ಸಚಿವ ಸುಧಾಕರ್ ಹಳೆಯ ವಿಡಿಯೋ ವೈರಲ್: ಬಿಜೆಪಿ – ಕಾಂಗ್ರೆಸ್ ನಡುವೆ ವಾಗ್ವಾದ

3 years ago

#Minister #DSudhakar #video #viral #Argument #BJP #Congress

ಬೆಂಗಳೂರು: ಯೋಜನಾ ಸಚಿವ ಡಿ.ಸುಧಾಕರ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸಚಿವ ಸುಧಾಕರ್ ‘ಹೇ ಕೇಳಮ್ಮ ಮಾದಕ್ಕ ಕೇಳು. ಹೇ ಕೇಳಮ್ಮ ಸುಮ್ಮನೆ ನಂಗೆ ರೇಗಿಬಿಡುತ್ತೆ ನನ್ನತ್ರ ಗಾಂಚಾಲಿ, ಗಿಂಚಾಲಿ ಎಲ್ಲ ನಡೋಯಲ್ಲ. ಆಂಧ್ರದಲ್ಲಿ ಮಚ್ಚು ಕೊಡಲಿ ಇಟ್ಕೊಂಡು ಓಡಾಡಿದ್ದೀನಿ. ಯಲಹಂಕ ಏನು ದೊಡ್ಡದಲ್ಲ” ಎಂದು ಹೇಳಿದ್ದಾರೆ.

ಈ ಕುರಿತಂತೆ ಡಿ.ಸುಧಾಕರ್ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಹಾಗೂ ಇತರೆ ಆರೋಪಗಳ ದೂರು ದಾಖಲಾಗಿದ್ದು ಎಫ್ಐಆರ್ ಹಾಕಲಾಗಿದೆ. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಇದೀಗ ಡಿ.ಸುಧಾಕರ್ ಅವರ ರಾಜೀನಾಮೆಗೆ ಪಟ್ಟು ಹಿಡಿದಿದೆ.
ಜಾಲತಾಣಗಳಲ್ಲಿ ಲಭ್ಯವಿರುವ ಸುಧಾಕರ್ ಬೆದರಿಕೆಯ ವಿಡಿಯೋ ಲಗತ್ತಿಸಿ ಟ್ವೀಟ್ ಮಾಡಿರುವ ಬಿಜೆಪಿ, ಯಾವ ಪುಡಿ ರೌಡಿಗಿಂತಲೂ ಕಡಿಮೆ ಇಲ್ಲ ಸಚಿವ ಡಿ. ಸುಧಾಕರ್ ಅವರ ಗೂಂಡಾವರ್ತನೆ ಎಂದು ಹೇಳಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಜಾತಿ ನಿಂದಕರು, ಗೂಂಡಾಗಳೇ ತುಂಬಿ ತುಳುಕುತ್ತಿದ್ದಾರೆ.
ಸಿದ್ದರಾಮಯ್ಯ ಅವರಿಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾದರೆ, ಸಚಿವ ಡಿ. ಸುಧಾಕರ್ ಅವರಿಗೆ ದಲಿತರನ್ನು ಅವಮಾನಿಸಿ ಗೂಂಡಾಗಿರಿ ಮಾಡುವ ಅಹಂ ಸಿದ್ಧಿಸಿದೆ ಎಂದು ಆಪಾದಿಸಿದೆ.

ಈ ಬೆಳವಣಿಗೆ ನಡುವೆ ಸಚಿವ ಸುಧಾಕರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ವಿವರಣೆ ನೀಡಿದ್ದಾರೆ.

ಹಳೆಯ ವಿಡಿಯೋ: ನಂತರ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಸಾಮಾಜಿಕ ಜಾಲತಾಣದಲ್ಲಿ ಲಭ್ಯ ಇರುವ ವಿಡಿಯೋ ಹಳೆಯದು. ಈಗ ಪ್ರಸಾರವಾಗುತ್ತಿರುವ ವಿಡಿಯೋಗಳ ತುಣಕನ್ನು ಒಂದಕ್ಕೊಂದು ಜೋಡಿಸಲಾಗಿದೆ ಎಂದು ಹೇಳಿದರು.

