ರಾಜ್ಯ ವಿಧಾನಮಂಡಲದ ಇತಿಹಾಸದಲ್ಲೇ ಎಂದೆಂದೂ ಕಂಡರಿಯದ ವಿದ್ಯಮಾನ

1 year ago

ಬೆಂಗಳೂರು: ರಾಜ್ಯ ವಿಧಾನ ಮಂಡಲದ ಇತಿಹಾಸದಲ್ಲೇ ಎಂದೆಂದೂ ಕಂಡರಿಯದ ವಿದ್ಯಮಾನಗಳಿಗೆ ಶುಕ್ರವಾರ ವಿಧಾನಸಭೆ ಸಾಕ್ಷಿಯಾಯಿತು. ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ನಡೆದ ಮಾತಿನ ಚಕಮಕಿ ತೀವ್ರ ಸ್ವರೂಪ ಪಡೆದು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಈ ಮೂಲಕ ಕರ್ನಾಟಕದ ಜನತೆ ತಲೆತಗ್ಗಿಸುವಂತಾಯಿತು. 

ಸಭಾಧ್ಯಕ್ಷರ ಪೀಠದ ಪಕ್ಕದಲ್ಲಿ ನಿಂತು ಬಿಜೆಪಿ ಸದಸ್ಯರು ಕಾಗದ ಪತ್ರಗಳನ್ನು ಹರಿದೆಸೆಯುವ ಮೂಲಕ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಸಿದರು. ಇದರಿಂದ ಸುಗಮ ಕಲಾಪ ಸಾಧ್ಯವಾಗದೆ ಸಭಾಧ್ಯಕ್ಷ ಯು.ಟಿ.ಖಾದರ್ ಸದನವನ್ನು ಕೆಲಕಾಲದವರೆಗೆ ಮುಂದೂಡಿಕೆ ಮಾಡಿದರು.

ಇದಾದ ನಂತರ ಮತ್ತೆ ಸದನದ ಕಲಾಪ  ಆರಂಭವಾಗುತ್ತಿದ್ದಂತೆ ಸದನದ ನಿಯಮಾವಳಿಗಳನ್ನು ಉಲ್ಲಂಘಿಸಿ ಸಭಾಧ್ಯಕ್ಷರ ಪೀಠಕ್ಕೆ ಆಗೌರವ ತೋರಿದ ಆರೋಪದಲ್ಲಿ ಬಿಜೆಪಿಯ 18 ಶಾಸಕರನ್ನು ವಿಧಾನಸಭೆಯ ಕಲಾಪದಿಂದ ಆರು ತಿಂಗಳವರೆಗೆ ಅಮಾನತುಗೊಳಿಸಿ ಸಭಾಧ್ಯಕ್ಷ ಯು ಟಿ ಖಾದರ್ ಆದೇಶಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಸದನ ಆರಂಭವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು. ಈ ವೇಳೆ ತಕ್ಷಣವೇ ಎದ್ದು ನಿಂತ ಬಿಜೆಪಿಯ ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್ ಮತ್ತು ಡಾ. ಅಶ್ವತ್ಥ ನಾರಾಯಣ ಹನಿ ಟ್ರ್ಯಾಪ್ ವಿಷಯ  ಪ್ರಸ್ತಾಪಿಸಿದರು.

ಸಹಕಾರ ಸಚಿವ ರಾಜಣ್ಣ ಅವರು ತಮ್ಮನ್ನು ಹನಿ ಟ್ರ್ಯಾಪ್ ಜಾಲದಲ್ಲಿ ಸಿಲುಕಿಸಲು ನಡೆಸಿದ ಪ್ರಯತ್ನದ ಬಗ್ಗೆ ಸದನದಲ್ಲಿಯೇ ಬಹಿರಂಗಪಡಿಸಿದ್ದಾರೆ. ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದೆ. ಹೀಗಾಗಿ ಇದನ್ನು ನ್ಯಾಯಾಂಗ ತನಿಖೆ ಇಲ್ಲವೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ . ಈಗಾಗಲೇ ಪ್ರಕರಣದ ಬಗ್ಗೆ ಉನ್ನತ ತನಿಖೆ ನಡೆಸುವುದಾಗಿ ಗೃಹಸಚಿವರು ಹೇಳಿದ್ದಾರೆ. ಹೀಗಾಗಿ ಈ ಕುರಿತಂತೆ ಚರ್ಚೆ ಅನಗತ್ಯ ಎಂದರು.

ಪ್ರಕರಣದಲ್ಲಿ ಯಾರೇ ಆಗಿದ್ದರೂ  ರಕ್ಷಣೆ  ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಸಚಿವ ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನಃ ಪ್ರಸ್ತಾಪಿಸುವುದು ತರವಲ್ಲ. ಹನಿ ಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ ಎಂದರು.

ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.

ಆದರೆ ಇದನ್ನು ವಿರೋಧಿಸಿದ ಬಿಜೆಪಿ ಸದಸ್ಯರು ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು, ಇಲ್ಲವೇ ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು. ಇದರ ನಡುವೆ ಸಿದ್ದರಾಮಯ್ಯ ಬಜೆಟ್ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಆರಂಭಿಸಿದರು.

ಇದನ್ನು ವಿರೋಧಿಸಿದ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗಿ ಸಿಎಂ ಉತ್ತರಕ್ಕೆ ಅಡ್ಡಿಪಡಿಸಲು ಮುಂದಾದರು. ಅಷ್ಟೆ ಅಲ್ಲ ಸಭಾಧ್ಯಕ್ಷರ ಪೀಠದ ಮುಂದೆ ಧಾವಿಸಿ ಧರಣಿ ಆರಂಭಿಸಿದರು. ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಉತ್ತರ ನೀಡುವುದನ್ನು ಮುಂದುವರೆಸಿದರು. ಇದರಿಂದ ಕೆರಳಿದ ಬಿಜೆಪಿಯ ಸಿ.ಕೆ.ರಾಮಮೂರ್ತಿ, ಮಹೇಶ್ ಟೆಂಗಿನಕಾಯಿ ಸೇರಿದಂತೆ ಹಲವು ಶಾಸಕರು ಸಿಡಿಗಳನ್ನು ಹಿಡಿದು ಸಭಾಧ್ಯಕ್ಷರ ಪೀಠದ ಪಕ್ಕಕ್ಕೆ ನುಗ್ಗಿ ಅವರ ಸಮೀಪದಲ್ಲಿ ನಿಂತು ಘೋಷಣೆ  ಕೂಗತೊಡಗಿದರು. ಕೂಡಲೆಗಳು ಸದನದ ಮಾರ್ಷಲ್ ಗಳು ಬಂದು ಸಭಾಧ್ಯಕ್ಷರ ಪೀಠವನ್ನು ಸುತ್ತುವರಿದರು. ಸಭಾಧ್ಯಕ್ಷರು ಮಾರ್ಷಲ್ ಗಳನ್ನು ಹೊರಗೆ ಕಳುಹಿಸಿ ಧರಣಿ ನಿರತ ಶಾಸಕರನ್ನು ಕೆಳಗೆ ಹೋಗುವಂತೆ ಸೂಚಿಸಿದರು. ಆದರೆ ಇದನ್ನು ಲೆಕ್ಕಿಸದೆ ಬಿಜೆಪಿ ಶಾಸಕರು ಘೋಷಣೆ ಮೊಳಗಿಸುತ್ತಾ ಕಾಗದ ಪತ್ರಗಳನ್ನು ಹರಿದೆಸೆದರು.

