ಜಾತಿ ವ್ಯವಸ್ಥೆಯ ಕ್ರೌರ್ಯಕ್ಕಾಗಿ ಈ ನೆಲ ದಲಿತರ ನೆತ್ತರಿನಲ್ಲಿ ತೊಯ್ಯುತ್ತಲೇ ಇದೆ

4 years ago

ನಮ್ಮ ದೇಶದಲ್ಲಿ ಅರವತ್ತು ಎಪ್ಪತ್ತರ ದಶಕದಲ್ಲಿ ಉಂಟಾದ ‘ಹಸಿರು ಕ್ರಾಂತಿ’ ಕೇವಲ ಆಹಾರೋತ್ಪಾದನೆಯನ್ನು ಮಾತ್ರ ಹೆಚ್ಚಿಸಲಿಲ್ಲ. ಭೂಮಿಯ ಒಡೆತನ‌ ಹೊಂದಿದ್ದ ಮೇಲ್ಜಾತಿಗಳಿಗೆ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯ ಕೊಟ್ಟು ಸಾಮಾಜಿಕವಾಗಿ ‘ಮೇಲ್ಜಾತಿಯ ಅಹಂ’ಅನ್ನು ಕೂಡ ಹೆಚ್ಚಿಸಿತು.

ಅಣೆಕಟ್ಟುಗಳ ಪುಗಸಟ್ಟೆ ನೀರು ಮತ್ತು ಆಧುನಿಕ ತಂತ್ರಜ್ಞಾನ ಬಳಸಿ ಬೆಳೆ ಬೆಳೆಯುವುದಕ್ಕೆ ಶುರುಮಾಡಿದ ಭೂಮಾಲೀಕರು ಅತೀ ವೇಗದಲ್ಲಿ ಶ್ರೀಮಂತರಾದರು. ಈ ಶ್ರೀಮಂತಿಕೆ ಅವರ‌ ಗದ್ದೆಗಳಲ್ಲಿ ನೀರನ್ನು ಹರಿಸಿದಷ್ಟೇ ಸರಾಗವಾಗಿ ದಲಿತರ ರಕ್ತವನ್ನೂ ಹರಿಸುವ ಬಲ ಕೊಟ್ಟಿತು. ಆಂಧ್ರದ ಕೃಷ್ಣಾ ನದಿ ಪಾತ್ರದ ಚುಂಡೂರಿ‌ನಲ್ಲಿ ಇಂದಿಗೆ ಸರಿಯಾಗಿ ಮೂವತ್ತೊಂದು ವರ್ಷಗಳ ಹಿಂದೆ ನಡೆದ ಎಂಟು ಜನ ದಲಿತರ ಭೀಕರ ಹತ್ಯಾಕಾಂಡ ಇದಕ್ಕೆ ದೊಡ್ಡ ಉದಾಹರಣೆ.

ವಸಾಹತುಶಾಹಿ‌ಯಿಂದಾಗಿ ಮೇಲ್ಜಾತಿಗಳಿಗೆ ಸಿಕ್ಕಷ್ಟು ಅಲ್ಲದಿದ್ದರು ಸಣ್ಣ ಪ್ರಮಾಣದ ಅನುಕೂಲ‌ಗಳು ದಲಿತರಿಗೂ ಸಿಕ್ಕಿವೆ. ಇಲ್ಲಿ ಮೇಲ್ಜಾತಿಗಳಿಗೆ ಸಿಕ್ಕ ಅನುಕೂಲಗಳು ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದಕ್ಕೆ ಅನುಕೂಲವಾದರೆ ತಳಸಮುದಾಯಗಳು ಎಚ್ಚೆತ್ತುಕೊಂಡು ಜಾತಿ ವ್ಯವಸ್ಥೆಯನ್ನು ಪ್ರಶ್ನೆಮಾಡುವುದಕ್ಕೆ ಕಾರಣವಾಗಿವೆ.

ವಸಾಹತುಶಾಹಿ ಮತ್ತು ಸ್ವಾತಂತ್ರೋತ್ತರ ಭಾರತದಲ್ಲಿ ದಲಿತರಿಗೆ ಶಿಕ್ಷಣ ಸಿಕ್ಕಿದ್ದು ಜಾತಿ ವ್ಯವಸ್ಥೆಗೆ ಎದುರಾದ ದೊಡ್ಡ ಸವಾಲುಗಳಲ್ಲಿ ಮುಖ್ಯವಾದುದು‌.  ಚುಂಡೂರಿನ ದಲಿತ ಯುವಕರಿಗೆ ಸಿಕ್ಕ ಶಿಕ್ಷಣ ಮತ್ತು ಉದ್ಯೋಗವಕಾಶಗಳ ಕಾರಣಕ್ಕೆ ಸ್ವಾವಲಂಬನೆಯ ದಾರಿಯಲ್ಲಿದ್ದರು. ಅಲ್ಲಿನ ದಲಿತರು ಕ್ರಿಶ್ಚಿಯಾನಿಟಿಯ ಕಡೆ ಮುಖ‌ ಮಾಡಿ ಜಾತಿ ವ್ಯವಸ್ಥೆಯ ಹೊರಕ್ಕೆ ಕಾಲಿಡುವಂತಾಗಿದ್ದು ಸಾಂಪ್ರದಾಯಿಕ‌ ಜಾತಿ ಸಮಾಜಕ್ಕೆ ಅಸಹನೆ ಉಂಟುಮಾಡಿತ್ತು.

ಚೆಂಡೂರಿನ ದಲಿತ ಕಾಲೋನಿ ಶಿಕ್ಷಿತ ಯುವಕರು ಜಾತಿ ಕಾರಣಕ್ಕೆ ತಮ್ಮ‌ ಮೇಲೆ ಆಗುತ್ತಿದ್ದ ಶೋಷಣೆ, ಅವಮಾನಗಳ ವಿರುದ್ಧ ದನಿ ಎತ್ತಿ ಮಾತಾಡುತ್ತಿದ್ದರು. ಇದೆಲ್ಲದರ ಹಿನ್ನೆಲೆಯಲ್ಲಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಭೂಮಾಲೀಕ ರೆಡ್ಡಿಗಳು ಒಂದು ಸಣ್ಣ ಜಗಳವನ್ನು ನೆಪ ಮಾಡಿಕೊಂಡು ಆಗಸ್ಟ್ 6, 1991ರ ರಾತ್ರಿ ಚೆಂಡೂರಿನ ದಲಿತ‌ ಕಾಲೋನಿಗೆ ನುಗ್ಗಿ ಎಂಟು ಜನ ದಲಿತರನ್ನು ಬರ್ಭರವಾಗಿ ಹತ್ಯೆ ಮಾಡಿ, ಹದಿನಾಲ್ಕು ಜನ ದಲಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಸತ್ತ ದಲಿತರ ಹೆಣಗಳನ್ನು ಭತ್ತದ ಗದ್ದೆಗಳಲ್ಲಿ ಹೂತು ಹಾಕಿದರು. ಈ ಹತ್ಯೆಗಳು ಎಷ್ಟು ಅಮಾನುಷವಾಗಿದ್ದವು ಎಂದರೆ ಸತ್ತ ಎಂಟು ಜನ ದಲಿತರ ಶವಪರೀಕ್ಷೆ ಮಾಡಿದ ಡಾಕ್ಟರ್ ಖಿನ್ನತೆಗೊಳಗಾಗಿ ಆತ್ಮಹತ್ಯೆಮಾಡಿಕೊಳ್ಳುವಷ್ಟು…

ಚಂಡೂರು ಹತ್ಯಾಕಾಂಡಕ್ಕಿಂತ ಹಿಂದೆ ಕರಂಚೇಡುವಿನಲ್ಲಿ ಭೀಕರವಾಗಿ ದಲಿತರ ಹತ್ಯಾಕಾಂಡವಾಗಿತ್ತು. ಆ ಸಂದರ್ಭದಲ್ಲಿ ಸ್ಥಾಪನೆಯಾಗಿದ್ದ ದಲಿತ ಮಹಾಸಭಾ ಚಂಡೂರು ಹತ್ಯಾಕಾಂಡದ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಿತು. ಈ ಹತ್ಯಾಕಾಂಡದ ವಿಚಾರಣೆಯನ್ನು ಚಂಡೂರಿನಲ್ಲೆ ನಡೆಸಬೇಕು ಎನ್ನುವ ಬೇಡಿಕೆಯೊಂದಿಗೆ ಹೋರಾಟ ದೆಹಲಿಗೆ ಸ್ಥಳಾಂತರವಾಯಿತು. ಸರ್ಕಾರ ಚಂಡೂರಿನಲ್ಲೆ ಕೋರ್ಟ್ ಸ್ಥಾಪಿಸಿ ವಿಚಾರಣೆ ಶುರು ಮಾಡಿತಾದರೂ 2014ರಲ್ಲಿ ಹೈಕೋರ್ಟ್ ಆರೋಪಿಗಳನ್ನು ಖುಲಾಸೆ ಮಾಡಿತು. ಇದು ದೇಶದ ಎಲ್ಲ ದಲಿತ ಹತ್ಯಾಕಾಂಡಗಳಿಗೂ ನ್ಯಾಯಾಲಯಗಳಿಂದ ಸಿಗುತ್ತಿರುವ ‘ನ್ಯಾಯ’.

ಕರಂಚೇಡು ಮತ್ತು ಚುಂಡೂರು ಹತ್ಯಾಕಾಂಡಗಳನ್ನು ನಡೆಸಿದವರು ಪ್ರಬಲ ಫ್ಯೂಡಲ್ ಜಾತಿಗಳಾದ ಕಮ್ಮ ಮತ್ತು ರೆಡ್ಡಿಗಳು. ಇವರಿಗೆ ಬಲ ತಂದುಕೊಟ್ಟಿದ್ದು ರಾಜಕೀಯ ಪ್ರಾಬಲ್ಯ. ಕರಂಚೇಡು ಘಟನೆಯ ಹಿಂದೆ ಕಮ್ಮ ಸಮುದಾಯ ರಾಜಕೀಯವಾಗಿ ಪ್ರಾಬಲ್ಯಕ್ಕೆ ಬಂದ ಅಹಂಕಾರವಿದೆ. ಆಂದ್ರಪ್ರದೇಶದಲ್ಲಿ ಪ್ರಬಲ ಸಮುದಾಯವಾಗಿದ್ದರೂ ಕಮ್ಮ ಸಮುದಾಯದವರು ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಾಗಿರಲಿಲ್ಲ. ಕರಾವಳಿ ಆಂಧ್ರದಲ್ಲಿ ಎಲ್ಲ ರೀತಿಯಲ್ಲೂ ಪ್ರಬಲವಾಗಿ ಬೆಳೆದಿದ್ದ ಕಮ್ಮ ಸಮುದಾಯ ರೆಡ್ಡಿಗಳು ಮತ್ತು ಬ್ರಾಹ್ಮಣರೆ ಅಧಿಕಾರಕ್ಕೆ ಬರುತ್ತಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ತೆಲುಗುದೇಶಂ‌ ಪಕ್ಷ ಸ್ಥಾಪಿಸಿ ಇದಕ್ಕೆ ಸಿನಿಮಾ ಸೂಪರ್‌ಸ್ಟಾರ್ ಆಗಿದ್ದ ಎನ್‌ಟಿಆರ್‌ರನ್ನು ಆಯ್ಕೆ ಮಾಡಿಕೊಂಡಿತು.

ಕಮ್ಮ ಸಮುದಾಯಕ್ಕೆ ಸೇರಿದ ರಾಮೋಜಿರಾವ್ ತರದ ಮೀಡಿಯಾ ಮಾಫಿಯಾ, ಸಿನಿಮಾ ಇಂಡಸ್ಟ್ರಿಯ ಹಣವಂತರು, ಕಂಟ್ರಾಕ್ಟರ್‌ಗಳು, ವ್ಯಾಪಾರಿಗಳು, ಭೂಮಾಲೀಕರು ಎನ್‌ಟಿಆರ್ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಕಮ್ಮ ಸಮುದಾಯಕ್ಕೆ ರಾಜಕೀಯ ಪ್ರಾಬಲ್ಯವನ್ನು ಗಳಿಸಿಕೊಟ್ಟರೇ ಹೊರತು ಪ್ರಚಲಿತವಾಗಿರುವ ‘ತೆಲುಗು ಫ್ರೈಡ್’ ಅಲ್ಲ. ತೆಲುಗುದೇಶಂ ಪಕ್ಕಾ ಜಾತಿರಾಜಕಾರಣದ ಕೂಸು. ಫ್ಯೂಡಲ್ ಜಾತಿಯೊಂದರ ಐಡೆಂಟಿಟಿಯ ವೇದಿಕೆ.

ಯಾವಾಗ ತೆಲುಗುದೇಶಂ ಅಧಿಕಾರಕ್ಕೆ ಬಂತೋ ಆಗ ರೆಡ್ಡಿಗಳ ಪ್ರಾಬಲ್ಯಕ್ಕೆ ಸವಾಲು ಹಾಕಲು ಮುಂದಾದ ಕಮ್ಮ ಸಮುದಾಯ ನಡೆಸಿದ್ದೇ ಕರಂಚೇಡು ಹತ್ಯಾಕಾಂಡ. ತೆಲುಗುದೇಶಂನ ಅಧಿಕಾರಾವಧಿಯಲ್ಲಿ ಕಮ್ಮಗಳು ಮೆರೆದಿದ್ದನ್ನು ನೋಡಿ ವಿಚಲಿತರಾಗಿದ್ದ ರೆಡ್ಡಿಗಳು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ನಡೆಸಿದ್ದು ಚುಂಡೂರು ಹತ್ಯಾಕಾಂಡ. ಎಲ್ಲಿ ತಮ್ಮ ಪ್ರಾಬಲ್ಯ ಕಡಿಮೆಯಾಗುತ್ತದೆಯೋ ಅನ್ನುವ ಭಯದಲ್ಲಿ ಆಂಧ್ರದ ರಾಜಕೀಯ, ಸಾಮಾಜಿಕ ಪ್ರಾಬಲ್ಯಕ್ಕಾಗಿ ರೆಡ್ಡಿ ಮತ್ತು ಕಮ್ಮ ಸಮುದಾಯಗಳ ಮಧ್ಯೆ ನಡೆದ ಕಾದಾಟದಲ್ಲಿ ಬಲಿಯಾದವರು ಆಂಧ್ರದ ದಲಿತರು. ಇದರ ಫಲ ಕರಂಚೇಡು ಮತ್ತು ಚುಂಡೂರು ಹತ್ಯಾಕಾಂಡಗಳು.

ಈ ಎರಡೂ ಮೇಲ್ಜಾತಿಯ ಸಮುದಾಯಗಳ ಪ್ರಾಬಲ್ಯದಿಂದಾಗಿ ಪ್ರಾಣ ಕಳೆದುಕೊಂಡ ದಲಿತರಿಗೆ ನ್ಯಾಯ ಸಿಗಲಿಲ್ಲ. ಈ ಎರಡೂ ಹತ್ಯಾಕಾಂಡಗಳಲ್ಲಿ ಎಚ್ಚೆತ್ತ ದಲಿತರು ಬಲಿಪಶುಗಳಾದರು. ಯಾವ ಜಾತಿ ವ್ಯವಸ್ಥೆಯ ವಿರುದ್ದ ದಲಿತರು ಹೋರಾಡುವುದಕ್ಕೆ ಮುಂದಾದರೂ ಅದೇ ಜಾತಿ ವ್ಯವಸ್ಥೆ ದಲಿತರನ್ನು ದಮನ ಮಾಡಲು ಮುಂದಾಯಿತು. ಅದರಲ್ಲೂ ಮೇಲ್ಜಾತಿಗಳ ಕಿತ್ತಾಟಕ್ಕೆ ದಲಿತರು ಬಲಿಪಶುಗಳಾದರು.

ಜಾತಿ ವ್ಯವಸ್ಥೆಯ ಕ್ರೌರ್ಯಕ್ಕಾಗಿ ಈ ನೆಲ ದಲಿತರ ನೆತ್ತರಿನಲ್ಲಿ ತೊಯ್ಯುತ್ತಲೇ ಇದೆ. ಮೀಸಲಾತಿ, ಅಟ್ರಾಸಿಟಿ ಕಾಯ್ದೆಯಿಂದಾಗಿ ಸಮಾಜದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ ಎಂದು ಗೋಳಾಡುವ ಜನ ಮೇಲ್ಜಾತಿಗಳ ಕೈಯಲ್ಲಿ ಹತ್ಯೆಯಾದ ದಲಿತರಿಗೆ ನ್ಯಾಯ ಕೊಡುವಲ್ಲಿ ಕೋರ್ಟುಗಳು ವಿಫಲವಾಗುತ್ತಿವೆಯಲ್ಲ ಇದನ್ಯಾಕೆ ಪ್ರಶ್ನಿಸುವುದಿಲ್ಲ.

-ವಿ.ಎಲ್.ನರಸಿಂಹಮೂರ್ತಿ, ಸಾಮಾಜಿಕ ಹೋರಾಟಗಾರರು

Leave a Reply