ಘಟನೆ ನಡೆದ ದಿನ ನಾನು ಚಿತ್ರದುರ್ಗದಲ್ಲಿದ್ದೆ. ನನಗೂ, ಅದಕ್ಕೂ ಸಂಬಂಧವಿಲ್ಲ. ನನ್ನ ಮಾತುಗಳಿಗೆ ಮೊದಲು ದೂರುದಾರರು ಯಾವ ರೀತಿ ಪ್ರಚೋದನಕಾರಿಯಾಗಿ ನಡೆದುಕೊಂಡರು ಎಂಬುದನ್ನು ನೆನಪಿಸಿಕೊಳ್ಳಬೇಕು. ಸದ್ಯಕ್ಕೆ ತಮಗೆ ನೆನಪಿಲ್ಲ ಎಂದರು.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ತಾವು ಹೆದರಿಕೊಂಡೇ ಕಾನೂನಿನ ಚೌಕಟ್ಟಿನಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಏಕಾಏಕಿ ಈ ಹಂತಕ್ಕೆ ಬಂದಿಲ್ಲ. ಕಷ್ಟಪಟ್ಟು ಬೆಳೆದಿದ್ದೇನೆ. ನಾನು ಸಚಿವನಾದಾಗಲೆಲ್ಲಾ ಈ ರೀತಿಯ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ. 2008ರಲ್ಲಿ ಸಚಿವನಾಗಿದ್ದಾಗ ಸಿಬಿಐ ಕೇಸು ಹಾಕಿಸಿದ್ದರು. ಅದು ನ್ಯಾಯಾಲಯದಲ್ಲಿ ಊರ್ಜಿತವಾಗಲಿಲ್ಲ ಎಂದು ತಿಳಿಸಿದರು.

