ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು‌ ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ: ಸಿದ್ದರಾಮಯ್ಯ

4 years ago

ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು‌ ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ: ಸಿದ್ದರಾಮಯ್ಯ

ಕನ್ನಡಿಗರ ಸ್ವಾಭಿಮಾನವನ್ನು ‘ಉತ್ತರ ಕುಮಾರ’ರ ಕಾಲಡಿ ಯಾಕೆ ಅಡವು ಇಡುತ್ತೀರಾ?
ಶರಣಾಗತಿ ಕನ್ನಡದ ಮಣ್ಣಿನ ಗುಣವಲ್ಲ

ವೀರರಾಣಿ ಅಬ್ಬಕ್ಕನ ನೆಲದಿಂದ ಬಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಗುಲಾಮಿ‌ ಮನಸ್ಥಿತಿ ಬರಬಾರದಿತ್ತು

ಬೆಂಗಳೂರು: ರಾಜ್ಯದ ಬಸವರಾಜ ಬೊಮ್ಮಾಯಿ ಸರ್ಕಾರ ಕೇಂದ್ರ ಬಿಜೆಪಿ ನಾಯಕರ ಓಲೈಕೆಗಾಗಿ ಮತ್ತೆ ಮತ್ತೆ ಕನ್ನಡವನ್ನು ತುಳಿದು ಹಿಂದಿಯನ್ನು ಮೆರೆಸಿ‌‌ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅವಮಾನ ಮಾಡುತ್ತಿರುವುದು ಖಂಡನೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯಪ್ರವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದು, ಅವರು ಭಾಗವಹಿಸಿರುವ ಕಾರ್ಯಕ್ರಮಗಳಲ್ಲಿ ಕನ್ನಡ ಕಾಣೆಯಾಗಿದ್ದು, ಬೋರ್ಡ್ ಮತ್ತು ಬ್ಯಾನರ್ ಗಳೆಲ್ಲ ಹಿಂದೀಮಯವಾಗಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಕೇಂದ್ರ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದ ‘ ಸಂಕಲ್ಪ್ ಸೆ ಸಿದ್ಧಿ’ ಎಂಬ ಕಾರ್ಯಕ್ರಮದ ಬ್ಯಾನರ್ ಸಂಪೂರ್ಣ ಹಿಂದಿಮಯವಾಗಿತ್ತು.‌ ಇನ್ನೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತನ್ನ ಜಾಲತಾಣದಲ್ಲಿ ಹಿಂದಿಯ ಕಿರೀಟ ಇಟ್ಟುಕೊಂಡು ಮೆರೆಸುತ್ತಿದೆ ಎಂದಿದ್ದಾರೆ.

ರಾಜ್ಯದ ಬಿಜೆಪಿ ಸರ್ಕಾರ ತನ್ನತನವನ್ನು ಅಡವಿಟ್ಟು‌ ಹಿಂದಿ ಭಾಷೆಗೆ ಸಂಪೂರ್ಣ ಶರಣಾಗತವಾಗಿದೆ ಎಂಬುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣವೇ ಸಾಕ್ಷಿ. ಮೊದಲು ಈ ಜಾಲತಾಣದಿಂದ ಹಿಂದಿಯನ್ನು ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ? ಅಥವಾ ಹಿಂದಿ‌ ಮತ್ತು ಸಂಸ್ಕೃತಿ ಇಲಾಖೆಯೇ? ಎನ್ನುವುದನ್ನು ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಸ್ಪಷ್ಟಪಡಿಸಬೇಕು. ಕನ್ನಡ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು‌ ಪೋಷಣೆಗಾಗಿ ಇರುವ ಇಲಾಖೆಯೇ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ಹೊರಗಿಟ್ಟು ಹಿಂದಿ ಭಾಷೆಯ ಪ್ರಚಾರಕ್ಕೆ ಇಳಿದರೆ ಕನ್ನಡ ಭಾಷೆಯನ್ನು ರಕ್ಷಿಸಿವವರು ಯಾರು? ಎಂದು ಪ್ರಶ್ನಿಸಿದ್ದಾರೆ.

ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಕನ್ನಡಿಗರ ಸ್ವಾಭಿಮಾನವನ್ನು ‘ಉತ್ತರ ಕುಮಾರ’ರ ಕಾಲಡಿ ಯಾಕೆ ಅಡವು ಇಡುತ್ತೀರಾ? ಶರಣಾಗತಿ ಕನ್ನಡದ ಮಣ್ಣಿನ ಗುಣವಲ್ಲ, ವೀರರಾಣಿ ಅಬ್ಬಕ್ಕನ ನೆಲದಿಂದ ಬಂದ ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ಇಂಥಾ ಗುಲಾಮಿ‌ ಮನಸ್ಥಿತಿ ಬರಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply