ಬೆಂಗಳೂರು: ಉದ್ಯೋಗ ಕೊಡಿಸುವುದಾಗಿ ವಂಚನೆ ಸಂಬಂಧ ಕಾಂತಾರ ಖ್ಯಾತಿಯ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ ‘ಶಬಾಷ್ ಬಡ್ಡಿ ಮಗನೇ’ಚಿತ್ರದ ನಿರ್ಮಾಪಕ ಪ್ರಕಾಶ್ ರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಕೆಎಂಎಫ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಸಂಬಂಧ ನಿರ್ಮಾಪಕ ಪ್ರಕಾಶ್ ರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಕೆಎಂಎಫ್ ನಲ್ಲಿ ತಾಂತ್ರಿಕ ಅಧಿಕಾರಿ ಹುದ್ದೆ ಕೊಡಿಸುವುದಾಗಿ 20 ಲಕ್ಷ ರೂ.ಗಳಿಗೆ ಮಾತುಕತೆ ನಡೆಸಿ ಚಿಕ್ಕಬಳ್ಳಾಪುರ ಮೂಲದ ವ್ಯಕ್ತಿಯಿಂದ ಆರೋಪಿ ಪ್ರಕಾಶ್ 10 ಲಕ್ಷ ಹಣ ಪಡೆದು ವಂಚನೆ ಮಾಡಿದ್ದರು. ನೇಮಕಾತಿಗೆ ಒತ್ತಡ ತಂದ ವ್ಯಕ್ತಿಗೆ ಸರ್ಕಾರದ ನಕಲಿ ನೇಮಕಾತಿ ಆದೇಶ ಪತ್ರ ನೀಡಿದ್ದಾರೆ. ಕೆಎಂಎಫ್ ನಿರ್ದೇಶಕರ ಸಹಿ, ಸರ್ಕಾರಿ ಲಾಂಛನಗಳ ನಕಲಿ ಮಾಡಿ ಆದೇಶ ಪ್ರತಿ ನೀಡಿದ್ದಾರೆ. ಆದೇಶ ಪ್ರತಿ ಹಿಡಿದು ಕೆಎಂಎಫ್ ಗೆ ಹೋದಾಗ ಅದು ನಕಲಿ ಆದೇಶ ಪ್ರತಿ ಎಂಬುದು ಪತ್ತೆಯಾಗಿದೆ.
ಬಳಿಕ ಕೆಎಂಎಫ್ ಅಧಿಕಾರಿಗಳು ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ದೂರಿನನ್ವಯ ಆರೋಪಿ ಪ್ರಕಾಶ್ ನನ್ನು ಐಪಿಸಿ 420 ಅಡಿಯಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ನಿರ್ಮಾಪಕ ಬಂಧನವಾಗುತ್ತಿದ್ದಂತೆಯೇ ಶಬಾಷ್ ಬಡ್ಡಿ ಮಗನೇ ಸಿನಿಮಾ ನಿಂತು ಹೋಗಿದೆ. ಕಳೆದ ವರ್ಷ ಅಕ್ಟೋಬರ್ ನ ದಸರಾ ವೇಳೆಗೆ ಮುಹೂರ್ತ ಇಟ್ಟು ಶುರು ಮಾಡಿದ್ದ ಶಬಾಷ್ ಬಡ್ಡಿ ಮಗನೇ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ನಾಯಕ ನಟನಾಗಿ ಅಭಿನಸುತ್ತಿದ್ದರು.




