ಕಾರ್ಮಿಕ ವರ್ಗದ ಹಿತಾಸಕ್ತಿ ಕಡೆಗಣಿಸಿ ಕಾರ್ಪೋರೇಟ್ ಕಂಪೆನಿಗಳಿಗೆ ಮಣೆ: ರಾಘವ ಕೆ
ಮಂಗಳೂರು: ಸಮಾಜದಲ್ಲಿ ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡಬೇಕಾದ ಕೇಂದ್ರದ ನರೇಂದ್ರ ಮೋದಿ ಸರಕಾರ ಹೆಜ್ಜೆ ಹೆಜ್ಜೆಗೂ ಕಾರ್ಪೋರೇಟ್ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುವ ಮೂಲಕ ನವ ಉದಾರೀಕರಣ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿ ಮಾಡುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯಾಧ್ಯಕ್ಷ ರಾಘವ ಕೆ ಆರೋಪಿಸಿದರು.
ಮಾರ್ಚ್ 28, 29 ರಂದು ನಡೆಯುವ ಅಖಿಲ ಭಾರತ ಮಹಾಮುಷ್ಕರದ ಸಂದೇಶವನ್ನು ಸಾರಲು ಮಂಗಳೂರು ನಗರದಲ್ಲಿ ಆಯೋಜಿಸಿದ ಪಾದಯಾತ್ರೆ ಉದ್ಘಾಟಿಸಿ ಮಾತಾಡಿದ ಅವರು, ದೇಶದ ಸಂಪತ್ತಾದ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನೇ ಕೊಳ್ಳೆ ಹೊಡೆಯುತ್ತಿದೆ. ಇಂತಹ ಸರಕಾರದ ಜನವಿರೋಧಿ ನೀತಿಗಳನ್ನು ಸೋಲಿಸುವ ಮೂಲಕ ದೇಶ ಉಳಿಸುವ ಜೊತೆಗೆ ಜನರ ಬದುಕನ್ನು ರಕ್ಷಿಸಬೇಕಾಗಿದೆ ಎಂದರು.
ಪಾದಯಾತ್ರೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಎಚ್.ವಿ.ರಾವ್, ಸೀತಾರಾಮ ಬೇರಿಂಜ, ಕರುಣಾಕರ್, ವಿ.ಕುಕ್ಯಾನ್, ಪ್ರವೀಣ್, ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ, ಭಾರತಿ ಬೋಳಾರ, ಮುಸ್ತಫಾ, ನಾಗೇಶ್ ಕೋಟ್ಯಾನ್, ಜಯಲಕ್ಷ್ಮಿ, ಬ್ಯಾಂಕ್ ನೌಕರರ ಸಂಘಟನೆಯ ನಾಯಕರಾದ ಫಣೀಂದ್ರ, ಸುರೇಶ್ ಹೆಗ್ಡೆ, ಸದಾಶಿವ, ಪುರುಷೋತ್ತಮ ಪೂಜಾರಿ, ವಿವಿಧ ಸಂಘಟನೆಗಳ ಮುಖಂಡರಾದ ಡಾ.ಕೃಷ್ಣಪ್ಪ ಕೊಂಚಾಡಿ, ಸಂತೋಷ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.



