ರಾಜ್ಯದೆಲ್ಲೆಡೆ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ: ಈಶ್ವರ ಖಂಡ್ರೆ

3 years ago

#greenfirecrackers #state #EshwarKhandre

ಬೆಂಗಳೂರು: ಪರಿಸರ ಮಾಲಿನ್ಯ ತಡೆಗಟ್ಟುವ ದೃಷ್ಟಿಯಿಂದ, ಕೋರ್ಟ್ ಆದೇಶದಂತೆ ರಾಜ್ಯದೆಲ್ಲೆಡೆ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶವಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.

ಪರಿಸರಕ್ಕೆ ಹಾನಿಕಾರಕವಾದ ಪಟಾಕಿಗಳ ತಯಾರಿಕೆ, ಸಾಗಾಟ, ದಾಸ್ತಾನು ಮತ್ತು ಮಾರಾಟವನ್ನು ನ್ಯಾಯಾಲಯವೇ ನಿಷೇಧಿಸಿದೆ. ಇದನ್ನು ಮಂಡಳಿ ಮತ್ತು ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಆದೇಶಿಸಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಇಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ರಾಜ್ಯಗಳಿಂದ ರಾಜ್ಯಕ್ಕೆ ಬರುವ ಹಾನಿಕಾರಕ ಪಟಾಕಿ ತಡೆಯಲು ರಾಜ್ಯದ ಗಡಿಯಲ್ಲಿ ತಪಾಸಣೆ ನಡೆಯುತ್ತಿದೆ. ಹಸಿರು ಪಟಾಕಿಗಳ ಮೇಲೆ ಕ್ಯು.ಆರ್. ಕೋಡ್ ಇರುತ್ತದೆ. ಇದನ್ನು ಸ್ಕ್ಯಾನ್ ಮಾಡಿದರೆ ಹಸಿರು ಪಟಾಕಿ ತಿಳಿಯುತ್ತದೆ ಎಂದರು.

ಜನರಲ್ಲಿ ಜಾಗೃತಿ ಮೂಡಿಸಿದರೆ, ಪಟಾಕಿಗಳಿಂದ ಆಗುವ ಅಪಾಯದ ಬಗ್ಗೆ ತಿಳಿಯ ಹೇಳಿದರೆ ಹಸಿರು ಪಟಾಕಿ ಉತ್ತೇಜಿಸಲು ಮತ್ತು ಹೊಗೆ ಉಗುಳುವ, ಅಪಾಯಕಾರಿ ಅಂಶ ಒಳಗೊಂಡ ಪಟಾಕಿ ನಿರ್ಬಂಧಿಸಲು ಸಾಧ್ಯ. ಹೀಗಾಗಿ ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಈ ಬಗ್ಗೆ ಜಾಗೃತಿ ಮೂಡಿಸಲು ಶ್ರಮಿಸುವಂತೆ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಅರ್ಜಿ ವಿಲೇವಾರಿ: ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರಾಕ್ಷೇಪಣಾ ಪತ್ರ (ಎನ್.ಓ.ಸಿ) ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸುವಂತೆ  ಸೂಚನೆ ನೀಡಲಾಗಿದೆ ಎಂದರು.

ಹಸಿರು ಪ್ರವರ್ಗದ ಕೈಗಾರಿಕಾ ಘಟಕಗಳ ಸ್ಥಾಪನೆಗಾಗಿ ಅನುಮತಿ ಕೋರಿ ಸಲ್ಲಿಸಲಾಗುವ ಅರ್ಜಿಗಳು ನಿಯಮಾನುಸಾರ ಇದ್ದಲ್ಲಿ 30 ದಿನಗಳ ಒಳಗೆ, ಕೇಸರಿ ಅಂದರೆ ಆರೆಂಜ್ ಪ್ರವರ್ಗದ ಅರ್ಜಿಗಳನ್ನು 45 ದಿನಗಳ ಒಳಗೆ ಮತ್ತು ಕೆಂಪು ಪ್ರವರ್ಗದ ನಿರಾಕ್ಷೇಪಣಾ ಪತ್ರ ಕೋರಿ ಸಲ್ಲಿಸುವ ಅರ್ಜಿಗಳನ್ನು 90 ದಿನಗಳ ಒಳಗೆ ಇತ್ಯರ್ಥ ಪಡಿಸಬೇಕು ಎಂದು ಆದೇಶ ನೀಡಿದರು.

ಮಂಡಳಿಯಲ್ಲಿ 1400ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿ ಆಗದೆ ಬಾಕಿ ಉಳಿದಿದ್ದು, ಈ ರೀತಿ ವಿಳಂಬ ಮಾಡುವುದು ಸರಿಯಲ್ಲ, ಹೀಗಾಗಿ ಕಾಲಮಿತಿಯೊಳಗೆ ಅರ್ಜಿಗಳ ವಿಲೇವಾರಿ ಆಗಬೇಕು, ಅನಗತ್ಯವಾಗಿ ವಿಳಂಬವಾದರೆ ಸಂಬಂಧಿತ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೆಂಗಳೂರು ನಗರದ ಬೆಳ್ಳಂದೂರು ಕೆರೆಯ ಸುತ್ತಮುತ್ತ ತ್ಯಾಜ್ಯ ನೀರನ್ನು ಕರೆಗೆ ನೇರವಾಗಿ ಹರಿಸುತ್ತಿರುವ ಬೃಹತ್ ವಸತಿ ಸಮುಚ್ಚಯಗಳಿಂದ ಸುಮಾರು 200 ಕೋಟಿ ರೂ. ದಂಡ ವಸೂಲಿ ಮಾಡಿ, ತ್ಯಾಜ್ಯ ಜಲ ಸಂಸ್ಕರಣೆಗೆ ಘಟಕ (ಎಸ್.ಟಿ.ಪಿ.) ನಿರ್ಮಿಸಲು ಎನ್.ಜಿ.ಟಿ. ಆದೇಶ ನೀಡಿದೆ. 2024ರ ಡಿಸೆಂಬರ್ ಒಳಗೆ ಈ ಎಸ್.ಟಿ.ಪಿ.  ಕಾರ್ಯ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಸುಮಾರು 58 ಕಟ್ಟಡ ಸಮುಚ್ಚಯಗಳಿಗೆ ತಲಾ 3 ಕೋಟಿ ರೂ. ದಂಡ ವಿಧಿಸಲಾಗಿದೆ. ಆದರೆ ಈವರೆಗೆ 4 ಕೋಟಿ ರೂ. ಮಾತ್ರವೇ ಸಂಗ್ರಹವಾಗಿದೆ ಎಂದರು.

ಕಟ್ಟಡ ನಿರ್ಮಾಣ ಮಾಡಿದ ಬಿಲ್ಡರ್ ಗಳು ಮನೆಗಳನ್ನು ಮಾರಾಟ ಮಾಡಿ ಹೋಗಿದ್ದಾರೆ. ಆದರೆ ಈಗ ಮನೆ ಖರೀದಿಸಿರುವ ಮಧ್ಯಮವರ್ಗದ ಜನರಿಂದ ದಂಡ ವಸೂಲಿ ಮಾಡುವುದು ಕಷ್ಟವಾಗಿದೆ. ಆದರೂ ಕಾನೂನಿನ ಮಿತಿಯಲ್ಲಿ ದಂಡ ವಸೂಲಿ ಮಾಡಿ ಕೆರೆ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದರು.

Leave a Reply