ಕೆಎಂಎಫ್ ಖಾಸಗಿ ಡೇರಿಯವರಿಗೆ ಬಲ್ಕ್ ಸೇಲ್ ಮಾರಾಟ ನಿಲ್ಲಿಸಬೇಕು

3 years ago

ಆತ್ಮೀಯರೇ ನಮಸ್ಕಾರ

ಸಾಧಾರಣವಾಗಿ ಬೇಸಿಗೆ ಕಾಲದಲ್ಲಿ ಹಾಲು ಉತ್ಪಾದನೆ ಕುಂಠಿತವಾಗುತ್ತದೆ. ಈ ರೀತಿಯ ಸಂದರ್ಭದಲ್ಲಿ ಬೆಂಗಳೂರು ಡೇರಿ ಮತ್ತು ಕೆಎಂಎಫ್ ಅವರು ಟ್ಯಾಂಕರ್ ಗಟ್ಟಲೇ ಹಾಲನ್ನು ಮತ್ತು ಬೆಣ್ಣೆಯನ್ನು ಖಾಸಗಿ ಡೇರಿಯವರಿಗೆ ಬಲ್ಕ್ ಸೇಲ್ ಮೂಲಕ ಮಾರಾಟ ಮಾಡುವುದನ್ನು ನಿಲ್ಲಿಸಬೇಕು.

ಪತಂಜಲಿ ಸೇರಿದಂತೆ ಬಹುತೇಕ ಖಾಸಗಿ ಕಂಪನಿಗಳು, ಶುದ್ಧ ದೇಸಿ ತುಪ್ಪ ತಯಾರಿಸುವವರು ಸ್ವಂತ ಡೇರಿಯನ್ನು ಹೊಂದಿಲ್ಲ. ಯಾವ ರೈತನು ಹಾಲನ್ನು ಅವರಿಗೆ ಮಾರಾಟ ಮಾಡುವುದಿಲ್ಲ. ಹಾಗಾದರೆ ಅವರು ಬೆಣ್ಣೆ ತುಪ್ಪವನ್ನು ಹೇಗೆ ತಯಾರಿಸುತ್ತಾರೆ ? ನಮ್ಮ ರಾಜ್ಯದ ಸಹಕಾರಿ ಸಂಘದ ಹಾಲು ಒಕ್ಕೂಟದದಿಂದ ದೊಡ್ಡ ಪ್ರಮಾಣದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಖರೀದಿಸಿ, ತಮ್ಮ ಗೋಡಾನುಗಳಲ್ಲಿ ಪ್ಯಾಕೆಟ್ ಗಳನ್ನು ಮಾಡಿ ಮಾರುಕಟ್ಟೆ ಮಾಡುತ್ತಾರೆ.

ನಮ್ಮ ರಾಜ್ಯದ ನಂದಿನಿ ಬ್ರಾಂಡಿನ ಹಾಲು ಉತ್ಪನ್ನಗಳು ಜಮ್ಮು ಕಾಶ್ಮೀರ,ಈಶಾನ್ಯ ರಾಜ್ಯಗಳು, ಟಿಬೇಟ್ ಚೀನಾ ನೇಪಾಳದ ಗಡಿ ಪ್ರದೇಶ, ರಾಷ್ಟ್ರದ ರಾಜಧಾನಿ ದಿಲ್ಲಿಯಲ್ಲಿಯೂ ದೊರೆಯುತ್ತದೆ. ಅಲ್ಲಿಯೂ ಸಹ ನಮ್ಮ ಡೀಲರ್ಗಳು ಇದ್ದಾರೆ. ಭಾರತೀಯ ಸೇನೆಗೂ ನಂದಿನಿ ಹಾಲು ಪೂರೈಸಲಾಗುತ್ತಿದೆ. ನೆರೆ ರಾಜ್ಯಗಳಲ್ಲಿ ಕೂಡ ನಂದಿನಿ ಹಾಲು ತುಪ್ಪ ಬೆಣ್ಣೆ ಸಿಹಿ ತಿಂಡಿಗಳು ಮತ್ತು ಹಾಲಿನ ಪೌಡರ್ ಲಭ್ಯವಿರುತ್ತದೆ.

ಮಳೆಗಾಲ ಮತ್ತು ಚಳಿಗಾಲದಲ್ಲಿ ಹುಲ್ಲು ಸೊಪ್ಪು ಯಥೇಚ್ಛವಾಗಿ ದೊರಕುವುದರಿಂದ ಹಾಲು ಉತ್ಪಾದನೆ ಸಹಜವಾಗಿ ಹೆಚ್ಚಿರುತ್ತದೆ. ಆ ಸಂದರ್ಭದಲ್ಲಿ ಹೆಚ್ಚುವರಿ ಹಾಲನ್ನು ಹಾಲಿನ ಪೌಡರಾಗಿ ಪರಿವರ್ತಿಸಲಾಗುತ್ತದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಪೌಷ್ಟಿಕತೆ ನಿವಾರಣೆಗಾಗಿ ಹಾಲನ್ನು ನೀಡಲಾಗುತ್ತಿದೆ. ಈ ಮೂಲಕ ಹೆಚ್ಚುವರಿ ಹಾಲಿನ ಸದ್ಬಳಕೆಯನ್ನು ನಮ್ಮ ಡೈರಿ ಮತ್ತು ಸರ್ಕಾರಗಳು ಮಾಡುತ್ತಿವೆ.

ನಮ್ಮ ರಾಜ್ಯದ ಹಾಲು ಉತ್ಪಾದಕ ರೈತನಿಗೆ ಲೀಟರ್ ಒಂದಕ್ಕೆ ಐದು ರೂಪಾಯಿಗಳ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡುತ್ತಿದೆ.

ರೈತರಿಂದ ಚುನಾವಣೆಯ ಮೂಲಕ ಆಯ್ಕೆಯಾಗಿರುವ ಹಾಲು ಒಕ್ಕೂಟದ ನಿರ್ದೇಶಕರು ಮತ್ತು ಅಧಿಕಾರಿ ವರ್ಗದವರು ಡೇರಿಗಳಲ್ಲಿ ಅನಗತ್ಯ ಖರ್ಚು ವೆಚ್ಚ ಕಡಿಮೆ ಮಾಡಿ, ದೇಶ ವಿದೇಶಗಳ ಪ್ರವಾಸವನ್ನು ನಿಲ್ಲಿಸಿ ಉಳಿತಾಯದ ಹಣವನ್ನು ರೈತರಿಗೆ ಮತ್ತು ಗ್ರಾಹಕರಿಗೆ ವರ್ಗಾಯಿಸಬೇಕು. ಹಾಲು ಉತ್ಪಾದಕರಿಗೆ ಇಂಡಿ ಬೂಸಾ ಮುಂತಾದ ದರಗಳನ್ನು ಕಡಿಮೆ ಮಾಡಬೇಕು.

ಬಹುತೇಕ ನಿಗಮ ಮಂಡಳಿಗಳಿಗೆ ಶಾಸಕರು ವಕ್ಕರಿಸಿಕೊಳ್ಳುವಂತೆ ಇತ್ತೀಚಿನ ವರ್ಷಗಳಲ್ಲಿ KMF ಅಧ್ಯಕ್ಷರಾಗಿ ಶಾಸಕರು ವಕರಿಸಿಕೊಂಡಿದ್ದಾರೆ. ಅದೇ ರೀತಿ ಜಿಲ್ಲಾ ಮತ್ತು ರಾಜ್ಯ ಹಾಲು ಒಕ್ಕೂಟಗಳಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಡೇರಿಯ ಅಧಿಕಾರಿಗಳ ಬದಲಾಗಿ, ಡೇರಿ ತಂತ್ರಜ್ಞಾನ,ಮಾರುಕಟ್ಟೆ, ಪಶು ಸಂಗೋಪನೆ ಯಾವುದೇ ವಿಚಾರದಲ್ಲಿ ಜ್ಞಾನವಿಲ್ಲದ, ಟೆಂಡರ್ ಗಳ ಮೂಲಕ ಅಕ್ರಮ ಮಾರ್ಗದಲ್ಲಿ ಹಣ ದೋಚಬಲ್ಲ ಸಾಮರ್ಥ್ಯವಿರುವ ಅಧಿಕಾರಿಗಳನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಮ್ಮ ರಾಜ್ಯದಲ್ಲಿ ಇತ್ತೀಚಿಗೆ ನೇಮಿಸಲಾಗುತ್ತಿದೆ ಎಂದು ಸಹಕಾರಿ ಧುರೀಣರು ಅಭಿಪ್ರಾಯ ಪಡುತ್ತಾರೆ. ಸರ್ಕಾರದ ಅನಗತ್ಯ ಹಸ್ತಕ್ಷೇಪ ಸಹಕಾರಿ ಸಂಘಗಳಲ್ಲಿ ಕಡಿಮೆಯಾಗಬೇಕು. ರಾಜ್ಯ ಸರ್ಕಾರ ಸಹಕಾರಿ ಹಾಲು ಒಕ್ಕೂಟಕ್ಕೆ ಚಿಕ್ಕಾಸಿನ ನೆರವನ್ನು ಸಹ ನೀಡುವುದಿಲ್ಲ,ಹಾಲು ಉತ್ಪಾದಕರಿಗೆ ನೇರವಾಗಿ ಸಹಾಯಧನ ನೀಡುವುದರ ಹೊರತಾಗಿ. ಆದರೆ ಒಕ್ಕೂಟಗಳಲ್ಲಿ ಅನಗತ್ಯ ಹುದ್ದೆಗಳನ್ನು ಸೃಷ್ಟಿಸಿ ಅದರಲ್ಲಿ ತಮ್ಮ ಪಾಲನ್ನು ರಾಜಕಾರಣಿಗಳು ಪಡೆಯುವುದರಲ್ಲಿ ನಿಸ್ಸೀಮರು.

