ಬೆಂಗಳೂರು: ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದ ಪ್ರತಿಪಕ್ಷ ಸದಸ್ಯರು ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಬಿಜೆಪಿಯ ಹತ್ತು ಸದಸ್ಯರನ್ನು ಕಲಾಪದಿಂದ ಅಮಾನತುಗೊಳಿಸಿದ ಸಭಾಧ್ಯಕ್ಷರ ನಿಲುವು ವಿರೋಧಿಸಿ ಪ್ರತಿಪಕ್ಷ ಸದಸ್ಯರು ವಿಧಾನ ಮಂಡಲದ ಕಲಾಪ ಬಹಿಷ್ಕರಿಸಿದರು.
ಬೆಂಗಳೂರಿನಲ್ಲಿ ನಡೆದ ಪ್ರತಿ ಪಕ್ಷಗಳ ಮುಖಂಡರ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ನಾಯಕರಿಗೆ ಶಿಷ್ಟಾಚಾರದ ಹೆಸರಲ್ಲಿ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡು ನಿಯಮ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ ಪ್ರತಿಪಕ್ಷ ಸದಸ್ಯರು ಸರ್ಕಾರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿ ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದರು. ಧರಣಿಯ ನಡುವೆ ಕಲಾಪ ಮುಂದುವರಿಸದ ಸರ್ಕಾರದ ಧೋರಣೆ ಖಂಡಿಸಿ ಕೆಲವು ಸದಸ್ಯರು ಕಾಗದ ಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ತೂರಿದ್ದರು.
ಇದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷ ಯು.ಟಿ.ಖಾದರ್ ಬಿಜೆಪಿಯ ಹತ್ತು ಶಾಸಕರನ್ನು ಪ್ರಸಕ್ತ ಅಧಿವೇಶನ ಮುಗಿಯುವ ವರೆಗೆ ಕಲಾಪದಿಂದ ಅಮಾನತುಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಪ್ರತ್ಯೇಕವಾಗಿ ಸಭೆ ನಡೆಸಿ,ಅಮಾನತು ಆದೇಶ ವಿರೋಧಿಸಿ ಕಲಾಪ ಬಹಿಷ್ಕರಿಸಲು ನಿರ್ಧರಿಸಿದರು.
ಇದರ ನಡುವೆ ಉಭಯ ಸದನಗಳ ಕಲಾಪ ಆರಂಭವಾಯಿತು. ಕಲಾಪದಲ್ಲಿ ಪ್ರತಿಪಕ್ಷದ ಯಾವೊಬ್ಬ ಶಾಸಕರು ಹಾಜರಾಗಲಿಲ್ಲ. ವಿಧಾನಸಭೆಯಲ್ಲಿ ಕೇವಲ ಗಾಲಿ ಜನಾರ್ಧನ ರೆಡ್ಡಿ ಮಾತ್ರ ವಿಪಕ್ಷಗಳ ಸಾಲಿನಲ್ಲಿ ಕೂತಿದ್ದು, ವಿಶೇಷವಾಗಿತ್ತು. ವಿಪಕ್ಷಗಳಿಲ್ಲದೆ ಎರಡೂ ಸದನಗಳಲ್ಲಿ ಕಲಾಪಗಳು ನಡೆದವು.
ಬಿಜೆಪಿ ಧರಣಿ: ಮತ್ತೊಂದೆಡೆ ಕಲಾಪ ಬಹಿಷ್ಕರಿಸಿದ ಬಿಜೆಪಿ ಸದಸ್ಯರು ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಕೆಲ ಕಾಲ ಧರಣಿ ನಡೆಸಿದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುತ್ತಿದೆ. ಸಭಾಧ್ಯಕ್ಷರು ಆಡಳಿತ ಪಕ್ಷದವರಂತೆ ವರ್ತಿಸಿದ್ದಾರೆ. ತಾರತಮ್ಯ ಮಾಡಿದ್ದಾರೆ. ಯಾರದ್ದೊ ಆಣತಿಯನ್ನು ಪಾಲಿಸುವಂತೆ ನಮ್ಮ ಹತ್ತು ಶಾಸಕರನ್ನು ಅಮಾನತ್ತು ಮಾಡಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡು ಅಪಮಾನ ಮಾಡಿದೆ. ಇದನ್ನು ಪ್ರಶ್ನಿಸಿದಾಗ ಪ್ರತಿಪಕ್ಷದವರನ್ನು ದಮನಕಾರಿಯನ್ನಾಗಿ ನೋಡುತ್ತಿದೆ. ತಪ್ಪನ್ನು ಮುಚ್ಚಿಕೊಳ್ಳಲು ಸರಿ ಎಂದು ವಾದಿಸುತ್ತಿದ್ದಾರೆ. ಇದರ ವಿರುದ್ಧ ನಾವು ರಾಜ್ಯಪಾಲರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ಹಿರಿಯ ನಾಯಕ ಆರ್.ಅಶೋಕ್ ಮಾತನಾಡಿ, ಸಭಾಧ್ಯಕ್ಷರಾದವರು ಪಕ್ಷಾತೀತವಾಗಿ ವರ್ತಿಸಬೇಕು. ಯು.ಟಿ. ಖಾದರ್ ಅವರು ವಿರೋಧ ಪಕ್ಷಗಳ ಸಭೆಗೆ ಬಂದಿದ್ದ ಸೋನಿಯಾಗಾಂಧಿ ಹಾಗೂ ರಾಹುಲ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗೆಯೇ ಸರ್ಕಾರ ಐಎಎಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿರುವ ವಿರುದ್ಧ ಸದನದಲ್ಲಿ ಹೋರಾಟ ಮಾಡಿ ನ್ಯಾಯ ಕೇಳಿದ್ದೇವು. ಇದನ್ನೆಲ್ಲಾ ಪ್ರಶ್ನೆ ಮಾಡಿದ್ದಕ್ಕೆ ನಮ್ಮನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಕ್ರಮವನ್ನು ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ಹೇಳಿದರು.
