ಪತಾಂಜಲಿ ಎಂಬ ಗೊಬ್ಬರದ ಉತ್ಪನ್ನಗಳು
ನಿನ್ನೆ ಆರ್.ಎಸ್.ಎಸ್. ಮುಖ್ಯಸ್ಥ ಭಾಗವತ್ ಅವರು ಮಾತನಾಡುತ್ತಾ ‘ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಆಯುರ್ವೇದಕ್ಕೆ ಅಚ್ಚೇ ದಿನಗಳು ಬಂದಿವೆ ‘ ಎಂದು ಹೇಳಿರುವ ಮಾತುಗಳು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ವರದಿಯಾಗಿದೆ. ಅದೇ ಸಂದರ್ಭದಲ್ಲಿ ಉತ್ತರ ಖಾಂಡ ಸರ್ಕಾರವು ಬಾಬಾ ರಾಮದೇವ್ ನ ಪತಾಂಜಲಿಯ ಐದು ಉತ್ಪನ್ನಗಳ ಮೇಲೆ ನಿಷೇಧ ಹೇರಿರುವ ವರದಿಯೂ ಸಹ ಪ್ರಕಟವಾಗಿದೆ.
ಇಪ್ಪತ್ತೈದು ವರ್ಷಗಳ ಹಿಂದೆ ಕೇವಲ ಯೋಗವನ್ನು ಪ್ರಚಾರ ಮಾಡುತ್ತಾ ಇಡೀ ದೇಶದಲ್ಲಿ ಮುನ್ನೆಲೆಗೆ ಬಂದ ಈ ರಾಮದೇವ್ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಹೊರಟು, ದೆಹಲಿಯ ರಾಮಲೀಲಾ ಮೈದಾನದಿಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಂಗಸರ ವೇಷ ಧರಿಸಿ ಓಡಿ ಹೋಗಿದ್ದನ್ನು ನಾವ್ಯಾರು ಮರೆತಿಲ್ಲ. ನಂತರ ಈತ ಆಯುರ್ವೇದ ಔಷಧಿಗಳನ್ನು ಉತ್ಪಾದಿಸಿ ಮಾರಾಟ ಮಾಡಲು ತೊಡಗಿ ಈಗ ಆಹಾರ ಉತ್ಪಾದನೆಗಳಲ್ಲಿ ನಿರತನಾಗಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸ್ಪರ್ಧೆ ನೀಡುತ್ತಿದ್ದಾನೆ. ಇದೀಗ ಈತನ ವಾರ್ಷಿಕ ವಹಿವಾಟು ಇಪ್ಪತ್ತು ಸಾವಿರ ಕೋಟಿ ತಲುಪುತ್ತಿದೆ. ಗುಟ್ಕಾ ಮತ್ತು ವಿಸ್ಕಿ, ಸಿಗರೇಟು ಈ ಮೂರು ಉತ್ಪಾದನೆಗಳನ್ನು ಹೊರತು ಪಡಿಸಿ ಉಳಿದ ಎ;ಲ್ಲಾ ಗೊಬ್ಬರಗಳು ಪತಾಂಕಲಿ ಹೆಸರಿನಲ್ಲಿ ಮಾರುಕಟ್ಟೆಯಲ್ಲಿವೆ. ಹರಿದ್ವಾರದ ಹೊರವಲಯದಲ್ಲಿ ರೂರ್ಕಿ ರಸ್ತೆಯಲ್ಲಿ ರಾಮದೇವನ ಆಸ್ಪತ್ರೆಗೆ 2011 ರಲ್ಲಿ ಭೇಟಿ ನೀಡಿದ್ದೆ. ಜಿಮ್ ಕಾರ್ಬೇಟ್ ಕುರಿತು ಅಧ್ಯಯನಕ್ಕಾಗಿ ನೈನಿತಾಲ್ ಗೆ ಹೋಗುವ ಮುನ್ನ ರುದ್ರಪ್ರಯಾಗ, ಕರ್ಣ ಪ್ರಯಾಗಕ್ಕೆ ಭೇಟಿ ನೀಡಿ ಬಂದು ಒಂದು ರಾತ್ರಿ ಗೆಳೆಯರ ಜೊತೆ ಹರಿದ್ವಾರದ ನಾರಾಯಣ್ ತಿವಾರಿ ಅತಿಥಿ ಗೃಹ ಎಂಬ ಯೂತ್ ಹಾಸ್ಟ್ಲಲ್ ಇಂಡಿಯಾದ ಈ ವಸತಿ ಕೇಂದ್ರದಲ್ಲಿ ಉಳಿದಿದ್ದೆ. ಹರಿದ್ವಾರದಿಂದ ನಾಲ್ಕು ಕಿಲೊಮೀಟರ್ ದೂರದಲ್ಲಿ ರಾಮದೇವನ ಆಸ್ಪತ್ರೆ ಇದ್ದುದರಿಂದ ಅಲ್ಲಿನ ಕ್ಯಾಂಟಿನ್ ನಲ್ಲಿ ದಕ್ಷಿಣ ಭಾರತದ ಊಟ ತಿಂಡಿ ಸಿಗುತ್ತದೆ ಎಂಬ ಮಾಹಿತಿ ಇದ್ದುದರಿಂದ ಆಸ್ಪತ್ರೆಗೆ ಭೇಟಿ ನೀಡಿದ್ದೆ.
