ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಉನ್ನತ ಸಮಿತಿ ರಚನೆ

2 years ago

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಹಾಕಲಾಗಿದೆ ಎಂಬ ದೃಶ್ಯಗಳನ್ನು ವಿಧಿ ವಿಜ್ಞಾನ ತಂತ್ರಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಘಟನೆ ಬಗ್ಗೆ ತನಿಖೆಗೆ ಉನ್ನತ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಘಟನೆಯ ಕುರಿತು ವಿವರ ನೀಡಿದ ಅವರು, ಘಟನೆಯನ್ನು ಪರಿಶೀಲಿಸಲಾಗುತ್ತಿದೆ. ದೇಶದ್ರೋಹದ ಘೋಷಣೆಯನ್ನು ಕೂಗಿದ್ದರೆ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಎಫ್‍ಎಸ್‍ಎಲ್ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಅದರ ಬಳಿಕ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಘೋಷಣೆ ಕೂಗಿ ಪರಾರಿಯಾಗಿದ್ದಾನೆ ಎನ್ನಲಾದ ವ್ಯಕ್ತಿಗಾಗಿ ನಗರ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಯ ಬಂಧನಕ್ಕೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಆ ತಂಡಗಳು ಈಗಾಲೇ ಕಾರ್ಯಾಚರಣೆ ಆರಂಭಿಸಿವೆ. ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆಯೆಂಬ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ತುಣುಕುಗಳನ್ನು ಪೊಲೀಸರು ಸಂಗ್ರಹಿಸಿದ್ದು, ಹೆಚ್ಚಿನ ತನಿಖೆಗಾಗಿ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಆ ವರದಿ ಬಂದ ನಂತರ ಯಾರು ಆ ಘೋಷಣೆಗಳನ್ನು ಕೂಗಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿದು ಬರಲಿದೆ ಎಂದರು.

ಇಂತಹ ಘಟನೆ ರಾಜ್ಯದ ಯಾವುದೇ ಮೂಲೆಯಲ್ಲೂ ನಡೆದರೂ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಇದರಲ್ಲಿ ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಲ್ಲದರ ಬಗ್ಗೆಯೂ ಕೂಲಂಕುಷ ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಇದರಲ್ಲಿ ಎರಡು ಮಾತಿಲ್ಲ ಎಂದರು.

ಘಟನೆಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಎಲ್ಲವನ್ನು ಪರಿಶೀಲನೆ ನಡೆಸಲಾಗಿದ್ದು, ಘೋಷಣೆ ಕೂಗಿದರು ಎನ್ನಲಾದ ಸ್ಥಳದಲ್ಲಿ ಯಾರಿದ್ದರು ಎನ್ನುವುದನ್ನು ಗುರುತಿಸಿ, ಅವರನ್ನು ವಿಚಾರಣೆ ನಡೆಸಲಾಗುತ್ತದೆ. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಏನೆಲ್ಲ ಕಾನೂನು ರೀತ್ಯ ಕ್ರಮ ಜರುಗಿಸಬೇಕೋ ಆ ಕ್ರಮ ಆಗುತ್ತದೆ. ಯಾವುದೇ ಕಾರಣಕ್ಕೂ ರಾಜಿ ಪ್ರಶ್ನೆಯೇ ಇಲ್ಲ ಎಂದರು.

ಯಾರೋ ಒಬ್ಬ ಮಾಡಿದ್ದಾನೆಂಬುದನ್ನು ಕಾಂಗ್ರೆಸ್ ಪಕ್ಷಕ್ಕೆ ತಳುಕು ಹಾಕುವುದು ಸರಿಯಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮಾಡಿ, ವರದಿ ಆಧರಿಸಿ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ. ಬಿಜೆಪಿ ಪಕ್ಷ ಆರಂಭದಿಂದಲೂ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂದು ಹೇಳುತ್ತಲೇ ಇದ್ದಾರೆ. ಕಾಂಗ್ರೆಸ್ ಪಕ್ಷ ಏನು ತಪ್ಪು ಮಾಡಿದೆ ಎಂದರು.

ಈಗಾಗಲೇ ಎಫ್‌ಎಸ್‌ಎಲ್‌ನವರು ಪರಿಶೀಲನೆ ಕೈಗೊಂಡಿದ್ದಾರೆ. ಎಲ್ಲ ವಿಡಿಯೋ ತುಣುಕುಗಳನ್ನು ಸಂಗ್ರಹಿಸುತ್ತಿದ್ದಾರೆ. ಅಧಿಕೃತವಾಗಿ ಸುದ್ದಿ ವಾಹಿನಿಯಲ್ಲಿ ಮೊದಲು ಪ್ರಸಾರವಾದ ವಿಡಿಯೋಗಳನ್ನು ಎಫ್‌ಎಸ್‌ಎಲ್‌ನವರು ಪಡೆಯಲಿದ್ದಾರೆ. ವೈಜ್ಞಾನಿಕವಾಗಿ ಖಚಿತವಾದರೆ ತಪ್ಪಿತಸ್ಥನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಬಿಜೆಪಿಯವರು ಕೊಟ್ಟಿರುವ ದೂರನ್ನು ಪರಿಗಣಿಸಲಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ದೇಶದ್ರೋಹಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ, ಮುಲಾಜಿಲ್ಲದೇ ಮಟ್ಟ ಹಾಕಲಾಗುವುದು. ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆಯೇ? ಇಲ್ಲವೇ ಎಂಬ ಬಗ್ಗೆ ಮೊದಲು ತನಿಖೆಯಾಗಬೇಕಿದೆ ಎಂದರು.

ಸಂಬಂಧಪಟ್ಟ ವಿಡಿಯೋಗಳನ್ನು ಈಗಾಗಲೇ ಎಫ್‍ಎಸ್‍ಎಲ್‍ಗೆ ಕಳುಹಿಸಿದ್ದೇವೆ. ಘೋಷಣೆ ಕೂಗಿದ್ದೇ ಆಗಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ರೀತಿಯ ಕೃತ್ಯಗಳಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಅನಿವಾರ್ಯ. ದೇಶದ್ರೋಹಿಗಳನ್ನು ಮಟ್ಟ ಹಾಕಲಾಗುವುದು ಎಂದರು.

Leave a Reply