ತಮ್ಮನ್ನು ಶಾಸಕರನ್ನಾಗಿ ಮಾಡಿದ್ದೇ ನನ್ನ ರಾಜಕೀಯ ಗುರು ಕೆ.ಎಚ್.ರಂಗನಾಥ್. ಇಂತದ್ದರಲ್ಲಿ ನಾನು ಪರಿಶಿಷ್ಟ ಸಮುದಾಯಗಳ ಜಾತಿನಿಂದನೆ ಮಾಡಲು ಸಾಧ್ಯವೇ? ಅನಗತ್ಯವಾದ ತೇಜೋವಧೆಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ನಾನು ಯಾರ ಜಾತಿನಿಂದನೆಯೂ ಮಾಡಿಲ್ಲ, ಭೂಮಿಯನ್ನೂ ಕಬಳಿಸಿಲ್ಲ. ನನ್ನ ಮೇಲಿನ ಆರೋಪಗಳು ಸಂಪೂರ್ಣ ನಿರಾಧಾರ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ನನ್ನ ಪರವಾದ ಸಮರ್ಥನೆಗಳನ್ನು ದಾಖಲೆ ಸಮೇತ ನೀಡಿದ್ದೇನೆ. ಹತ್ತು-ಹದಿನೈದು ವರ್ಷಗಳ ಹಿಂದೆ ನಡೆದ ಜಮೀನು ಖರೀದಿ ವ್ಯವಹಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈಗ ಅದನ್ನು ಮುನ್ನೆಲೆಗೆ ತಂದು ಕೇಸು ಹಾಕಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಗೃಹ ಸಚಿವರಲ್ಲಿ ಮನವಿ ಮಾಡಿದ್ದೇನೆ. ನನ್ನ ವಿರುದ್ಧ ಕೇಳಿಬಂದಿರುವ ಭೂಕಬಳಿಕೆಯ ಆರೋಪಕ್ಕೆ ಒಂದೇ ಒಂದು ದಾಖಲೆಗಳಿಲ್ಲ. ಆದರೂ ನಿರಂತರವಾಗಿ ತೇಜೋವಧೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸುಳ್ಳು ಮೊಕದ್ದಮೆ: ಈ ನಡುವೆ ಸಚಿವ ಸುಧಾಕರ್ ಬೆಂಬಲಕ್ಕೆ ಡಿಸಿಎಂ ಶಿವಕುಮಾರ್ ಧಾವಿಸಿದ್ದಾರೆ. ಸುಧಾಕರ್ ವಿರುದ್ಧ ದಾಖಲಾಗಿರುವ ದೂರು ಸಿವಿಲ್ ಪ್ರಕರಣ. ಧಮಕಿಗೂ ಪಿಸಿಆರ್ ದೂರಿಗೂ ಬಹಳ ವ್ಯತ್ಯಾಸವಿದೆ. ಈ ವಿಚಾರವಾಗಿ ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಇದೊಂದು ಸುಳ್ಳು ಕೇಸ್ ಎಂದು ತಿಳಿದು ಬಂದಿದೆ. ಹೀಗಾಗಿ ಸುಧಾಕರ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ಏನಾದರೂ ಕುತಂತ್ರ ಮಾಡಲಿ. ಡಿ. ಸುಧಾಕರ್ ಅವರದು ಸಿವಿಲ್ ಪ್ರಕರಣವಾಗಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಪ್ರಕರಣದ ಬಗ್ಗೆ ಸಂಪೂರ್ಣ ವರದಿ ಪಡೆದಿದ್ದೇನೆ. ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಸುಧಾಕರ್ ಅವರು ಅನುಮತಿ ಮೇರೆಗೆ ಖಾಸಗಿ ಜಮೀನು ಖರೀದಿ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಬೇರೆಯವರು ಕಾಂಪೌಂಡ್ ಹಾಕಿದ್ದಾರೆ. ಹೀಗಾಗಿ ಇವರ ಕಡೆಯವರು ಜಾಗ ಭದ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವಿಚಾರವಾಗಿ ಪರಿಶಿಷ್ಟ ಜಾತಿಯವರು ದೂರು ನೀಡಿದ್ದು, ಪಿಸಿಆರ್ ಪ್ರಕಾರ ದೂರು ದಾಖಲಿಸಲಾಗಿದೆ ಎಂದು ತಿಳಿಸಿದರು.

ದೂರು ನೀಡುವ ಸಂದರ್ಭದಲ್ಲಿ ಸುಧಾಕರ್ ಅವರು ಚಿತ್ರದುರ್ಗದಲ್ಲಿ ಇದ್ದರು. ಹೀಗಾಗಿ ಇದು ಸುಳ್ಳು ಕೇಸು ಎಂದು ನನಗೆ ಗೊತ್ತಿದೆ. ಎಲ್ಲ ಮಾಹಿತಿ ನಮ್ಮ ಬಳಿ ಇದೆ. ನಾಳೆ ಬೆಳಗ್ಗೆ ನನ್ನ ಮೇಲೂ ಸುಳ್ಳು ದೂರು ನೀಡಬಹುದು. ಬಿಜೆಪಿಯವರು ಸುಧಾಕರ್ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಕನಸು ಕಾಣುವ ಅಗತ್ಯವಿಲ್ಲ. ಯಾರಾದರೂ ತಪ್ಪು ಮಾಡಿದ್ದರೆ, ಕಾನೂನು ಮುಂದೆ ಯಾರೂ ದೊಡ್ಡವರಿಲ್ಲ. ಕಾನೂನಿಗೆ ಎಲ್ಲರೂ ಗೌರವ ನೀಡಬೇಕು ಎಂದರು.

Leave a Reply