ರೈತ ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಜನಾಂದೋಲನ

2 years ago

#People #movement #against #antifarmer #labour #antipeople #policies #mangalore

ಮಂಗಳೂರು: ಅಕ್ಟೋಬರ್ 29ರಂದು ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಜಂಟಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ ಹೇಳಿದೆ.

ಕೇಂದ್ರ ಸರ್ಕಾರದ ರೈತ ಕಾರ್ಮಿಕ ವಿರೋಧಿ ಹಾಗೂ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ವಿದ್ಯುತ್ ಹಾಗೂ ರೈಲ್ವೇ ಖಾಸಗೀಕರಣದ ವಿರುದ್ಧ ಪ್ರಬಲ ಜನಾಂದೋಲನ ರೂಪಿಸಲು ಹಾಗೂ ಜನಪರ ಪರ್ಯಾಯ ನೀತಿಗಳಿಗಾಗಿ ಆಗ್ರಹಿಸಿ ಅಕ್ಟೋಬರ್‌ 29ರಂದು ಭಾನುವಾರ ಬೆಳಿಗ್ಗೆ 10ಕ್ಕೆ ಮಂಗಳೂರು ನಗರದ ಬಲ್ಮಠದಲ್ಲಿರುವ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಹಾಗೂ ಜನಪರ ಸಂಘಟನೆಗಳ ದ.ಕ.ಜಿಲ್ಲಾ ಮಟ್ಟದ ಜಂಟಿ ಸಮಾವೇಶವು ಜರುಗಲಿದೆ ಎಂದು ರೈತ ಕಾರ್ಮಿಕ ಜನಪರ ಸಂಘಟನೆಗಳ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಒಳ್ಳೆಯ ದಿನಗಳು ಬರಲಿದೆ ಎಂದು ದೇಶದ ಜನತೆಗೆ ಮಂಕುಬೂದಿ ಎರಚಿ ಅಧಿಕಾರದ ಗದ್ದುಗೆಯೇರಿ ಕಳೆದ 9 ವರ್ಷಗಳಿಂದ ಜನಸಾಮಾನ್ಯರ ಬದುಕನ್ನು ಸರ್ವನಾಶಗೊಳಿಸಿದ ಕೇಂದ್ರದ ನರೇಂದ್ರ ಮೋದಿ ಸರಕಾರವು ನಿತ್ಯನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದೆ ಎಂದು ಒಕ್ಕೂಟ ಆರೋಪಿಸಿದೆ.

ದೇಶಕ್ಕೆ ಅನ್ನ ನೀಡುವ ರೈತರ ಬದುಕಿಗೆ ಮಾರಕವಾಗುವ ಕಾನೂನುಗಳನ್ನು ಜಾರಿಗೊಳಿಸಲು ಸತತ ಪ್ರಯತ್ನ ನಡೆಸುವ ಕೇಂದ್ರ ಸರಕಾರ ದೇಶದ ಕ್ರಷಿ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತಿದೆ. ಸಮಾಜದಲ್ಲಿ ಸಂಪತ್ತನ್ನು ಸೃಷ್ಠಿಸುವ ಕಾರ್ಮಿಕ ವರ್ಗದ 29 ಪ್ರಮುಖ ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ರೂಪಿಸಿ ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಪಿತೂರಿ ನಡೆಸುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಕೈಗಾರಿಕೆಗಳ ತಾಯಿ ಹಾಗೂ ಆಧುನಿಕ ನಾಗರಿಕ ಸಮಾಜದ ಕೇಂದ್ರ ನರಮಂಡಲದಂತೆ ಕಾರ್ಯ ನಿರ್ವಹಿಸುವ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಸರಕಾರ ಮುಂದಾಗಿದೆ ಹಾಗೂ ಜನರ ಜೀವನಾಡಿಯಾದ ರೈಲ್ವೇ ಕ್ಷೇತ್ರವನ್ನೂ ಕೂಡ ಖಾಸಗೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಗೆ ಗಂಭೀರ ಅಪಾಯ ಬಂದೊದಗಿದೆ. ಇಂತಹ ಸಂಕಷ್ಟದ ಕಾಲಘಟ್ಟದಲ್ಲಿ ದೇಶವನ್ನು ಉಳಿಸಲು ಮತ್ತು ಜನತೆಯ ಬದುಕನ್ನು ರಕ್ಷಿಸಲು ದೇಶದ ಸಮಸ್ತ ಜನತೆ ಒಂದಾಗಬೇಕಾಗಿದೆ ಎಂದು ಕರೆನೀಡಿದೆ.

ಈ ನಿಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಬ್ರಹತ್ ಹೋರಾಟ ನಡೆಯಲಿದ್ದು, ಅದರ ವ್ಯಾಪಕ ತಯಾರಿಗಾಗಿ ಹಲವು ವಿಧದ ಕಾರ್ಯಕ್ರಮ ಹೋರಾಟಗಳನ್ನು ದ.ಕ.ಜಿಲ್ಲೆಯಲ್ಲಿಯೂ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದೆ.

ಸಮಾವೇಶದಲ್ಲಿ ಪ್ರಧಾನ ಭಾಷಣಕಾರರಾಗಿ CITU ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಹಾಗೂ AITUC ರಾಜ್ಯ ಉಪಾಧ್ಯಕ್ಷ ಬಿ.ಅಮ್ಜದ್ ಭಾಗವಹಿಸಲಿದ್ದು, ಉಳಿದಂತೆ ಒಕ್ಕೂಟದಲ್ಲಿರುವ ಎಲ್ಲಾ ಪ್ರಧಾನ ಸಂಘಟನೆಗಳ ಪ್ರಮುಖರು ಭಾಷಣ ಮಾಡಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರದ ನೀತಿಗಳಿಂದ ಕಂಗೆಟ್ಟ ರೈತ ಕಾರ್ಮಿಕ ವಿದ್ಯಾರ್ಥಿ ಯುವಜನ ಮಹಿಳಾ ದಲಿತ ಆದಿವಾಸಿ ಜನಪರ ಸಂಘಟನೆಗಳ ಪ್ರಮುಖ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಂಟಿ ವೇದಿಕೆಯ ಪ್ರಧಾನ ಸಂಚಾಲಕ ಸುನಿಲ್ ಕುಮಾರ್ ಬಜಾಲ್ ಜನಸಾಮಾನ್ಯರಲ್ಲಿ ವಿನಂತಿಸಿದ್ದಾರೆ.

Leave a Reply