ನಮ್ಮ ಮೊಬೈಲ್ ನಿಂದ ಕೆಲವರ ಮುಖದಲ್ಲಿ ಸಂತೋಷ ತುಂಬಿಸಬಹುದು

2 years ago

ನಮ್ಮಲ್ಲಿರುವ ಮೊಬೈಲ್ ಕೇವಲ ನಮಗಷ್ಟೇ ಸಂತೋಷವನ್ನು ಕೊಡುತ್ತದೆ. ಆದರೆ ಈ ಮೊಬೈಲ್ ನಿಂದ ಮತ್ತಷ್ಟು ಮಕ್ಕಳ ಮುಖದಲ್ಲಿ ಸಂತೋಷವನ್ನು ಕಾಣಬಹುದು ಎನ್ನುವುದನ್ನು ತಿಳಿಯಬೇಕಾದರೆ ಒಮ್ಮೆ ತುಮಕೂರಿನಲ್ಲಿರುವ ನಡೆದಾಡುವ ದೇವರು ನೆಲೆಸಿರುವ ಸಿದ್ಧಗಂಗಾ ಮಠದ ವಾಹನಗಳ ನಿಲ್ದಾಣದ ಜಾಗದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಒಮ್ಮೆ ಹೋಗಿ ಬಂದರೆ ಇದರ ಅರಿವಾಗುತ್ತದೆ.

ನಡೆದಾಡುವ ದೇವರು ವಿಶ್ರಾಂತಿ ಪಡೆಯುತ್ತಿರುವ ಸಿದ್ದಗಂಗಾ ಮಠದಲ್ಲಿ ಹಲವಾರು ಸಾವಿರ ಮಕ್ಕಳು ವಿದ್ಯೆಯನ್ನ ಕಲಿಯುತ್ತಾ ಅಲ್ಲಿ ಆಶ್ರಯವನ್ನು ಪಡೆದಿದ್ದಾರೆ. ಈ ಮಕ್ಕಳು ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ, ದೂರದ ಜಿಲ್ಲೆಗಳಿಂದ, ಗ್ರಾಮಗಳಿಂದ ಬಂದವರಾಗಿದ್ದಾರೆ. ಪ್ರತಿದಿನವೂ ತಮ್ಮ ಹೆತ್ತವರ ಜೊತೆಯಲ್ಲಿ ಮಾತನಾಡಲು ಸಾಧ್ಯವಾಗುವುದಿಲ್ಲ, ತಮ್ಮ ಸಂತೋಷವನ್ನು, ದುಃಖವನ್ನ ಅವರೊಂದಿಗೆ ಹಂಚಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಇವರು ವಾಹನ ನಿಲುಗಡೆ ಪ್ರದೇಶದಲ್ಲಿ ಮಠಕ್ಕೆ ಬರುವ ಭಕ್ತರ ಮೊಬೈಲ್ ಫೋನ್ಗಳ ಸಹಾಯಕ್ಕಾಗಿ ಕಾಯುತ್ತಿರುತ್ತಾರೆ. ನಿಮ್ಮ ಮೊಬೈಲನ್ನು ಆ ಮಕ್ಕಳ ಕೈಗೆ ನೀಡಿದರೆ ಅಥವಾ ಅವರು ಹೇಳುವ ನಂಬರ್ಗಳಿಗೆ ಸಂಪರ್ಕವನ್ನು ಮಾಡಿ ಫೋನ್ಗಳನ್ನ ಅವರ ಕೈಗೆ ಕೊಟ್ಟರೆ ಅವರ ಮುಖದಲ್ಲಿ ಅದೆಷ್ಟು ಸಂತೋಷ? ಅದೇನು ಸಂಭ್ರಮ? ಇವುಗಳನ್ನ ಕಾಣಲು ನಾವು ಸಂತೋಷ ಪಡುತ್ತೇವೆ.

ತಮ್ಮ ತಾಯಿಯೊಂದಿಗೆ ಮಾತನಾಡುವಾಗ ಆ ಮಕ್ಕಳ ಮುಖದಲ್ಲಿ ಮೂಡುವ ಸಂತೋಷ ಕಣ್ಗಳಲ್ಲಿ ಕಾಣಿಸುವ ಪ್ರೀತಿಯ ಭಾವನೆ ತಂದೆಯೊಂದಿಗೆ ಮಾತನಾಡುವಾಗ ಅವರ ಹಾವಭಾವಗಳು ತಮ್ಮ ಒಡಹುಟ್ಟಿದವರೊಂದಿಗೆ ತಮ್ಮ ಸುಖ ದುಃಖಗಳನ್ನ ಹಂಚಿಕೊಳ್ಳುವಾಗ ಅವರ ಧ್ವನಿಯಲ್ಲಿನ ಏರಿಳಿತ ಇವುಗಳನ್ನ ಗಮನಿಸುತ್ತಾ ಅಲ್ಲಿ ನಿಂತರೆ ನಮ್ಮ ಮೊಬೈಲ್ ಗಳು ಎಷ್ಟು ಸಾರ್ಥಕವಾಯಿತು ಎನಿಸುತ್ತದೆ.

ಮಕ್ಕಳ ಭವಿಷ್ಯದ ಕನಸು ಕಾಣುತ್ತಾ ದೂರದ ಊರುಗಳಲ್ಲಿ ಶ್ರಮದ ಬದುಕನ್ನ ನಡೆಸುತ್ತಿರುವ ಆ ತಂದೆ ತಾಯಿಯರನ್ನು ಸಂಪರ್ಕಿಸಿ ಮಾತನಾಡಬೇಕೆಂಬ ಆತುರ ಆಸೆ ಈ ಮಕ್ಕಳಲ್ಲಿ ಇರುತ್ತದೆ. ತಮ್ಮ ಮಕ್ಕಳು ತಮ್ಮೊಂದಿಗೆ ಮಾತನಾಡಬೇಕೆಂಬ ಬಯಕೆಯೂ ಅವರಲ್ಲಿರುತ್ತದೆ.

ಪುಟ್ಟ ಪುಟ್ಟ ಮಕ್ಕಳು ಇನ್ನೂ ಕಲಿಯುತ್ತಿರುವ ಬಾಲಕರು ಇವರುಗಳ ಬಳಿಯಲ್ಲಿ ಮೊಬೈಲ್ ಇರುವುದಿಲ್ಲ. ಆದರೆ ತಮ್ಮವರನ್ನ ಮಾತನಾಡಿಸಬೇಕೆಂಬ ಆಸೆಯಂತೂ ಇದ್ದೇ ಇರುತ್ತದೆ. ಇದಕ್ಕಾಗಿ ಇವರು ಮಧ್ಯಾಹ್ನದ ಊಟದ ಸಮಯದಲ್ಲಿ ವಾಹನ ನಿಲುಗಡೆ ಪ್ರದೇಶದಲ್ಲಿ ಬರುವ ಭಕ್ತರ ಮೊಬೈಲ್ ಗಳ ಬಳಕೆಗಾಗಿ ಅವುಗಳ ಮೂಲಕ ತಮ್ಮ ಕನಸುಗಳನ್ನು ತಮ್ಮ ಇಚ್ಛೆಗಳನ್ನ ಈಡೇರಿಸಿಕೊಳ್ಳಲು ಕಾತುರದಿಂದ ಕಾಯುತ್ತಿರುತ್ತಾರೆ.

ಇಂತಹ ಮಕ್ಕಳ ಸಂತೋಷಕ್ಕಾಗಿ ಬಿಡುವಿನ ವೇಳೆಯಲ್ಲಿ ನಾವು ನೀವೆಲ್ಲರೂ ಅಲ್ಲಿಗೆ ಹೋಗಿ ಆ ಮಕ್ಕಳ ಬದುಕಿಗೆ ಸಣ್ಣದಾದ ಸಂಭ್ರಮದ ಕ್ಷಣವನ್ನು ಕಲ್ಪಿಸಿ ಕೊಡಬಹುದಲ್ಲವೇ?

– ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply