ಬೆಂಗಳೂರು: ರಾಜ್ಯದ ಜನರಿಗೆ ನೀಡಿರುವ 5 ಗ್ಯಾರಂಟಿಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೇವೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗದಂತೆ ಭರವಸೆಗಳನ್ನು ಜಾರಿ ಮಾಡುತ್ತೇವೆ. ಸದ್ಯ ಎಲ್ಲ ಗ್ಯಾರಂಟಿಗಳಿಗೆ ಸಚಿವ ಸಂಪುಟ ತಾತ್ವಿಕವಾಗಿ ಮಾತ್ರ ಒಪ್ಪಿಗೆ ನೀಡಿದೆ. ಮುಂದಿನ ಸಚಿವ ಸಂಪುಟ ಸಭೆ ಬಳಿಕ ಅಧಿಕೃತವಾಗಿ ಜಾರಿ ಮಾಡುತ್ತೇವೆ ಎಂದರು.
ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ದೃಷ್ಟಿಯಿಂದ ಕಟ್ಟುನಿಟ್ಟಾಗಿ ತೆರಿಗೆಯನ್ನು ವಸೂಲಿ ಮಾಡಿ ಗ್ಯಾರಂಟಿ ಜಾರಿ ಮಾಡಲಾಗುವುದು ಆರ್ಥಿಕ ಶಿಸ್ತುಕಾಪಾಡಿಕೊಳ್ಳಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಗೃಹ ಜ್ಯೋತಿ ಯೋಜನೆಯಡಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ಇದಕ್ಕೆ ಸುಮಾರು ತಿಂಗಳಿಗೆ 1200 ಕೋಟಿ ರೂ. ಆಗಬಹುದು. ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆ ಯಜಮಾನಿಗೆ ಪ್ರತಿ ತಿಂಗಳು 2000 ರೂ. ಹಾಕಲಾಗುವುದು. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುವುದು. ಈ ವರ್ಷದಲ್ಲಿ ಪದವೀಧರ, ಪಿಎಚ್ಡಿ, ಎಂಬಿಬಿಎಸ್ ಪದವೀದರರಾಗುವ ನಿರುದ್ಯೋಗಿಗಳಿಗೆ ಎರಡೂವರೆ ವರ್ಷಗಳವರೆಗೆ ತಿಂಗಳಿಗೆ ಮೂರು ಸಾವಿರ ರೂ. ನೀಡಲಾಗುವುದು. ಈ ನಡುವೆ ಉದ್ಯೋಗ ಸಿಕ್ಕರೆ ಯುವ ನಿಧಿ ನೀಡಲಾಗುವುದಿಲ್ಲ. ಡಿಪ್ಲಮಾ ಪಾಸ್ ಮಾಡಿದ ನಿರುದ್ಯೋಗಿಗಳಿ ಒಂದೂವರೆ ಸಾವಿರ ರೂ., ಎಲ್ಲಾ ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಕರ್ನಾಟಕದ ಮಹಿಳೆಯರಿಗೆ ಫ್ರೀ ಪಾಸ್ ನೀಡಲಾಗುವುದು. ಬೇರೆ ರಾಜ್ಯಗಳ ಮಹಿಳೆಯರಿಗೆ ಈ ಭಾಗ್ಯ ಇರುವುದಿಲ್ಲ ಎಂದರು. 5 ಗ್ಯಾರಂಟಿಗಳಿಗೆ ತಾತ್ವಿಕವಾಗಿ ಸಂಪುಟದಲ್ಲಿ ಒಪ್ಪಿಗೆ ನೀಡಿದ್ದೇವೆ ಎಂದರು.
ವಿಧಾನಸಭೆ ಅಧಿವೇಶನ: ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿರುವ ನೂತನ ಶಾಸಕರಿಗೆ ಪ್ರಮಾಣ ವಚನ ಮತ್ತು ಪ್ರತಿಜ್ಞಾವಿಧಿ ಬೋಧಿಸಲು ಅನುವಾಗುವಂತೆ ಸೋಮವಾರದಿಂದ ವಿಧಾನಸಭೆಯ ಕಲಾಪ ನಡೆಯಲಿದೆ ಶಾಸನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿರುವ ಆರ್.ವಿ.ದೇಶಪಾಂಡೆ ಅವರು ಹಂಗಾಮಿ ಸಭಾಪತಿಗಳಾಗಿ ಪ್ರತಿಜ್ಞಾವಿಧಿ ಮತ್ತು ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ತಿಳಿಸಿದರು.
ಹಿಂದಿನ ವಿಧಾನಸಭೆಯ ಅವಧಿ ಮೇ 23ಕ್ಕೆ ಅಂತ್ಯವಾಗಲಿದ್ದು, ಅಷ್ಟರೊಳಗೆ ಶಾಸಕರ ಪ್ರಮಾಣವಚನ ಸ್ವೀಕಾರ ಪೂರ್ಣಗೊಳ್ಳಬೇಕಿದೆ. ಆ ಬಳಿಕ ವಿಧಾನಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಜುಲೈ ತಿಂಗಳಿನಲ್ಲಿ ಬಜೆಟ್ ಮಂಡಿಸಲಾಗುವುದು. ಐದು ಗ್ಯಾರಂಟಿಗಳ ಅನುಷ್ಠಾನ ಸೇರಿದಂತೆ ಸರ್ಕಾರದ ಹೊಸ ಕಾರ್ಯಕ್ರಮಗಳಿಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಈ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಯಾರ ಖಾತೆಗೆ, ಯಾರ ಹೆಸರಿಗೆ ಹಣ ಹಾಕಬೇಕು, ಪದವೀಧರರು ಎಂದರೆ ಯಾರು, ಮನೆಯ ಒಡತಿ ಎಂದರೆ ಯಾರನ್ನು ಪರಿಗಣಿಸಬೇಕು ಎಂಬೆಲ್ಲಾ ವಿಚಾರಗಳನ್ನು ಪರಿಶೀಲಿಸಬೇಕಿದೆ ಎಂದರು. ನಮ್ಮ ಸರ್ಕಾರ ಇಂದಿರಾ ಕ್ಯಾಂಟಿನ್ ಗಳನ್ನು ಮತ್ತೆ ಪುನರಾಂಭಿಸತ್ತೇವೆ ಎಂದು ಹೇಳಿದರು.