ಇದನ್ನು ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಭಾಧ್ಯಕ್ಷರ ಪೀಠ ಬಿಟ್ಟು ಕೆಳಗಿಳಿಯುವಂತೆ  ಹಲವು ಬಾರಿ ಸೂಚನೆ ನೀಡಿದರು. ವಿಧಾನಸಭೆಯ ಜಂಟಿ ಕಾರ್ಯದರ್ಶಿಯವರು ಸಭಾಧ್ಯಕ್ಷರ ಬಳಿ ಬಂದು ಶಾಸಕರನ್ನು ಕೆಳಗಿಳಿಸುವಂತೆ ಸ್ಪೀಕರ್ ಅವರಿಗೆ ಸಲಹೆ ನೀಡಿದರು. ಸಭಾಧ್ಯಕ್ಷರ ಸೂಚನೆ ಹೊರತಾಗಿಯೂ ಶಾಸಕರು ಕೆಳಗಿಳಿಯದೆ ಅಲ್ಲೇ ನಿಂತಿದ್ದರು. ಸಿದ್ದರಾಮಯ್ಯ ಅವರು, ಶಾಸಕರು ಕೆಳಗೆ ಬರಬೇಕು. ಇಲ್ಲವಾದರೆ ಮಾರ್ಷಲ್ ಗಳು ತಳ್ಳುತ್ತಾರೆ. ನಿಮಗೆ ತಳ್ಳಿಸಿಕೊಳ್ಳಲು ಆಸೆಯೇ? ಎಂದು ಏರಿದ ದನಿಯಲ್ಲಿ ಎಚ್ಚರಿಕೆ ನೀಡಿದರು. 

ಈ ಹಂತದಲ್ಲಿ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡುವುದಾಗಿ ಪ್ರಕಟಿಸಿದರು. ಆದರೆ ಸಿದ್ದರಾಮಯ್ಯ ಸದನ ಮುಂದೂಡುವುದು ಬೇಡ. ಹಣಕಾಸು ಮಸೂದೆ ಸೇರಿದಂತೆ ಕೆಲವು ವಿಧೇಯಕಗಳ ಅಂಗೀಕಾರವನ್ನು ಪೂರ್ಣಗೊಳಿಸಿದ ನಂತರ ಕಲಾಪ ಮುಂದೂಡುವಂತೆ ಸಲಹೆ ಮಾಡಿದರು. ಇದಕ್ಕೆ ಸಭಾಧ್ಯಕ್ಷರು ಸಮ್ಮತಿಸಿದ ಬಳಿಕ ಸಿದ್ದರಾಮಯ್ಯ ವಿಧೇಯಕ ಮಂಡನೆ ಆರಂಭಿಸಿದರು. ಇದರಿಂದ ಕೆರಳಿದ ಕೆಲ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಮುಂದಿದ್ದ ಕಾಗದ ಪತ್ರಗಳನ್ನು ಕಸಿದುಕೊಂಡು ಹರಿದು ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಶಾಸಕರತ್ತ ಹಾಗೂ ಸಭಾಧ್ಯಕ್ಷರ ಪೀಠದತ್ತ ತೂರಿದರು. ಕೆಲವು ಕಾಗದಗಳು ಪೀಠದ ಮುಂದೆ ಬಿದ್ದರೆ, ಇನ್ನು ಕೆಲವು ಯು ಟಿ ಖಾದರ್ ಅವರತ್ತ ಹೋಗುತ್ತಿದ್ದವು. ಇವುಗಳಲ್ಲಿ ಕೆಲವನ್ನು ಮಾರ್ಷಲ್ ಗಳು ತಡೆದರು. ಅಲ್ಲದೆ ಇವರು ಹರಿದೆಸೆದ ಕಾಗದ ಪತ್ರಗಳು ಸಿದ್ದರಾಮಯ್ಯ ಅವರ ತಲೆಯ ಮೇಲೆ ಬೀಳುತೊಡಗಿದವು. ಇಷ್ಟೆಲ್ಲ ಘಟನೆಗಳು ನಡೆಯುತ್ತಿದ್ದ ವೇಳೆ ಆಡಳಿತ ಪಕ್ಷದ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಸದನದಲ್ಲಿ ಹಾಜರಿದ್ದರು. ಈ ನಡುವೆ ಸದನ ಪ್ರವೇಶಿಸಿದ ಸಚಿವ ಭೈರತಿ ಸುರೇಶ್, ಶಾಸಕರಾದ ರಂಗನಾಥ್, ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಹಲವರು ಸಿದ್ದರಾಮಯ್ಯನವರ ಸುತ್ತ ಕಾವಲಿಗೆ ನಿಂತರು. ಕಾಂಗ್ರೆಸ್ನ ಇತರ ಶಾಸಕರು ಸಿಎಂ ಹಿಂಭಾಗದ ಸಾಲುಗಳಲ್ಲಿ ಬಂದು ಜಮಾಯಿಸಿದರು.

ಈ ವೇಳೆ ಸಿಎಂ ಬಳಿ ನಿಂತಿದ್ದ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನೀವೇನೂ ರೌಡಿಗಳೇ? ಹೊಡೆಯುತ್ತೀರಾ ಬನ್ನಿ ನೋಡೋಣ ಎಂದೆಲ್ಲಾ ವಾಗ್ವಾದಗಳು ವಿನಿಮಯವಾದವು. ಅತ್ತ ಸ್ಪೀಕರ್ ಅವರ ಮುಖಕ್ಕೆ ಕಾಗದಪತ್ರಗಳು ತಾಗದಂತೆ ಮಾರ್ಷಲ್ಗಳು ಕೈ ಅಡ್ಡ ಇಟ್ಟು ತಡೆದರು.

ಗದ್ದಲ ಜೋರಾದಾಗ ವಿಪಕ್ಷಗಳ ಎಲ್ಲಾ ಶಾಸಕರು ಸದನದ ಬಾವಿಯಲ್ಲಿ ಜಮಾಯಿಸಿ ಜೋರು ಗಲಾಟೆ ಮಾಡಿದರು. ಸದನದ ಹೊರಗಿದ್ದ ಎಲ್ಲಾ ಮಾರ್ಷಲ್ ಗಳು ಒಳಗೆ ಧಾವಿಸಿ ರಕ್ಷಣೆಗೆ ನಿಂತರು. ಇತ್ತ ಸಿಎಂ ಬಳಿಯೂ ಗದ್ದಲ ಹೆಚ್ಚಾದಾಗ ಒಂದು ಹಂತದಲ್ಲಿ ಸಿದ್ದರಾಮಯ್ಯ ಬಳಿ ನಿಂತಿದ್ದ ಸಚಿವ ಭೈರತಿ ಸುರೇಶ್ ಸಿಟ್ಟಿನಿಂದ ಕಿರುಪುಸ್ತಕವನ್ನು ವಿರೋಧ ಪಕ್ಷಗಳತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು. 

ಗದ್ದಲದ ನಡುವೆಯೂ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2025, ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು (ತಿದ್ದುಪಡಿ) ವಿಧೇಯಕ-2025, ಕರ್ನಾಟಕ ಧನ ವಿನಿಯೋಗ ವಿಧೇಯಕ-2025, ಕರ್ನಾಟಕ ಧನ ವಿನಿಯೋಗ (ಸಂಖ್ಯೆ-2) ವಿಧೇಯಕ-2025, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಗಳು ಧ್ವನಿ ಮತದ ಮೂಲಕ ಅಂಗೀಕಾರಗೊಂಡವು. ಗದ್ದಲ ಮಿತಿಮೀರಿದಾಗ ಅನಿವಾರ್ಯವಾಗಿ ಕಲಾಪವನ್ನು ಸಭಾಧ್ಯಕ್ಷರು 15 ನಿಮಿಷಗಳ ಕಾಲ ಮುಂದೂಡಿದರು.

ಅಮಾನತು: ಮಧ್ಯಾಹ್ನ ಮತ್ತೆ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಘೋಷಣಾ ಫಲಕ ಹಿಡಿದು ಪ್ರತಿಭಟನೆ ಮುಂದುವರಿಸಿದರು. ಇದರ ನಡುವೆಯೇ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ಕೋರಿದರು.

ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಗದ್ದಲ ತೀವ್ರಗೊಳಿಸಿದರು. ಆಗ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬೆಳಗಿನ ಕಲಾಪದ ವೇಳೆ ನಡೆದ ಅಹಿತಕರ ಘಟನೆಯನ್ನು ಪ್ರಸ್ತಾಪಿಸಿ ಅದಕ್ಕೆ ಸಂಬಂಧಿಸಿದಂತೆ  ಬಿಜೆಪಿ ನಾಯಕರಾದ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಮುನಿರತ್ನ ಸೇರಿದಂತೆ 18 ಶಾಸಕರನ್ನು ಶಾಸನಸಭೆಯ ಕಲಾಪದಿಂದ ಅನರ್ಹಗೊಳಿಸುವ ಪ್ರಸ್ತಾಪ ಮಂಡಿಸಿದರು.

ಇದನ್ನು ಬೆಂಬಲಿಸಿ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್, ಸಭಾಧ್ಯಕ್ಷರ ಪೀಠಕ್ಕೆ ಅಗೌರವವನ್ನು ಸಹಿಸಲು ಸಾಧ್ಯವಿಲ್ಲ. ಕರ್ನಾಟಕ ವಿಧಾನಸಭೆಗೆ ದೇಶದಲ್ಲೇ ಅತ್ಯಂತ ಹೆಚ್ಚು ಗೌರವವಿದೆ. ಇಂತಹ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಂಡ ಶಾಸಕರನ್ನು ಆರು ತಿಂಗಳ ಕಾಲ ಕಲಾಪದಿಂದ ಅಮಾನತುಗೊಳಿಸುವ ಸಭಾಧ್ಯಕ್ಷರ ನಿರ್ಣಯವನ್ನು ಬೆಂಬಲಿಸುತ್ತೇವೆ ಎಂದರು. 

ಆನಂತರ ಈ ನಿರ್ಣಯವನ್ನು ದ್ವನಿ ಮತದ ಮೂಲಕ ಅನುಮೋದನೆ ಪಡೆದುಕೊಂಡ ಸಭಾಧ್ಯಕ್ಷರು ಬಳಿಕ ಬಿಜೆಪಿ ಸದಸ್ಯರಾದ ದೊಡ್ಡನಗೌಡ ಪಾಟೀಲ್, ಅಶ್ವತ್ಥ ನಾರಾಯಣ, ಎಸ್.ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್ ಪಟೇಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯನ್, ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿ ಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರಿಶ್ ಬಿ.ಪಿ, ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ, ಚಂದ್ರು ಲಮಾಣಿ ಸೇರಿ 18 ಶಾಸಕರನ್ನು ಅಮಾನತುಪಡಿಸಿರುವ ತೀರ್ಮಾನ ಪ್ರಕಟಿಸಿ ಅವರನ್ನು ಸದನದಿಂದ ಹೊರ ಹೋಗುವಂತೆ ಸೂಚಿಸಿದರು.

ಇದನ್ನು ವಿರೋಧಿಸಿ ಬಿಜೆಪಿ ಸದಸ್ಯರು ದೊಡ್ಡ ಧ್ವನಿಯಲ್ಲಿ ಘೋಷಣೆ ಮೊಳಗಿಸುತ್ತಿದ್ದಂತೆ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿ ಕಲಾಪವನ್ನು ಮತ್ತೆ ಕೆಲಕಾಲ ಮುಂದೂಡಿದರು. ಇದಾದ ನಂತರ ಸದನದಿಂದ ಹೊರಹೋಗದ ಅಮಾನತುಗೊಂಡ 18 ಬಿಜೆಪಿ ಶಾಸಕರನ್ನು ಮಾರ್ಷಲ್ ಗಳು ಎತ್ತಿಕೊಂಡು ಬಂದು ಹೊರಹಾಕಿದರು.

Leave a Reply