14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಕ್ತಾಯ

2 years ago

ಬೆಂಗಳೂರು: ಉತ್ತರ ಹಾಗೂ ಮಲೆನಾಡು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತದಾನ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ಸಂಪೂರ್ಣ ಶಾಂತಿಯುತವಾಗಿ ಮುಗಿದಿದೆ.

ಎಲ್ಲ 14 ಕ್ಷೇತ್ರಗಳಲ್ಲಿ ಬೆಳಗ್ಗೆ ಅತ್ಯಂತ ಚುರುಕಿನಿಂದ ಮತದಾನ ಆರಂಭವಾಯಿತಾದರೂ ಮಧ್ಯಾಹ್ನದ ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಕೊಂಚಮಟ್ಟಿಗೆ ನಿಧಾನಗತಿಯಿಂದ ಸಾಗಿತು. ಬಿಸಿಲು ಕಡಿಮೆಯಾಗುತ್ತಿದ್ದಂತೆ ಸಂಜೆ ಏಕಾಏಕಿ ಬಿರುಸಿನಿಂದ ಮತದಾನ ನಡೆದಿದ್ದು, ಅವಧಿ ಮುಗಿದ ನಂತರವೂ ಮತಗಟ್ಟೆ ಒಳಗಿದ್ದ ಮತದಾರರಿಗೆ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು.

ರಾಜ ವೆಂಕಟಪ್ಪ ನಾಯಕ ಅವರ ಅಕಾಲಿಕ ನಿಧನದಿಂದ ತೆರವಾದ ಸುರಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತದಾನ ಕೂಡ ಬಿರುಸಿನಿಂದ ಸಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಕಲ್ಲುತೂರಾಟ ನಡೆಯಿತು. ಇದರಿಂದ ಹಲವರು ಗಾಯಗೊಂಡರು.

ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂಗಳಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಭಗವಂತ್ ಖೂಬಾ ಸೇರಿದಂತೆ 227 ಅಭ್ಯರ್ಥಿಗಳ ಭವಿಷ್ಯವನ್ನು 2,59,52,958 ಮತದಾರರು ನಿರ್ಧರಿಸಿದ್ದಾರೆ

14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.

ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ ಕೇಳಿ ಬಂದಿದೆ. ಪೋಲಿಂಗ್ ಅಧಿಕಾರಿಯೇ ಕಾಂಗ್ರೆಸ್ ಗೆ ಮತ ಚಲಾಯಿಸಿದ ಆರೋಪ ಕೇಳಿ ಬಂದ ತಕ್ಷಣ ಬಿಜೆಪಿ ಅಭ್ಯರ್ಥಿ ಸಂಸದ ಡಾ. ಉಮೇಶ ಜಾಧವ್ ಮತಗಟ್ಟೆಗೆ ತೆರಳಿ ಮತಗಟ್ಟೆ ಅಧಿಕಾರಿಯನ್ನು ತರಾಟೆಗೆ ತೆಗದುಕೊಂಡರಲ್ಲದೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ದೂರು ಸಲ್ಲಿಸಿದರು.

ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಕನಾಳ -ಉಪನಾಳ ಗ್ರಾಮದ ದಲಿತ ಕಾಲೋನಿಗೆ ಯಾವುದೇ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂದು ಆರೋಪಿಸಿ ದಲಿತ ಕಾಲೋನಿಯ ಎಲ್ಲ ಮತದಾರರು ಮತದಾನ ಬಹಿಷ್ಕರಿಸಿದರು. ಮತದಾನದಲ್ಲಿ ಪಾಲ್ಕೊಳ್ಳುವಂತೆ ಅಧಿಕಾರಿಗಳು ಇವರ ಮನವರಿಸಲು ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾಯಿತು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಬಸಾಪುರ ಗ್ರಾಮದ ಮತದಾರರು ತಮ್ಮ ಗ್ರಾಮಕ್ಕೆ ರಸ್ತೆ ಮತ್ತು ಕುಡಿಯುವ ನೀರಿನ ಮತದಾನ ಬಹಿಷ್ಕಾರ ಮಾಡಿದರು.

ಬಳ್ಳಾರಿ, ವಿಜಯಪುರ ಕೊಪ್ಪಳ ಬೀದರ್ ಮತ್ತು ಕಲಬುರ್ಗಿಯಲ್ಲಿ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದರೆ, ಧಾರವಾಡ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಮತ್ತು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಸಾಧಾರಣ ರೀತಿಯಲ್ಲಿ ಮತದಾನ ನಡೆದಿದೆ.

ಬಳ್ಳಾರಿಯಲ್ಲಿ ಅತ್ಯಂತ ದಾಖಲೆಯ ಶೇಕಡ 78.24 ರಷ್ಟು ಮತದಾನವಾಗಿದ್ದರೆ, ಕಾರವಾರ ಲೋಕಸಭಾ ಕ್ಷೇತ್ರದಲ್ಲಿ 68.2, ಕೊಪ್ಪಳದಲ್ಲಿ 76, ಧಾರವಾಡದಲ್ಲಿ 74, ಕಲಬುರ್ಗಿಯಲ್ಲಿ 72, ಬೀದರ್ ನಲ್ಲಿ 76, ದಾವಣಗೆರೆ 68, ಶಿವಮೊಗ್ಗ 66, ರಾಯಚೂರು 68, ವಿಜಯಪುರ 70, ಹಾವೇರಿಯಲ್ಲಿ 74ರಷ್ಟು ಮತದಾನವಾಗಿರುವ ವರದಿಗಳು ಬಂದಿವೆ.

Leave a Reply