ಗೆಳೆಯರ ಜೊತೆಗೆ ಆಸ್ಪತ್ರೆಗೆ ಹೋಗಿ ಅಲ್ಲಿನ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಭೇಟಿಯಾದಾಗ ನಮ್ಮನ್ನು ಕ್ಯಾಂಟಿನ್ ಗೆ ಕರೆದೊಯ್ದು ಮಸಾಲೆ ದೋಸೆ ಮತ್ತು ಕಾಫಿ ಕೊಡಿಸಿದ್ದನು. ನಂತರ ಆಸ್ಪತ್ರೆಯಲ್ಲಿ ನಮ್ಮನ್ನು ಸುತ್ತಾಡಿಸಿ ಕೇವಲ ಕೆಲವೇ ವಸ್ತುಗಳಿಗೆ ಸೀಮಿತವಾಗಿದ್ದ ಸಾಬೂನುಗಳು, ಅಗರಬತ್ತಿ ಮತ್ತು ಕೆಲವೇ ಔಷದಿಯ ಮಾತ್ರೆಗಳನ್ನು ಪರಿಚಯಿಸಿದ್ದನು. ನನ್ನ ಮಿತ್ರ ಬಿಜಾಪುರ ಜಿಲ್ಲೆಯ ಗಡಿ ಭಾಗದ ಚಡಚಣದ ಬಸವರಾಜ್ ಯಂಕಂಚಿ ಎಲ್ಲಾ ವಸ್ತುಗಳನ್ನು ಖರೀದಿಸಿದ್ದರು. ನಾನು ಏನನ್ನೂ ಖರೀದಿಸಲಿಲ್ಲ. ಏಕೆಂದರೆ 1998 ಅಥವಾ 1999 ರಲ್ಲಿ ನನಗೆ ರಾಮದೇವನ ಔಷಧಿಯ ಪರಿಚಯವಾಗಿತ್ತು. 1995 ರಲ್ಲಿ ನನಗೆ ಸಕ್ಕರೆ ಕಾಯಿಲೆಯು ನನ್ನ ತಾಯಿಯ ಮೂಲಕ ರಕ್ತಗತವಾಗಿ ಬಂದಾಗ ಪ್ರತಿದಿನ ಬೆಳಿಗ್ಗೆ ಒಂದು ಮಾತ್ರೆಯನ್ನು ತೆಗೆದುಕೊಳ್ಳುತ್ತಿದ್ದೆ. ಲಂಕೇಶರು ಒಮ್ಮೆ ತಮ್ಮ ಕಚೇರಿಗೆ ಕರೆಸಿ, ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಮೆಂತ್ಯದ ಪುಡಿಯನ್ನು ನೀರಿನಲ್ಲಿ ಕಲೆಸಿ ಕುಡಿಯುವಂತೆ ಹೇಳಿದ್ದರು. ಅದನ್ನು ನಿತ್ಯ ಪಾಲಿಸುತ್ತಿದ್ದೆ, ಪ್ರತಿ ತಿಂಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷೆ ಮಾಡಿಸುತ್ತಿದ್ದೆ. ನಿಯಂತ್ರಣದಲ್ಲಿತ್ತು.