ಗುಜರಾತಿನ ಆನಂದ್ ನಗರದಲ್ಲಿರುವ ಅಮೂಲ್ ಸಹಕಾರಿ ರೈತರ ಹಾಲು ಒಕ್ಕೂಟವನ್ನು ಪ್ರಾರಂಭಿಸಿದವರು ಈ ದೇಶದ ಹೈನುಗಾರಿಕೆ ಪಿತಾಮಹ ಡಾಕ್ಟರ್ ಕುರಿಯನ್ ಅವರು. ಅಮೂಲ್ ನಿರ್ದೇಶಕ ಮಂಡಳಿಯಲ್ಲಿ ಬಹುತೇಕರು ಶಾಸಕರು ಮತ್ತು ಎಂಪಿ ಗಳೇ ಇದ್ದರು ಸಂಸ್ಥೆಯ ವಿಸ್ತರಣೆ ಅಭಿವೃದ್ಧಿ ಮಾರುಕಟ್ಟೆ ಮುಂತಾದ ಆಯಕಟ್ಟಿನ ಸ್ಥಳಗಳಲ್ಲಿ ವೃತ್ತಿಪರ ಅಧಿಕಾರಿಗಳನ್ನು ನೇಮಿಸಿಕೊಂಡು ಗುಜರಾತಿನ ಬಡ ರೈತರ ಸಂಜೀವಿನಿ ಆಗಿದೆ. ದೇಶ ವಿದೇಶಗಳಲ್ಲಿ ಅಮೂಲ್ ಬ್ರಾಂಡಿನ ಉತ್ಪನ್ನಗಳು ದೊರಕುತ್ತವೆ. ಇದು ಅವರ ವೃತ್ತಿಪರತೆಗೆ ಸಾಕ್ಷಿ.

ನಮ್ಮ ರಾಜ್ಯದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಅನೇಕ ವರ್ಷಗಳಿಂದ ಅಮೂಲ್ ಉತ್ಪನ್ನಗಳು ಸಿಹಿ ತಿನಿಸುಗಳು ಮಾರಾಟವಾಗುತ್ತಿದೆ. ಬೆಂಗಳೂರಿನ ನಗರ ಸಾರಿಗೆ ನಿಲ್ದಾಣಗಳಲ್ಲಿ ಅಮೂಲ್ ಉತ್ಪನ್ನಗಳಿಗೆ ಮಳಿಗೆಗಳನ್ನು ಸಹ ನಮ್ಮ ಘನ ಸರ್ಕಾರವೇ ನೀಡಿದೆ.

ಉದಾರೀಕರಣದ ಯುಗದಲ್ಲಿ ವಿವಿಧ ದೇಶಗಳ ಉತ್ಪನ್ನಗಳು ದಂಡಿಯಾಗಿ ನಮ್ಮ ದೇಶದಲ್ಲಿ ದೊರಕುತ್ತಾ ಸ್ಥಳೀಯ ಉದ್ಯಮಿಗಳನ್ನು ಸ್ಥಳೀಯ ರೈತರನ್ನು ನಾಶ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೀಗಿರುವಾಗ ಅಮುಲ್ ಉತ್ಪನ್ನಗಳು ರಾಜ್ಯದಲ್ಲಿ ಮಾರಾಟವಾಗದಂತೆ ಹೇಗೆ ತಡೆಯುವುದು..

ಆದ್ದರಿಂದ ಸ್ವಾಭಿಮಾನಿ ಕನ್ನಡಿಗರು ನಂದಿನಿ ಹಾಲು ನಂದಿನಿ ಹಾಲಿನ ಉತ್ಪನ್ನಗಳು ಮತ್ತು ನಂದಿನಿ ಸಿಹಿ ತಿನಿಸುಗಳನ್ನು ಮಾತ್ರವೇ ಖರೀದಿ ಮಾಡುವುದರ ಮೂಲಕ ಕೇಂದ್ರ ಮತ್ತು ರಾಜ್ಯದ ಮಾಜಿ ಕೃಷಿ ಸಚಿವ ಕೋಲಾರದ ಗೌರವಾನ್ವಿತ ರಾಜಕಾರಣಿ ಶ್ರೀ ಕೃಷ್ಣಪ್ಪನವರಿಂದ ಸ್ಥಾಪಿತಗೊಂಡ ಸಹಕಾರಿ ಹಾಲು ಉತ್ಪನ್ನವನ್ನು, ಸಹಕಾರಿ ಚಳುವಳಿಯನ್ನು ಮತ್ತು ರಾಜ್ಯದ ಗೋಪಾಲಕರನ್ನು ಉಳಿಸಬೇಕಾಗಿದೆ.

  • ಜಿ ಟಿ ನರೇಂದ್ರ ಕುಮಾರ್, ವಕೀಲರು, ಬೆಂಗಳೂರು

Leave a Reply