ಅನ್ನದ ಋಣದ ಮಹತ್ವ ಗೊತ್ತಿದ್ದವರಿಗೆ ಮಾತ್ರ ಇದು ಅರ್ಥವಾಗಬಲ್ಲದು

3 years ago

ಚಿಲ್ಕಾ ಸರೋವರದ ಬಳಿ ಒಂದು ರಾತ್ರಿ

ಅನ್ನ ಮತ್ತು ಆಶ್ರಯ ನೀಡಿದ ತಾಯಿಯ ನೆನಪುಗಳು

ಇತ್ತೀಚೆಗೆ ಒಡಿಸ್ಸಾದ  ಪುರಿಯ ಜಗನ್ನಾಥ ರಥಯಾತ್ರೆಯ ಕುರಿತು ಬರೆಯುವಾಗ ನಕ್ಸಲ್ ಕಥನಕ್ಕಾಗಿ 2011 ರಲ್ಲಿ ನಾನು ಓಡಾಡಿದ ಆಂಧ್ರ ಮತ್ತು ಒಡಿಸ್ಸಾದ ಸ್ಥಳಗಳು ಮತ್ತು ಅಲ್ಲಿನ ಜನರು ನೆನಪಾದರು. ಇವರುಗಳಲ್ಲಿ ಒಡಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಇರುವ ಏಷ್ಯಾ ಖಂಡದ ಅತ್ಯಂತ ದೊಡ್ಡದು ಎಂದು ಹೇಳಲಾಗುವ ಚಿಲ್ಕಾ ಸರೋವರದ ಬಳಿಯ ಹಳ್ಳಿಯೊಂದರಲ್ಲಿ ನಾನು ಹಾಗೂ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಗೆಳೆಯರು ಅನಿರೀಕ್ಷಿತವಾಗಿ ಓರ್ವ ಬುಡಕಟ್ಟು ಜನಾಂಗದ ತಾಯಿಯೊಬ್ಬಳ ಮನೆಯಲ್ಲಿ  ಒಂದು ರಾತ್ರಿ ತಂಗಬೇಕಾಯಿತು.

ಐದು ದಿನಗಳ ಕಾಲ ಶ್ರೀಕಾಕುಳಂ ಜಿಲ್ಲೆಯಲ್ಲಿ ಕ್ಷೇತ್ರ ಕಾರ್ಯ ಹಾಗೂ ಮಾಹಿತಿ ಸಂಗ್ರಹದೊಂದಿಗೆ ನನ್ನ ಕೆಲಸ ಮುಗಿದಿತ್ತು.  ಒಡಿಸ್ಸಾದ ಗಂಜಾಂ ಜಿಲ್ಲೆಯ ಬಿ.ಜೆ.ಡಿ. ಪಕ್ಷದಿಂದ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಓರ್ವ ವ್ಯಕ್ತಿಯೊಬ್ಬರ ಸುಪರ್ದಿಗೆ ನನ್ನನ್ನು ಒಪ್ಪಿಸಲು  ಬ್ರಹ್ಮಪುರ್ ಎಂಬ ರೈಲ್ವೆ ನಿಲ್ದಾಣದಿಂದ ಗಂಜಾ ರೈಲ್ವೆ ನಿಲ್ದಾಣಕ್ಕೆ  ಪ್ಯಾಸೆಂಜರ್ ರೈಲು ಹತ್ತಿಸುವಾಗ ಬೆಳಿಗ್ಗೆ ಹತ್ತು ಮುವತ್ತರ ಸಮಯಕ್ಕೆ ಸರಿಯಾಗಿ ಶ್ರೀಕಾಕುಳಂ ಗೆಳೆಯರಿಗೆ ಫೋನ್ ಸಂದೇಶ ಬಂದಿತು. ಹಿಂದಿನ ರಾತ್ರಿ ನಕ್ಸಲರು ಸ್ಪೋಟಿಸಿದ ನೆಲಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನಕ್ಸಲರ ಜೊತೆ ಸಂಪರ್ಕವಿದೆ  ಎಂಬ ಕಾರಣದಿಂದ ಆ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಈ ಕಾರಣದಿಂದ ನಾನು ಅವರ ಬಳಿ ಹೋಗುವುದು ಬೇಡ ಎಂದು ನಿರ್ಧರಿಸಿದ ಗೆಳೆಯರು ಒಂದು ದಿನ ತಡವಾಗಿ ಭುವನೇಶ್ವರಕ್ಕೆ ನನ್ನನ್ನು ಕಳಿಸಲು ನಿರ್ಧರಿಸಿದರು. ಆ ದಿನ ನನ್ನನ್ನು ತಮ್ಮ ವಾಹನದಲ್ಲಿ ಗೋಪಾಲ್ ಪುರ್ ಬಳಿಯ ನದಿಯತ್ತ ಕರೆದೊಯ್ದರು. ಮಧ್ಯಾಹ್ನ ಎಲ್ಲರೂ ಸ್ನಾನ ಮಾಡಿ ಮರದ ಕೆಳೆಗೆ ವಿಶ್ರಾಂತಿ ಪಡೆದೆವು. ಸಂಜೆಯ ವೇಳೆಗೆ ಚಿಲ್ಕಾ ಸರೋವರದ ಹಿನ್ನೀರಿನ ಒಂದು ಹಳ್ಳಿಗೆ ಹೋದೆವು. ಈ ಎಲ್ಲಾ ಗೆಳೆಯರಿಗೆ ಸರೋವರದ ಬಳಿಯ ಆದಿವಾಸಿಗಳು ಚಿರಪರಿಚಿತರಾಗಿದ್ದರು. ನನ್ನ ಗೆಳೆಯರಿಗೆ ತೆಲುಗು ಮಾತೃ ಭಾಷೆಯಾಗಿದ್ದರೂ ಸಹ ಒಡಿಸ್ಸಿ ಭಾಷೆಯನ್ನು ಬಲ್ಲವರಾಗಿದ್ದರು.