ಎರಡು ಮೂರು ವರ್ಷಗಳ ನಂತರ ಲಂಕೇಶ್ ಪತ್ರಿಕೆಯ ಮೈಸೂರಿನ ವರದಿಗಾರರಾಗಿದ್ದ ಸ್ವಾಮಿ ಆನಂದ್ ನನಗೆ ಫೋನ್ ಮಾಡಿ ಸಕ್ಕರೆ ಕಾಯಿಲೆಗೆ ರಾಮಬಾಣವಾಗಿ ಬಾಬಾ ರಾಮದೇವ್ ಮಾತ್ರೆ ತಯಾರಿಸಿರುವುದಾಗಿ ತಿಳಿಸಿ, ಮಾತ್ರೆ ಸಿಗುವ ಬೆಂಗಳೂರಿನ ಏಕೈಕ ವಿಳಾಸವನ್ನು ಹೇಳಿದ್ದರು. ಮಂಡ್ಯದಲ್ಲಿದ್ದ ನಾನು, ಬೆಂಗಳೂರಿನ ಬಸವನ ಗುಡಿಯ ಬಳಿ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನನ್ನ ತಮ್ಮನ ಮೂಲಕ ಜಯನಗರದ ವಿಳಾಸದಿಂದ ಮುವತ್ತು ಮಾತ್ರೆಗಳ ಡಬ್ಬಿಯನ್ನು ತರಿಸಿದ್ದೆ. ಇನ್ನು ಮುಂದೆ ಸಕ್ಕರೆ ಕಾಯಿಲೆ ಮಂಗ ಮಾಯವಾಗುತ್ತದೆ ಎಂಬ ಆಸೆಯಿಂದ ಪ್ರತಿ ದಿನ ಬೆಳಿಗ್ಗೆ, ರಾತ್ರಿ ಎರಡು ಮಾತ್ರೆ ನುಂಗತೊಡಗಿದೆ. ಮಾತ್ರೆಗಳು ನೋಡಲು ಸಗಣಿಯ ಚಿಕ್ಕ ಉಂಡೆಗಳ ತರಹ ಕಾಣುತ್ತಿದ್ದವು. ಆದರೂ ಆಸೆಯಿಂದ ಗೊಬ್ಬರವನ್ನು ನುಂಗಿ ಗೊಬ್ಬರವನ್ನು ವಿಸರ್ಜಿಸಿದ್ದೆ, ಹದಿನೈದು ದಿನಗಳ ನಂತರ ಪರೀಕ್ಷೆ ಮಾಡಿಸಿದಾಗ ರಕ್ತದಲ್ಲಿನ ಸಕ್ಕರೆ ಗುಣ ಮಟ್ಟ ಯಥಾ ಸ್ಥಿತಿಯಲ್ಲಿತ್ತು. ಸ್ವಾಮಿ ಆನಂದ್ ಫೋನ್ ಮಾಡಿ ‘ ಕಡಿಮೆಯಾಯ್ತಾ ಸಾರ್? ಎಂದು ಕೇಳಿದಾಗ’ ಹೌದು ಹುಚ್ಚು ಮತ್ತು ಭ್ರಮೆ ಕಡಿಮೆಯಾಯ್ತು’ ಎಂದು ನಗುತ್ತಾ ಉತ್ತರಿಸಿದ್ದೆ.
