ತಕ್ಷಣ 10 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಅನುಮತಿ: ಮಧು ಬಂಗಾರಪ್ಪ

3 years ago

#Permission #hire #guest #teachers #immediately #MadhuBangarappa

ಬೆಂಗಳೂರು: ಕೆಲವು ಕಡೆ ಶಿಕ್ಷಕರ ಕೊರತೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಅದನ್ನು ನಿವಾರಿಸಲು ತಕ್ಷಣವೇ 10 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿಯವರು ಅನುಮತಿ ನೀಡಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ 43 ಸಾವಿರ ಅತಿಥಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಖಾಯಂ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೋವಿಡ್ ವೇಳೆ ಕಂಡುಬಂದ ಶೈಕ್ಷಣಿಕ ಹಿನ್ನಡೆಯನ್ನು ಸರಿದೂಗಿಸಲು ಕಳೆದ ವರ್ಷ ಕಲಿಕಾ ಚೇತರಿಕೆ ಜಾರಿಗೊಳಿಸಲಾಗಿತ್ತು, ಈ ವರ್ಷ 32.44 ಲಕ್ಷ ಮಕ್ಕಳಿಗಾಗಿ ಕಲಿಕಾ ಬಲವರ್ಧನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದರು.

ದೇಶದಲ್ಲೇ ಪ್ರಥಮ ಬಾರಿಗೆ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮೂರನೇ ಬಾರಿ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿದೆ. ಎಸ್ಎಸ್ಎಲ್ಸಿ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರು, ಪಿಯುಸಿಯ ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಪದವಿಗೆ ಸೇರುವ ಅವಕಾಶವಿದೆ. ಈ ವಿಷಯದಲ್ಲಿ ಉನ್ನತ ಶಿಕ್ಷಣ ಇಲಾಖೆ ನನಗೆ ಉತ್ತಮ ಸಹಕಾರ ನೀಡುತ್ತಿದೆ. ಇದರಿಂದ ಅನುತ್ತೀರ್ಣರಾದ ಮಕ್ಕಳ ಒಂದು ವರ್ಷ ವ್ಯಯವಾಗುವುದು ತಪ್ಪುತ್ತದೆ. ಪೋಷಕರು, ಮಕ್ಕಳು ಹಾಗೂ ಶಿಕ್ಷಕರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದರು.

ಶಿಕ್ಷಣ ಇಲಾಖೆಯ ಸುಧಾರಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳಲ್ಲಿನ ಪೌಷ್ಠಿಕತೆಯ ಹೆಚ್ಚಳಕ್ಕೆ ವಾರಕ್ಕೆ 2 ಮೊಟ್ಟೆಯಂತೆ 58 ಲಕ್ಷ ಮಕ್ಕಳಿಗೆ ವಾರ್ಷಿಕ 258 ಕೋಟಿ ರೂ. ವೆಚ್ಚದಲ್ಲಿ ಮೊಟ್ಟೆ ವಿತರಣೆ ಮಾಡಲಾಗುತ್ತದೆ. 10 ನೇ ತರಗತಿಯ ಮಕ್ಕಳವರೆಗೂ ಮೊಟ್ಟೆ ವಿತರಣೆಯನ್ನು ವಿಸ್ತರಿಸಲಾಗಿದೆ ಎಂದರು.

Leave a Reply