ಒಡಿಸ್ಸಾ ಸರ್ಕಾರವು ಆದಿವಾಸಿಗಳ ಭೂಮಿಯನ್ನು ಕಿತ್ತುಕೊಂಡು ಅವರನ್ನು ಒಕ್ಕಲೆಬ್ಬಿಸಿದಾಗ ಅವರ ಪರವಾಗಿ ಇವರೆಲ್ಲರೂ ದಶಕಗಳ ಕಾಲ ಹೋರಾಡಿದ್ದರು. ಒಡಿಸ್ಸಾ ಸರ್ಕಾರವು ಭೂಮಿಯನ್ನು ಆಶ್ರಯಿಸಿದ್ದ  ಒಂದೂವರೆ ಸಾವಿರ ಆದಿವಾಸಿ ಕುಟುಂಬಗಳಿಗೆ ಎಕರೆಗೆ ತಲಾ ನಾಲ್ಕನೂರು ರೂಪಾಯಿ ಪರಿಹಾರವನ್ನು  ನೀಡಿ, ಅದೇ ಭೂಮಿಯನ್ನು ಟಾಟಾ ಕಂಪನಿಗೆ ತಲಾ ನಾಲ್ಕು ಲಕ್ಷದಿಂದ ಆರು ಲಕ್ಷ ರೂಪಾಯಿಗೆ ಮಾರಾಟ ಮಾಡಿತ್ತು.

ಉಕ್ಕಿನ ಕಾರ್ಖಾನೆ ಸ್ಥಾಪಿಸುತ್ತೇವೆ ಎಂದು ಹೇಳಿದ್ದ ಕಂಪನಿಯು ಈಗ ಅಲ್ಲಿ ಇಂಜಿನಿಯರಿಂಗ್ ಕಾಲೇಜ್ ತೆರೆದಿದೆ. ಉಳಿದ ಭೂಮಿಗೆ ಬೇಲಿ ಹಾಕಿದೆ. ಇತರೆ ಕಂಪನಿಗಳು ಅದ್ದೂರಿಯ ರೆಸಾರ್ಟ್ ಮಾಡಿಕೊಂಡು ಪ್ರವಾಸಿಗರನ್ನು ಸೆಳೆಯುತ್ತಿವೆ. ಭೂಮಿ ಕಳೆದುಕೊಂಡ ಆದಿವಾಸಿಗಳಲ್ಲಿ ಕೆಲವರು ಮೀನು ಹಿಡಿದು ಬದುಕುತ್ತಿದ್ದರೆ, ಇನ್ನೂ ಕೆಲವರು ಅಲ್ಲಿನ ಗಿಡ್ಡ ತಳಿ ಹಸುಗಳನ್ನು ಅರಣ್ಯ ಮತ್ತು ಗುಡ್ಡಗಾಡಿನಲ್ಲಿ ಮೇಯಿಸಿಕೊಂಡು ಅವುಗಳ ಹಾಲು, ಮೊಸರು, ಬೆಣ್ಣೆಯ ಮಾರಾಟದಿಂದ ಬದುಕುತ್ತಿದ್ದಾರೆ.

ಸಂಜೆ ಆರು ಗಂಟೆಯ ವೇಳೆಗೆ ಓರ್ವ ಆದಿವಾಸಿ ವಿಧವೆಯ ಮನೆಗೆ ನನ್ನನ್ನು ಕರೆದೊಯ್ದರು. ಹೋಗುವಾಗಲೇ ನದಿಯ ಬಳಿ ಮೂರು ಕೆ..ಜಿ ಮೀನು ಖರೀದಿಸಿ,  ಸ್ವಚ್ಛ ಮಾಡಿಸಿಕೊಂಡಿದ್ದರು. ನಾಲ್ವರು ಗೆಳೆಯರು ಆ ತಾಯಿಯನ್ನು ಅಕ್ಕಾ ಎಂದು ಕರೆಯುತ್ತಿದ್ದರು. ಸುಮಾರು ಮುವತ್ತು ಹಸುಗಳನ್ನುಸಾಕಿಕೊಂಡು ಹಳ್ಳಿಯಲ್ಲಿ ಒಬ್ಬಂಟಿಯಾಗಿ ಬದುಕುತ್ತಿರುವ ಜೀವ ಅದು. ನಮಗೆಲ್ಲಾ ಹೋದ ತಕ್ಷಣ ಬೆಲ್ಲದ ಚಹಾ ಮಾಡಿಕೊಟ್ಟ ಆ ತಾಯಿ , ರಾತ್ರಿ ಎಂಟು ಗಂಟೆ ವೇಳೆಗೆ ಸ್ಥಳಿಯ ದೇಸಿ ತಳಿಯ ಅಕ್ಕಿಯಿಂದ ಅನ್ನ ತಯಾರಿಸಿ, ಮೀನಿನ ಸಾರು ಬಡಿಸಿದಳು. ಹೊಟ್ಟೆ ತುಂಬಾ ಊಟ ಮಾಡಿದ ನಮಗೆ ಮನೆಯ ಮುಂದಿನ ಪುಟ್ಟ ಛಾವಣಿಯ ಕಿರು ಅಟ್ಟದ ಮೇಲೆ ಹುಲ್ಲು ಹಾಕಿ ಅದರ ಮೇಲೆ ಜಮಖಾನ ಹಾಸಿಕೊಟ್ಟಳು.

ನಮ್ಮ ಬಳಿ ಇದ್ದ ಪಂಚೆ, ಟವಲ್ ಗಳು ಅಲ್ಲಿನ ಮಾರ್ಚ್ ತಿಂಗಳ ಸಖೆಗೆ ಹೊದಿಕೆಯಾಗಿದ್ದವು. ಚಿಲ್ಕಾ ಸರೋರವದ ಮೇಲಿನ ತಂಗಾಳಿ ಬೀಸುತ್ತಿದ್ದರಿಂದ ಸೊಳ್ಳೆಗಳು ಇರಲಿಲ್ಲ. ಲ್ಯಾಂಟಿನ್ ಹಚ್ಚಿಕೊಟ್ಟಿದ್ದರಿಂದ ಅದರ ಮಂದ ಬೆಳಕಿನಲ್ಲಿ ಗೆಳೆಯರು ಹೇಳುತ್ತಿದ್ದ ಆಂಧ್ರ ಮತ್ತು ಒಡಿಸ್ಸಾದ ಹೋರಾಟದ ಕಥನಗಳನ್ನು ಕೇಳುತ್ತಿದ್ದೆ. ಆ ಗೆಳೆಯರಲ್ಲಿ  ನನಗಿಂತ ಎರಡು ವರ್ಷ ದೊಡ್ಡವರಾದ ಹಾಗೂ ಆಂಧ್ರ ಜ್ಯೋತಿ ದಿನ ಪತ್ರಿಕೆಯ ಮುಖ್ಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿ  ಈಗ ಶ್ರೀಕಾಕುಳಂ ಜಿಲ್ಲೆಯ ತನ್ನೂರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಮಿತ್ರರಿದ್ದರು.  ಅವರು ನನಗೆ 1984 ರಿಂದ ಹೈದರಾಬಾದಿನಲ್ಲಿ ಪರಿಚಿತರು. ಅವರಿಂದಾಗಿ   ನನ್ನ ನಕ್ಸಲ್ ಅಧ್ಯಯನ ಸಾಧ್ಯವಾಯಿತು. ಏಕೆಂದರೆ, ಅವರ ಬಾಲ್ಯದ ಬಹುತೇಕ ಗೆಳೆಯರೆಲ್ಲಾ ಮಾಜಿ ನಕ್ಸಲರೇ ಆಗಿದ್ದರು.

