ರಾಜಾತಿಥ್ಯ ಪ್ರಕರಣವನ್ನು ಉಲ್ಲೇಖಿಸಿ, ಭದ್ರತಾ ಹಿತದೃಷ್ಟಿಯಿಂದ ಆರೋಪಿಗಳ ಸ್ಥಳಾಂತರ ಅತ್ಯಗತ್ಯ ಎಂದು ಮನವಿ ಮಾಡಲಾಗಿದೆ.

ದರ್ಶನ್ ಅವರ ಜಾಮೀನು ರದ್ದು ಆದೇಶದ ಸಮಯದಲ್ಲಿ ಸುಪ್ರೀಂ ಕೋರ್ಟ್ ಜೈಲು ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಕಟುವಾಗಿ ಟೀಕಿಸಿತ್ತು. ನ್ಯಾಯಾಲಯದ ಈ ಖಂಡನೆಯಿಂದಾಗಿ, ಜೈಲು ಅಧಿಕಾರಿಗಳು ಯಾವುದೇ ಹೆಚ್ಚಿನ ವಿವಾದಗಳಿಗೆ ಅವಕಾಶ ನೀಡದಂತೆ ಆರೋಪಿಗಳನ್ನು ಬೇರೆಡೆಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.

ಸ್ಥಳಾಂತರದ ನಿರ್ಧಾರ ಪ್ರಭಾವಿ ವ್ಯಕ್ತಿಗಳು ಬಂಧಿತರಾದಾಗ ಜೈಲುಗಳಲ್ಲಿ ಎದುರಾಗುವ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಹೊಸ ದಿಕ್ಕನ್ನು ಸೂಚಿಸುತ್ತದೆ. ನ್ಯಾಯಾಲಯದ ಅಂತಿಮ ತೀರ್ಪು ಬಂದ ನಂತರವೇ ಈ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ.

ಯಾರು ಎಲ್ಲಿಗೆ ಶಿಫ್ಟ್?

ದರ್ಶನ್: ಬಳ್ಳಾರಿ ಜೈಲು
ಜಗದೀಶ್, ಲಕ್ಷ್ಮಣ್: ಶಿವಮೊಗ್ಗ ಜೈಲು
ನಾಗರಾಜ್: ಗುಲ್ಬರ್ಗಾ ಜೈಲು
ಪ್ರದೋಷ್: ಬೆಳಗಾವಿ ಜೈಲು
ಪವಿತ್ರಾ ಗೌಡ, ಅನುಕುಮಾರ್: ಹಿಂದೆಯೂ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದರು.

ಜೈಲಿಗೆ ಒಗ್ಗಿಕೊಂಡ ದರ್ಶನ್: ಇನ್ನೂ ನಟ ದರ್ಶನ್ ಜೈಲಿನಲ್ಲಿ ಮೊದಲ ದಿನದ ಬೇಸರವನ್ನು ಮರೆತು ಸಹಜ ಸ್ಥಿತಿಗೆ ಮರಳಿದ್ದಾರೆ. ರಾತ್ರಿ ಅನ್ನ ಮತ್ತು ಸಾಂಬಾರ್ ಸೇವಿಸಿ ಮಲಗಿದ್ದಾರೆ. ಜೈಲಿನ ಸಿಬ್ಬಂದಿ ಹಾಗೂ ಇತರ ಸಹಚರರೊಂದಿಗೆ ಸಾಮಾನ್ಯವಾಗಿಯೇ ಮಾತನಾಡಿದ್ದಾರೆ.

ಹೈಕೋರ್ಟ್‌ ಜಾಮೀನು ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದಾಗಲೇ, ಜಾಮೀನು ರದ್ದು ಮಾಡಬಹುದೆಂದು ಅರಿತಿದ್ದೆ, ಹಾಗಾಗಿ ಮಾನಸಿಕವಾಗಿ ಸಿದ್ಧನಾಗಿದ್ದೆ ಎಂದು ದರ್ಶನ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಇದೇ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಮಹಿಳಾ ಬ್ಯಾರಕ್‌ನಲ್ಲಿ ಸಹಜವಾಗಿದ್ದಾರೆ. ರಾತ್ರಿ ಊಟ ಮಾಡಿ, ತಮ್ಮ ಸಹ ಕೈದಿಗಳೊಂದಿಗೆ ಮಾತನಾಡುತ್ತಾ ಕಾಲ ಕಳೆದಿದ್ದಾರೆ ಎನ್ನಲಾಗಿದೆ.

ಹೃದಯ ಒಡೆದಿದೆ ಪೋಸ್ಟ್ ವೈರಲ್: ಮತ್ತೊಂದೆಡೆ ದರ್ಶನ್ ಜೈಲು ಸೇರಿರುವುದರಿಂದ ದುಃಖಿತರಾಗಿರುವ ಅವರ ಪತ್ನಿ ವಿಜಯಲಕ್ಷ್ಮಿ ಅವರು ಒಡೆದ ಹೃದಯದ ಎಮೋಜಿಯನ್ನು ಬಳಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವುದು ವೈರಲ್ ಆಗಿದೆ.

ತಮ್ಮ ಫಾರಂ ಹೌಸ್‌ನಲ್ಲಿ ದರ್ಶನ್‌ ತಾವು ಸಾಕಿದ ಪ್ರಾಣಿಗಳ ನಡುವೆ ವಾಕಿಂಗ್ ಮಾಡುತ್ತಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಫ್ಯಾನ್‌ಗಳು ‘ಸ್ಟೇ ಸ್ಟ್ರಾಂಗ್’ ಎಂದು ವಿಜಯಲಕ್ಷ್ಮಿ ಅವರಿಗೆ ಧೈರ್ಯ ತುಂಬಿದ್ದಾರೆ.

ಕಳೆದ ಡಿಸೆಂಬರ್‌ನಿಂದ ಮೊನ್ನೆಯವರೆಗೂ ಪತಿ ದರ್ಶನ್ ತೂಗುದೀಪ ಜೊತೆ ವಿಜಯಲಕ್ಷ್ಮೀ ಅವರು ಹೆಚ್ಚಿನ ಸಮಯ ಕಳೆದಿದ್ದರು.

Leave a Reply