ನಕಲಿ ನಂದಿನಿ ತುಪ್ಪ ಮಾರಾಟ ಜಾಲ ಭೇದಿಸಿದ ಪೊಲೀಸರು

5 months ago

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ ನಂದಿನಿ ತುಪ್ಪ ಗುಣಮಟ್ಟ ಮತ್ತು ಬೆಲೆಯ ವಿಷಯದಲ್ಲಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದೆ. ಇಂತಹ ಗುಣಮಟ್ಟದ ಬ್ರಾಂಡ್ ಅನ್ನು ದುರ್ಬಳಕೆ ಮಾಡಿಕೊಂಡಿರುವ ವಂಚಕರು ನಂದಿನಿ ಹೆಸರಿನ ನಕಲಿ ಪ್ಯಾಕೆಟ್ ತಯಾರಿಸಿ ಅದರಲ್ಲಿ ಕಲಬೆರಕೆ ತುಪ್ಪ ತುಂಬಿಸಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಂಗಳೂರಿನ ಸಿಸಿಬಿ ಪೊಲೀಸರು ‌ಬೃಹತ್ ಜಾಲವೊಂದನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಹೊರ ರಾಜ್ಯದಲ್ಲಿ  ಕಲಬೆರೆಕೆ ತುಪ್ಪವನ್ನು ತಯಾರಿಸಿ ಅದನ್ನು ರಾಜ್ಯದ ಪ್ರತಿಷ್ಠಿತ ನಂದಿನಿ ಬ್ರಾಂಡ್‌ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಲ್ಲಿ ತುಂಬಿ ನಗರದಾದ್ಯಂತ ಮಾರಾಟ ಮಾಡುತ್ತಿದ್ದ ಜಾಲದಲ್ಲಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.

ಬಂಧಿತರಿಂದ 1,26,95,200 ರೂ. ಬೆಲೆಬಾಳುವ 8,136 ಲೀಟರ್ ನಂದಿನಿ ಬ್ರಾಂಡ್‌ ಕಲಬೆರೆಕೆ ತುಪ್ಪ ಹಾಗೂ ಸರಬರಾಜು ಮಾಡುತ್ತಿದ್ದ 4 ವಾಹನಗಳು ಹಾಗೂ ಕಲಬೆರಕೆ ನಂದಿನಿ ತುಪ್ಪವನ್ನು ತಯಾರು ಮಾಡಲು ಬಳಸುತ್ತಿದ್ದ ಮೆಷೀನರಿಗಳು, ತೆಂಗು ಮತ್ತು ಪಾಮ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ ಎಂದರು.

ವಶಪಡಿಸಿಕೊಂಡಿರುವ ವಸ್ತುಗಳ ವಿವರ:
1. 5 ಮೊಬೈಲ್‌
2. 60 ಲಕ್ಷ ರೂ. ಮೌಲ್ಯದ 4 ಬೊಲೇರೋ ಕಂಪನಿಯ ಗೂಡ್ಸ್ ವಾಹನಗಳು
3. 1,19,640 ರೂ. ನಗದು
4. 56.95.200 ರೂ. ಬೆಲೆಬಾಳುವ 8136 ಲೀಟರ್ ಕಲಬೆರಕೆಯ ತುಪ್ಪ
5. ವಿವಿಧ ನಮೂನೆಯ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಬಾಟಲಿಗಳು, ತೆಂಗು ಮತ್ತು ಪಾಮ್ ಆಯಿಲ್ ತುಂಬಿದ ಕ್ಯಾನುಗಳು

ರಾಜ್ಯದಲ್ಲಿ ಬಹು ಬೇಡಿಕೆಯ ನಂದಿನಿ ತುಪ್ಪದ ಬಗ್ಗೆ ತಿಳಿದುಕೊಂಡ ಆರೋಪಿಗಳು ತಮಿಳುನಾಡು ರಾಜ್ಯದಲ್ಲಿ ಕಲಬೆರೆಕೆ ತುಪ್ಪವನ್ನು ಸಿದ್ದಪಡಿಸಿ ನಕಲಿ ನಂದಿನಿ ತುಪ್ಪದ ಸ್ಯಾಚೆಟ್ ಮತ್ತು ಪ್ಲಾಸ್ಟಿಕ್ ಬಾಟಲಿಗಳಿಗೆ ತುಂಬಿ, ಕೆಎಂಎಫ್ ನ ಅಧಿಕೃತ ಪರವಾನಗಿಯನ್ನು ಪಡೆದು ಇವರೊಂದಿಗೆ ಕೈಜೋಡಿಸಿದ್ದ ಕೆಲವು ವ್ಯಾಪಾರಿಗಳಿಗೆ ಸರಬರಾಜು ಮಾಡುತ್ತಿದ್ದರು ಎಂದರು.

ನಂದಿನಿ ತುಪ್ಪದ ಪ್ಯಾಕೆಟ್ ಗಳಲ್ಲಿ ಕಲಬೆರಕೆ ತುಪ್ಪ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ತಲುಪಿತ್ತು. ಈ ಮಾಹಿತಿ ಆಧರಿಸಿ ಕಳೆದ ನ.14 ರಂದು ಸಿಸಿಬಿ ವಿಶೇಷ ವಿಚಾರಣಾ ದಳ ಮತ್ತು ಕೆಎಂಎಫ್ ಜಾಗೃತ ದಳದ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಚಾಮರಾಜಪೇಟೆಯ ನಂಜಾಂಬ ಆಗ್ರಹಾರದ ಕೃಷ್ಣ ಎಂಟರ್ ಪ್ರೈಸಸ್‌ನ ಮಾಲೀಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಂಬಂದಿಸಿದ ಗೋಡೌನ್ ಮತ್ತು ಅಂಗಡಿಗಳ ಮೇಲೆ ದಾಳಿ ಮಾಡಲಾಯಿತು ಎಂದರು.

ದಾಳಿ ವೇಳೆ ತಮಿಳುನಾಡಿನಿಂದ ಕಲಬೆರಕೆ ತುಪ್ಪವನ್ನು  ಬೆಂಗಳೂರಿನ ಅಂಗಡಿಗಳಿಗೆ ಸಾಗಿಸುತ್ತಿದ್ದ ವಾಹನ ಚಾಲಕ ಮತ್ತು ಆತನು ಉಪಯೋಗಿಸುತ್ತಿದ್ದ ಸರಕು ಸಾಗಾಣಿಕೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಂದ ಕೃತ್ಯಕ್ಕೆ ಬಳಸುತ್ತಿದ್ದ 5 ಮೊಬೈಲ್‌ಗಳು, 60 ಲಕ್ಷ ರೂ. ಮೌಲ್ಯದ 4 ಬೊಲೇರೋ ಕಂಪನಿಯ ಗೂಡ್ಸ್ ವಾಹನಗಳು, 1,19,640 ರೂ. ನಗದು, 56.95.200 ರೂ. ಬೆಲೆಬಾಳುವ 8136 ಲೀಟರ್ ಕಲಬೆರಕೆಯ ತುಪ್ಪ ತುಂಬಿದ ವಿವಿಧ ನಮೂನೆಯ ನಕಲಿ ನಂದಿನಿ ಬ್ರಾಂಡ್‌ನ ಸ್ಯಾಚೆಟ್ ಮತ್ತು ಬಾಟಲಿಗಳು, ತೆಂಗು ಮತ್ತು ಪಾಮ್ ಆಯಿಲ್ ತುಂಬಿದ ಕ್ಯಾನುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Leave a Reply