ಬೆಂಗಳೂರು: ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಜನರ ಹರ್ಷೋದ್ಗಾರ, ಮುಗಿಲುಮುಟ್ಟಿದ ಜಯ ಘೋಷಗಳ ನಡುವೆ ರಾಜ್ಯದ 21ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಿದರು. ಆನಂತರ ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗೂ ಮಂತ್ರಿಗಳಾಗಿ ಜಿ ಪರಮೇಶ್ವರ್ ಸತೀಶ್ ಜಾರಕಿಹೊಳಿ ಸೇರಿದಂತೆ ಎಂಟು ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.
ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೃಹತ್ ಜನಸ್ತೋಮ ಹಾಗೂ ರಾಷ್ಟ್ರ ಹಾಗೂ ರಾಜ್ಯ ನಾಯಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಿಎಂ, ಡಿಸಿಎಂ ಮತ್ತು ಮಂತ್ರಿಗಳಿಗೆ ಪ್ರಮಾಣ ವಚನ ಪ್ರತಿಜ್ಞಾವಿಧಿ ಬೋಧಿಸಿದರು.
ಮೊದಲಿಗೆ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನಂತರ ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ, ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಡಾ. ಜಿ ಪರಮೇಶ್ವರ್ ಅವರು ಮಂತ್ರಿಯಾಗಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಬಳಿಕ ಹಿರಿಯ ನಾಯಕ ಮುನಿಯಪ್ಪ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ನಂತರ ಕೆ.ಜೆ.ಜಾರ್ಜ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಎಂ.ಬಿ.ಪಾಟೀಲ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಸತೀಶ್ ಜಾರಕಿಹೊಳಿ ಅವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಿಯಾಂಕ್ ಖರ್ಗೆ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಮಲಿಂಗಾರೆಡ್ಡಿ ಅವರು ದೇವರ ಹೆಸರಿನಲ್ಲಿ, ಜಮೀರ್ ಅಹ್ಮದ್ ಖಾನ್ ದೇವರ ಹೆಸರು ಮತ್ತು ಅಲ್ಲಾಹುವಿನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.