ಶುದ್ಧ ದೇಸಿ ಗೋವಿನ ತುಪ್ಪ ಹೆಸರಿನಲ್ಲಿ ರಾಮದೇವನು ತುಪ್ಪವನ್ನು ಬಿಡುಗಡೆ ಮಾಡಿದಾಗ ಇಡೀ ಮಾಧ್ಯಮಗಳು ಆತನ ಮೇಲೆ ಮುಗಿಬಿದ್ದವು. ಅದೊಂದು ಸುಳ್ಳು ಪ್ರಚಾರ ಎಂದು ತನಿಖೆಯಲ್ಲಿ ಸಾಬೀತಾಗಿತ್ತು. ಇಂದು ಸಹ ಅರ್ಧದಷ್ಟು ಹೆಚ್ಚು ಉತ್ಪನ್ನಗಳು ಕೇಂದ್ರ ಸರ್ಕಾರದ ಆಹಾರ ಉತ್ಪನ್ನಗಳ ಪರಿಶೀಲನಾ ಸಮಿತಿಯಿಂದ ಪರವಾನಗಿ ಪಡೆದಿಲ್ಲ. ಈಗಾಗಲೇ ಅಮರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಆತನ ಉತ್ಪನ್ನಗಳ ಮೇಲೆ ನಿಷೇಧ ಹೇರಿವೆ. ಆದರೆ, ದೇಶಭಕ್ತರು ಮತ್ತು ಧರ್ಮಭಕ್ತರು ವ್ಯಾಪಕ ಸಂಖ್ಯೆಯಲ್ಲಿ ಆತನ ಖಾಯಂ ಗಿರಾಕಿಗಳಾಗಿರುವುದರಿಂದ ಆತನ ಮಾರಾಟಕ್ಕೆ ಧಕ್ಕೆಯಾಗಿಲ್ಲ. ಹೊಟ್ಟೆಗೆ ಅನ್ನ ತಿನ್ನುವ ಯಾವುದೇ ವ್ಯಕ್ತಿ ‘ ಮನುಷ್ಯನ ದೇಹಕ್ಕೆ ಮೈದಾ ಮತ್ತು ಸಕ್ಕರೆ’ ಈ ಎರಡೂ ಪದಾರ್ಥಗಳು ಒಳ್ಳೆಯದಲ್ಲ ಎಂದು ಹೇಳಬಲ್ಲ. ಹತ್ತು ವರ್ಷಗಳ ಹಿಂದೆ ನೆಸ್ಲೆ ಕಂಪನಿಯ ಮ್ಯಾಗಿ ಎಂಬ ಮೈದಾ ಶ್ಯಾವಿಗೆಯ ಮೇಲೆ ಕೇಂದ್ರ ಸರ್ಕಾರವು ನಿಷೇಧ ಹೇರಿತ್ತು. ಅದಕ್ಕೆ ಬೆರೆಸಲಾಗಿರುವ ರಸಾಯನಿಕದಲ್ಲಿ ವಿಷಕಾರಿ ಅಂಶಗಳಿವೆ ಎಂದು ನಿಷೇಧ ಹೇರಲಾಗಿತ್ತು. ಮನುಷ್ಯನ ಆರೋಗ್ಯದ ಬಗ್ಗೆ ಮತ್ತು ಆಯುರ್ವೇಧದ ಬಗ್ಗೆ ಭಾಷಣ ಬಿಗಿಯುವ ಬಾಬಾ ರಾಮದೇವ ತಕ್ಷಣ ಪತಾಂಜಲಿ ಹೆಸರಿನಲ್ಲಿ ಮ್ಯಾಗಿ ಮಾದರಿಯ ಶ್ಯಾವಿಗೆಯ ಪಾಕೇಟ್ ಗಳನ್ನು ಬಿಡುಗಡೆ ಮಾಡಿದ್ದ.
ಮನುಷ್ಯನ ಚರ್ಮ ರಕ್ಷಣೆಗೆ ಅರಿಶಿನ ಮತ್ತು ಶ್ರೀಗಂದ ಇವುಗಳ ಲೇಪನ ಹೊರತು ಪಡಿಸಿ ಉಳಿದ ಯಾವ ಪದಾರ್ಥಗಳಿಂದ ಉಪಯೋಗವಿಲ್ಲ. ಕೇವಲ ಹದಿನೈದು ದಿನಗಳಲ್ಲಿ ಕಪ್ಪಗಿದ್ದವರು ಬೆಳ್ಳಗಾಗುತ್ತಾರೆ ಎಂಬ ಮುಂಡಾ ಮೋಚುವ ಕ್ರೀಮ್ ಗಳು ಇಂದು ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭ ತಂದುಕೊಡುವ ಉದ್ಯಮಗಳಗಳಾಗಿವೆ. ಜಾಹಿರಾತಿನ ಮೂಲ ಪಠ್ಯಗಳಲ್ಲಿ ‘ಮಹಿಳಾ ಗ್ರಾಹಕರು’ ಬಹುಬೇಗ ಸುಳ್ಳು ಮತ್ತು ಆಮೀಷಗಳಿಗೆ ಒಳಗಾಗುವ ಜೀವಗಳು ಎಂಬ ಸತ್ಯವಿದೆ. ಈ ಅಂಶ ಇಂದಿಗೂ ಸಹ ಬಹುರಾಷ್ಟ್ರೀಯ ಕಂಪನಿಯ ಮೂಲ ದ್ಯೇಯಗಳಲ್ಲಿ ಒಂದಾಗಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ನೂರಕ್ಕೂ ಹೆಚ್ಚಿನ ಬ್ರಾಂಡ್ ಗಳ ಕ್ರೀಮ್ ಗಳು, ಲೋಷನ್ ಗಳು ಮತ್ತು ಸಾಬೂನುಗಳು ದೊರೆಯುತ್ತವೆ. ಅರವತ್ತಾರು ವರ್ಷದ ನಾನು ಈವರೆಗೆ ಮುಖಕ್ಕೆ ಯಾವುದೇ ಕ್ರೀಮ್, ಪೌಡರ್ ಅಥವಾ ಲೋಷನ್ ಬಳಸಿಲ್ಲ. ಬೆಳಿಗ್ಗೆ ಸ್ನಾನ ಮಾಡುವಾಗ ಮೈಸೂರು ಸ್ಯಾಂಡಲ್ ಸೋಪ್ ನಿಂದ ಒಮ್ಮೆ ಮುಖ ತೊಳದರೆ, ಮತ್ತೇ ಸೋಪ್ ಉಪಯೋಗಿಸುವುದಿಲ್ಲ. ನನ್ನ ಮುಖದಲ್ಲಿ ಇಂದಿಗೂ ಒಂದು ಕಲೆ, ಅಥವಾ ಮೊಡವೆ ಇಲ್ಲ. ತಲೆಗೆ ಸೀಗೆಕಾಯಿ ಪುಡಿ ಬಳಸುವುದನ್ನೂ ಇಂದಿಗೂ ಮುಂದುವರಿಸಿದ್ದೀನಿ. ಹೊರಗಡೆ ಪ್ರವಾಸ ಹೋದಾಗ ಮಾತ್ರ ಶಾಂಪು ಪಾಕೇಟ್ ಬಳಸುತ್ತೇನೆ. ಇದು ನಮ್ಮ ಪೂರ್ವಿಕರಿಂದ ನನಗೆ ಬಂದ ದೇಶಿ ಜ್ಞಾನಶಿಸ್ತು.
ಇಂದು ಪತಾಂಜಲಿ ಹೆಸರಿನಲ್ಲಿ ಎಲ್ಲವೂ ಶುದ್ಧ ಮತ್ತು ನೈಸರ್ಗಿಕ ಮತ್ತು ಆರೋಗ್ಯಕರ ಎಂದು ಹೇಳಿಕೊಳ್ಳುವ ವಸ್ತುಗಳನ್ನು ಬಳಸುವುದು ಇರಲಿ ಇವುಗಳನ್ನು ಮುಟ್ಟಿದರೆ ಸ್ನಾನ ಮಾಡಬೇಕು ಎಂಬ ಮನಸ್ಥಿತಿಯಲ್ಲಿ ನಾನಿದ್ದೀನಿ.ಈತನ ಉತ್ಪನ್ನಗಳ ಕುರಿತಂತೆ ಒಂದನೂರಕ್ಕೂ ಹೆಚ್ಚು ವಿವಾದಗಳು ಮತ್ತು ಆರೋಪಗಳು ಬಾಬಾ ರಾಮದೇವನ ಮೇಲಿವೆ. ಮೋದಿಯ ರಕ್ಷಣೆಯಲ್ಲಿರುವ ಈತನ ಮೇಲೆ ಯಾವುದೇ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಹಿಂಜರಿಯುತ್ತವೆ. ಇಲ್ಲದಿದ್ದರೆ ಈ ವೇಳೆಗಾಗಲೇ ಇವನು ಜೈಲು ಸೇರಬೇಕಾಗಿತ್ತು. ಈತನ ಉತ್ಪನ್ನಗಳು ತಿಪ್ಪೆ ಗುಂಡಿಯಲ್ಲಿರಬೇಕಿತ್ತು. ಧಾರವಾಡ ಸೇರಿದಂತೆ ಪ್ರಮುಖ ನಗರ ಪಟ್ಟಣಗಳಲ್ಲಿ ನಾಯಿಕೊಡೆಯಂತೆ ತಲೆ ಎತ್ತಿದ್ದ ಪತಾಂಜಲಿ ಉತ್ಪನ್ನಗಳ ಮಳಿಗೆಗಳು ಈಗ ಒಂದೊಂದಾಗಿ ಬಾಗಿಲು ಮುಚ್ಚುತ್ತಿವೆ.
ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