ಬೆಳಿಗ್ಗೆ ಎಲ್ಲರೂ ಚಹಾ ಕುಡಿದು, ನದಿಗೆ ಹೋಗಿ ಸ್ನಾನ ಮಾಡಿ ಬರುವುದರಲ್ಲಿ ಆ ತಾಯಿಯು ನಮಗೆಲ್ಲಾ ಬಿಸಿ ಬಿಸಿ ಅನ್ನ ಮಾಡಿ ಮಡಿಕೆಯಲ್ಲಿ ತುಂಬಿಟ್ಟಿದ್ದ ಕೆನೆ ಮೊಸರನ್ನು ಬಡಿಸಿದಳು. ಬಾಲ್ಯದಲ್ಲಿ ನನ್ನ ಅಜ್ಜಿಯು ರಾತ್ರಿಯ ತಂಗಳನ್ನಕ್ಕೆ ಇಂತಹ ಮಡಿಕೆಯ ಮೊಸರು ಬಡಿಸಿ ನನ್ನ ಹೊಟ್ಟೆಯ ಹಸಿವು ತಣಿಸುತ್ತಿದ್ದ ದಿನಗಳು ನೆನಪಾದವು. ಅಲ್ಲಿನ ದೇಸಿ ಅಕ್ಕಿಯಿಂದ ತಯಾರಿಸಿದ ಅನ್ನ ನಿಜಕ್ಕೂ ನನ್ನ ಪಾಲಿಗೆ ಪರಮಾನ್ನವಾಗಿತ್ತು. ಹೊರಡುವ ಮುನ್ನ ಈ ತಾಯಿಗೆ ಏನಾದರೂ ನೀಡಬೇಕೆನಿಸಿತು.

ನನ್ನ ಮಿತ್ರನಿಗೆ ವಿವರಿಸಿದೆ. ನನ್ನೂರಿನ ಪಕ್ಕದ  ಹಳ್ಳಿಯಲ್ಲಿ ನನ್ನ ಅಕ್ಕ ಇದ್ದಾರೆ. ಈ ತಾಯಿಯನ್ನು ನೋಡುವಾಗ ನನ್ನಕ್ಕ ನೆನಪಾಗುತ್ತಿದ್ದಾರೆ. ಈ ಮನೆಗೆ ಬರುವ ವಿಷಯ ಮೊದಲೇ ಗೊತ್ತಿದ್ದರೆ ಈ ಜೀವಕ್ಕೆ ಒಂದು ಸೀರೆ ತರಬಹುದಿತ್ತು. ಈ ಅಕ್ಕನಿಗೆ  ನಾನು ಐನೂರು ರೂಪಾಯಿ ನೀಡಬೇಕು ಎಂದು ಆಸೆಯಾಗಿದೆ  ಅದನ್ನು ಸಹೋದರನ ಪ್ರೀತಿಯ ಕಾಣಿಕೆ ಎಂಬಂತೆ ಸ್ವೀಕರಿಸಲು ಹೇಳಿ ಕೈಯಲ್ಲಿ ಹಣ ಹಿಡಿದು ನಿಂತೆ. ನನ್ನ ಮಿತ್ರರು ಆಕೆಗೆ  ನನ್ನ ಮಾತನ್ನು ವಿವರಿಸಿದಾಗ ಭಾವುಕಳಾಗಿ ನನಗೆ ಕೈ ಮುಗಿದಳು. ಹಣ ನೀಡಿ ಆಕೆಯ ಕಾಲು ಮುಟ್ಟಿ ನಮಸ್ಕರಿಸಲು ಹೋದಾಗ ನನ್ನೆರೆಡು ಕೈಗಳನ್ನು ಹಿಡಿದುಕೊಂಡು ಕಣ್ಣಿಗೆ ಒತ್ತಿಕೊಂಡಳು. ತನ್ನ ಭಾಷೆಯಲ್ಲಿ ‘’ಇತ್ತ ಕಡೆ ಬಂದಾಗ ಈ ಬಡ ಸಹೋದರಿಯ ಮನೆಗೆ ಬಂದು ಹೋಗು ದೊರೆಯೇ’’ ಎಂದು ನುಡಿದಳು. ಮನೆಗೆ ಬಂದ ಅತಿಥಿಗಳನ್ನು ದೊರೆ ಎಂದು ಕರೆಯುವ ಆದಿವಾಸಿ ಅನಕ್ಷರಸ್ಥರ ಪ್ರೀತಿಯನ್ನು ಶಬ್ದಗಳಲ್ಲಿ ಬಣ್ಣಿಸಲಾಗದು.

