ಕೊಲ್ಕೊತ್ತ: ಶಾಲಾ ಶಿಕ್ಷಕರ ಅಕ್ರಮ ನೇಮಕ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಲಾಗಿದೆ.
ಜಾರಿ ನಿರ್ದೇಶನಾಲಯ ಬಂಗಾಳದ ಮಾಜಿ ಶಿಕ್ಷಣ ಸಚಿವ ಮತ್ತು ಅರ್ಪಿತಾ ಮುಖರ್ಜಿಯವರನ್ನು 14 ದಿನ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿತ್ತು. ಪ್ರಕರಣದಲ್ಲಿ ಹೊಸ ಬೆಳವಣಿಗೆಗಳ ಕುರಿತು ಇಬ್ಬರೂ ಆರೋಪಿಗಳನ್ನು ವಿಚಾರಣೆ ನಡೆಸಬೇಕಿದೆ ಎಂದು ಇಡಿ ವಕೀಲರು ಕೋರಿದ್ದರು. ವಾದವನ್ನು ಆಲಿಸಿದ ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿಬೋನ್ ಕುಮಾರ್ ಸಾಧು ಆದೇಶ ಕಾಯ್ದಿರಿಸಿದ್ದಾರೆ.
ಪಾರ್ಥ ಚಟರ್ಜಿ ಮತ್ತುು ಅರ್ಪಿತಾ ಮುಖರ್ಜಿ ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಕ್ರಮ ನೇಮಕ ಪ್ರಕರಣದಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜುಲೈ 23ರಂದು ಬಂಧಿಸಲ್ಪಟ್ಟಿದ್ದಾರೆ.
ಪಾರ್ಥ ಚಟರ್ಜಿ ಒಡೆತನದ ಫ್ಲಾಟ್ ಗಳಿಂದ ಸುಮಾರು 49.8 ಕೋಟಿ ರೂ. ನಗದು, ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ದಾಖಲೆಗಳು, ಇನ್ನಿಬ್ಬರು ಆರೋಪಿಗಳು ಹೊಂದಿರುವ ಕಂಪನಿಯ ಜಂಟಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಹೇಳಿದೆ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಪಾರ್ಥ ಚಟರ್ಜಿಯವರನ್ನು ಸಿಎಂ ಮಮತಾ ಬ್ಯಾನರ್ಜಿ ಸಚಿವ ಸ್ಥಾನದಿಂದ ವಜಾಗೊಳಿಸಿದ್ದರು. ಜೊತೆಗೆ, ಪಕ್ಷದ ಎಲ್ಲ ಹುದ್ದೆಗಳಿಂದ ಕೂಡ ಬಿಡುಗಡೆ ಮಾಡಲಾಗಿದೆ. ಈ ಬೆಳವಣಿಗೆಗಳ ನಡುವೆ ಮಮತಾ ಸಂಪುಟವನ್ನು ವಿಸ್ತರಿಸಿದ್ದು, ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕೂಡ ದೆಹಲಿಯಲ್ಲಿ ಭೇಟಿಯಾಗಿದ್ದಾರೆ.