ನಂತರ ವಿಧಾನಸೌಧದಿಂದ ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ ವಿಧಾನಸಭೆಯಲ್ಲಿ ನಡೆದ ಘಟನಾವಳಿಗಳು ಮತ್ತು ಗಣ್ಯರ ಆತಿಥ್ಯಕ್ಕೆ ಐಎಸ್ಎಸ್ ಅಧಿಕಾರಿಗಳ ಬಳಕೆಯನ್ನು ಎಳೆಎಳೆಯಾಗಿ ಬಿಡಿಸಿ ದೂರು ನೀಡಲಾಯಿತು.
ಧರಣಿಯಿಂದ ದೂರವುಳಿದ ಜೆಡಿಎಸ್ ಸದಸ್ಯರು ನಂತರ ಬಿಜೆಪಿ ಸದಸ್ಯರ ಜೊತೆ ರಾಜಭವನಕ್ಕೆ ಪಾದಯಾತ್ರೆಯಲ್ಲಿ ತೆರಳಿ ರಾಜ್ಯಪಾಲರಿಗೆ ಸರ್ಕಾರ ಮತ್ತು ಸಭಾಧ್ಯಕ್ಷರ ವಿರುದ್ಧ ದೂರು ನೀಡಿದರು.
ಹಠಮಾರಿ ಧೋರಣೆ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರ ಮತ್ತು ಸಭಾದ್ಯಕ್ಷರು ಹಠಮಾರಿ ಧೋರಣೆಯಿಂದ ಸದನ ನಡೆಸುವುದು ಸರಿಯೇ? 125 ವರ್ಷಗಳ ಇತಿಹಾಸವಿರುವ ಪಕ್ಷಕ್ಕೆ ಅಧೋಗತಿ ಹೋಗುವ ಪರಿಸ್ಥಿತಿ ಬರಬಹುದು. ಎಚ್ಚರಿಕೆಯಿಂದಿರಿ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ನಡೆಸಿ ಎಂದು ಸಲಹೆ ಮಾಡಿದರು.
ನಿನ್ನೆ ವಿಧಾನಸಭೆಯಲ್ಲಿ ನಡೆದಿರುವ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷವೇ ಕಾರಣ. ದೇಶದ ಹಲವು ಪಕ್ಷಗಳನ್ನು ಸೇರಿ ಮಹಾಘಟ ಬಂಧನ್ ಮಾಡಿದ್ದರು. ಆ ಸಭೆಗೆ ಗಣ್ಯರನ್ನು ಸ್ವಾಗತಿಸಲು ಹಿರಿಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಭಾಧ್ಯಕ್ಷರ ಕಚೇರಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನಾವೇನು ತಪ್ಪೇ ಮಾಡಿಲ್ಲ ಎಂಬ ರೀತಿ ಕಾಂಗ್ರೆಸ್ ನಾಯಕರು ಪ್ರತಿಷ್ಠೆ ಮಾಡಿದರು. ಎರಡು ನಿಮಿಷದಲ್ಲಿ ಆ ಸಮಸ್ಯೆ ಬಗೆಹರಿಸಬಹುದಿತ್ತು. ಇನ್ನು ಮುಂದೆ ಈ ರೀತಿಯಾಗುವುದಿಲ್ಲ ಎಂದು ಭರವಸೆ ನೀಡಿದ್ದರೆ ಸಾಕಿತ್ತು. ವಿಷಾದ ವ್ಯಕ್ತಪಡಿಸುವ ಅವಶ್ಯಕತೆಯೂ ಇರಲಿಲ್ಲ ಎಂದರು.
ರಾಜ್ಯಪಾಲರಿಗೆ ವರದಿ: ಇದಕ್ಕೂ ಮುನ್ನ ವಿಧಾನಸಭಾದ್ಯಕ್ಷ ಯು.ಟಿ.ಖಾದರ್ ಅವರು ರಾಜ್ಯಪಾಲರ ತಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ವಿಧಾನಸಭೆಯಲ್ಲಿ ನಿನ್ನೆ ನಡೆದ ಬೆಳವಣಿಗೆಗಳ ಬಗ್ಗೆ ಸಮಗ್ರ ವರದಿ ನೀಡಿದರು.