ನಂತರ ನಾನು ಗೋಪಾಲಪುರದಲ್ಲಿ ಗೆಳೆಯರನ್ನು ಬೀಳ್ಕೊಟ್ಟು, ಭುವನೇಶ್ವರ ತಲುಪಿ, ನಂತರ ಪುರಿ ಪಟ್ಟಣಕ್ಕೆ ಹೋಗಿ ಅಲ್ಲಿನ ನಿವೃತ್ತ ಇತಿಹಾಸ ಪ್ರಾಧ್ಯಾಪಕರ ಮೂಲಕ ಒಡಿಸ್ಸಾ ರಾಜ್ಯದ ಮಾಹಿತಿ ಕಲೆ ಹಾಕಿ ರಾತ್ರಿ ಒಂಬತ್ತು ಗಂಟೆಗೆ ಪುರಿಯಿಂದ ಕೊಲ್ಕತ್ತ ನಗರಕ್ಕೆ ಹೊರಡುವ ರೈಲಿನಲ್ಲಿ ಪ್ರಯಾಣಿಸಿದೆ.

ಈ ಘಟನೆ ನಡೆದ ನಂತರ ಸುಮಾರು ನಾಲ್ಕು ಬಾರಿ ನಾನು ಶ್ರೀಕಾಕುಲಂ, ಗಂಜಾಂ, ಭುವನೇಶ್ವರ ಮಾರ್ಗದಲ್ಲಿ ಈಶಾನ್ಯ ಭಾರತ ಮತ್ತು ಕೊಲ್ಕತ್ತ, ಡಾರ್ಜಿಲಿಂಗ್ ಹಾಗೂ ಶಾಂತಿನಿಕೇತನಕ್ಕೆ ಹೋಗಿ ಬಂದೆ. ಪ್ರತಿ ಬಾರಿಯೂ  ಇತ್ತ ಕಡೆಯಿಂದ ಹೋಗುವಾಗ ಗೋಪಾಲ್ ಪುರ್ ದಾಟುತ್ತಿದ್ದಂತ ಮತ್ತು ಅತ್ತ ಕಡೆಯಿಂದ ಬರುವಾಗ ಗಂಜಾಂ ರೈಲ್ವೆ ನಿಲ್ದಾಣ ದಾಟುತ್ತಿದ್ದಂತೆ ರೈಲ್ವೆ ಬೋಗಿಯ ಬಾಗಿಲ ಬಳಿ ನಿಂತು ಆ ತಾಯಿಯ ಮನೆಯತ್ತ ನೋಡುತ್ತಾ ಕೈ ಮುಗಿದು ಬರುತ್ತೇನೆ. ಏಕೆಂದರೆ, ನನ್ನ ಪಾಲಿಗೆ ಮನೆಯಲ್ಲಿ ಒಂದು ಹೊತ್ತು ಊಟ ಹಾಕಿದ ಜೀವಗಳನ್ನು ಇಂದಿಗೂ ಸಹ ಮರೆಯಲು ಸಾಧ್ಯವಾಗಿಲ್ಲ. ಅನ್ನದ ಋಣದ ಮಹತ್ವ ಗೊತ್ತಿದ್ದವರಿಗೆ ಮಾತ್ರ ಇದು ಅರ್ಥವಾಗಬಲ್ಲದು.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply