ಕಾರ್ಮಿಕ ಸಂಹಿತೆಗಳ ಜಾರಿಗೆ ವಿರೋಧ

5 months ago

ಅಧಿಸೂಚನೆ ದಹಿಸಿ ಸಿಐಟಿಯು ಪ್ರತಿಭಟನೆ

ದಾವಣಗೆರೆ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ, ಉದ್ಯೋಗದಾತರ ಪರ ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯ ಅನುಷ್ಠಾನ ಮಾಡಲು ಮುಂದಾಗಿ ಅಧಿಸೂಚನೆ ಪ್ರಕಟಿಸಿದೆ. ಇದು ದೇಶದ ದುಡಿಯುವ ಜನರ ವಿರುದ್ಧ ಕೇಂದ್ರ ಸರ್ಕಾರ ಮಾಡಿದ ಮೋಸದ ವಂಚನೆ ಎಂದು ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆ ಜಯದೇವ ವೃತ್ತದಲ್ಲಿ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಸಿ.ಐ.ಟಿ.ಯು. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ‌ ಮಾತನಾಡಿದ ಅವರು, 21 ನವೆಂಬರ್ 2025ರಂದು ಅಧಿಸೂಚನೆಗೊಳ್ಳುವ ಪೂರ್ವದಲ್ಲಿ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಕರೆದ ಸಭೆಯಲ್ಲಿ ನಾಲ್ಕು “ಕಾರ್ಮಿಕ ಸಂಹಿತೆಗಳು” ಎಂಬ ಈ ಅನಿಯಂತ್ರಿತ ಮತ್ತು ಪ್ರಜಾಪ್ರಭುತ್ವ ವಿರೋಧಿ ಅಧಿಸೂಚನೆಯು ಎಲ್ಲಾ ಪ್ರಜಾಸತ್ತಾತ್ಮಕ ನೀತಿಗಳನ್ನು ಧಿಕ್ಕರಿಸುತ್ತದೆ ಮತ್ತು ಭಾರತದ ಕಲ್ಯಾಣ ರಾಜ್ಯದ ಸ್ವರೂಪವನ್ನು ನಾಶಮಾಡಲಿದೆ ಎಂದು ಸಿ.ಐ.ಟಿ.ಯು. ಹಾಗೂ ಇತರೆ ಕೇಂದ್ರ ಕಾರ್ಮಿಕ ಸಂಘಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಆದರೆ ಅದನ್ನು‌ ಕಡೆಗಣಿಸಿರುವ ಕೇಂದ್ರ ಸರ್ಕಾರ ಬಿಹಾರ ಚುನಾವಣೆಯ ವಿಜಯದಿಂದ ಬೀಗಿ ಈ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಘೋಷಿಸಿದೆ. ಇದರಿಂದ ಭವಿಷ್ಯದಲ್ಲಿ ಕೋಟ್ಯಾಂತರ ಶ್ರಮಜೀವಿಗಳ ಬದುಕು ಅತಂತ್ರಗೊಳ್ಳಲಿದೆ ಎಂದು ಕೆ. ಮಹಾಂತೇಶ್ ಆಪಾದಿಸಿದರು.

ಕೇಂದ್ರ ಸರ್ಕಾರ ಕೂಡಲೇ ಭಾರತೀಯ ಕಾರ್ಮಿಕ ಸಮ್ಮೇಳನವನ್ನು (ILC) ತಕ್ಷಣವೇ ಕರೆಯುವಂತೆ ಒತ್ತಾಯಿಸಿದೆ ಮತ್ತು ಇದೇ ನವೆಂಬರ್26 ರಂದು ಸಂಯುಕ್ತ ಕಿಸಾನ ಮೊರ್ಚ(SKM) ಹಾಗೂ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆ(JCTU) ನೇತೃತ್ವದಲ್ಲಿ ದೇಶಾದ್ಯಂತ ಪ್ರತಿಭಟನೆ ಕರೆ ನೀಡಿದೆ. ಅಂದು ಹರಿಹರ ಪಾಲಿಪೈಬರ್ಸ್, ಗ್ರಾಸಿಂ ಹಾಗೂ ರಾಮ್ ಕೊ ಕಂಪನಿ ಕಾರ್ಮಿಕರು ಸಿ.ಐ.ಟಿ.ಯು. ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಸಿ.ಐ.ಟಿ.ಯು. ಜಿಲ್ಲಾ ಸಂಚಾಲಕ ಕೆ. ಮುದಿಮಲ್ಲನಗೌಡ  ಹೇಳಿದರು.

ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಲಿ ಇರುವ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಕಲ್ಯಾಣ ಮಂಡಳಿಗಳು ಮುಚ್ಚುವ ಅಪಾಯಗಳಿವೆ ಗುತ್ತಿಗೆ ಕಾರ್ಮಿಕರು ಮತ್ತಷ್ಟು ಶೋಷಣೆಗೆ ಒಳಗಾಗಲಿದ್ದಾರೆ ಎಂದು ಸಿ.ಐ.ಟಿ.ಯು. ರಾಜ್ಯ ಕಾರ್ಯದರ್ಶಿ ಕೆ.ಹೆಚ್. ಆನಂದರಾಜು ಆರೋಪಿಸಿದರು.

ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಮತ್ತು  ಮನುಸೃತಿ ಆಧಾರಿತ ಶ್ರಮ ಶಕ್ತಿ ನೀತಿ 2025 ರ ಕರಡನ್ನು ಹಿಂತೆಗೆದುಕೊಳ್ಳಬೇಕೇಂದು ಹರಿಹರ ಪಾಲಿಪೈಬರ್ಸ್ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಕೋಟ್ರೇಶ ಓಲೇಕಾರ್ ಆಗ್ರಹಿಸಿ ಇಲ್ಲದಿದ್ದರೆ ಭಾರತದ ದುಡಿಯುವ ಜನರು ತೀವ್ರ ಪ್ರತಿಭಟನೆಯ ಕೇಂದ್ರ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಜಿ.ಡಿ. ಖಜಾಂಚಿಯಾದ ನೇತ್ರಾವತಿ, ಗಜೇಂದ್ರ, ಹನುಮಂತಪ್ಪ, ಮಂಜುನಾಥ್, ಮುರುಳಿ, ಶಿವಪ್ಪ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘದ ಮುಖಂಡರಾದ ಹಾಲೇಶ್ ನಾಯಕ್, ಸದಾಶಿವ ನಾಯಕ್, ಎಲ್.ಐ.ಸಿ. ಏಜೆಂಟ್ಸ್ ಯೂನಿಯನ್ ಜಿಲ್ಲಾ ಮುಖಂಡರಾದ ಸವಿತಾ ಜಿ.ಜಿ., ಆಟೋ ಚಾಲಕರ ಸಂಘದ ಮುಖಂಡರಾದ ಶ್ರೀನಿವಾಸ ಮೂರ್ತಿ, ಬೀದಿಬದಿ ಮಾರಾಟಗಾರರ ಸಂಘದ ನಾಗರಾಜ್, ಗ್ರಾಸಿಂ ನೌಕರರ ಸಂಘದ ಮಂಜುನಾಥ್, ಎಚ್ ಪಿ ಎಫ್ ನೌಕರರ ಸಂಘದ ವಿನಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Leave a Reply