ಐಟಿ ದಾಳಿ ವೇಳೆ 100 ಕೋಟಿ ಆಸ್ತಿ ಪತ್ತೆ: ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಜೆಡಿಎಸ್

2 years ago

#itraid #bjp #jds #Congress #attack #politics #hdkumaraswamy #bsyadiyurappa #Siddaramaiah

ಬೆಂಗಳೂರು: ತೆರಿಗೆ ವಂಚನೆಯ ಖಚಿತ ಮಾಹಿತಿ ಆಧರಿಸಿ ಏಕಕಾಲದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣ ಮತ್ತು ದೆಹಲಿಯ 55 ಸ್ಥಳಗಳಲ್ಲಿ ದಾಳಿ ನಡೆಸಿ ನಗದು ಸೇರಿ 102 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳಲಾಗಿದೆ.

ಕಳೆದ ಗುರುವಾರ ಬೆಳಿಗ್ಗೆಯಿಂದ ಆರಂಭವಾದ ಈ ಕಾರ್ಯಾಚರಣೆ ಸೋಮವಾರ ಪೂರ್ಣಗೊಂಡಿದೆ. ಈ ಅವಧಿಯಲ್ಲಿ ಗುತ್ತಿಗೆದಾರರು, ಅವರ ಸಹಚರರು ಮತ್ತು ಉದ್ಯಮಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ

ಈ ಐದು ದಿನಗಳ ಅವಧಿಯಲ್ಲಿ ವಿವಿಧ ಪ್ರದೇಶಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ದಾಳಿಮಾಡಿ, ಐದು ದಿನಗಳ ಕಾಲ ನಡೆಸಿದ ಶೋಧದಲ್ಲಿ  94  ಕೋಟಿ ರೂಪಾಯಿ ನಗದು ಸೇರಿದಂತೆ 102 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.

ಈ ದಾಳಿಯಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳು ಹಾಗೂ ವಿದೇಶಿ ನಿರ್ಮಿತ 30 ದುಬಾರಿ ಬೆಲೆಯ ಕೈ ಗಡಿಯಾರಗಳು ವಶಪಡಿಸಿಕೊಂಡ ಆಸ್ತಿಗಳಲ್ಲಿ ಸೇರಿವೆ. ವಾಚ್ಗಳನ್ನು ಖಾಸಗಿ ಕಂಪನಿಯೊಂದರ ನೌಕರನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಮಂಡಳಿ ಮಾಹಿತಿ ನೀಡಿದೆ.

ಗುತ್ತಿಗೆದಾರರು ನಕಲಿ ಖರೀದಿ ಮತ್ತು ವೆಚ್ಚದ ದಾಖಲೆಗಳನ್ನು ಸೃಷ್ಟಿಸಿ ಆದಾಯವನ್ನು ಕಡಿಮೆ ತೋರಿಸಿ, ತೆರಿಗೆ ವಂಚಿಸುತ್ತಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಉಪ ಗುತ್ತಿಗೆದಾರರಿಂದ ಹೆಚ್ಚಿನ ದರದಲ್ಲಿ ಖರೀದಿ ಮಾಡಿದ ದಾಖಲೆಗಳನ್ನೂ ಸೃಷ್ಟಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ.

ಕಾಮಗಾರಿಗಳ ಗುತ್ತಿಗೆಯನ್ನು ಬಳಸಿಕೊಂಡು ಅಪಾರ ಪ್ರಮಾಣದ ಲೆಕ್ಕಪತ್ರವಿಲ್ಲದ ನಗದನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಅಘೋಷಿತ ಆದಾಯವನ್ನು ಹೊಂದಲಾಗಿದೆ. ಸರಕುಗಳ ಸ್ವೀಕೃತಿಗೆ ಸಂಬಂಧಿಸಿದ ದಾಖಲೆಗಳಲ್ಲೂ ಅಕ್ರಮ ಪತ್ತೆಯಾಗಿದೆ. ದಾಖಲೆಯಲ್ಲಿರುವ ಖರೀದಿ ಪ್ರಮಾಣ ಮತ್ತು ಸಾಗಣೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು  ಹೇಳಿದೆ.

ಕೆಲವು ಗುತ್ತಿಗೆದಾರರು ಉಪ ಗುತ್ತಿಗೆದಾರರ ಜತೆ ವಹಿವಾಟು ನಡೆಸಿದಂತೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಕೆಲವರು ಕಾಮಗಾರಿಯೇತರ ವೆಚ್ಚವನ್ನು ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ. ‘ಸಂಪರ್ಕ’ ವೆಚ್ಚವನ್ನೂ ಲೆಕ್ಕಪತ್ರಗಳಲ್ಲಿ ಉಲ್ಲೇಖಿಸಿರುವುದು ಪತ್ತೆಯಾಗಿದೆ ಎಂದು ತಿಳಿಸಿದೆ.

ಈ ಗುತ್ತಿಗೆದಾರರು, ಉದ್ಯಮಿಗಳು ಮತ್ತು ಅವರ ಸಹಚರರು ಭಾರಿ ಪ್ರಮಾಣದ ನಗದು ವಹಿವಾಟನ್ನು ಅಘೋಷಿತವಾಗಿ ನಡೆಸಿರುವುದಕ್ಕೆ ದಾಖಲೆಗಳು ಸಿಕ್ಕಿವೆ. ಅಂತಹ ವಹಿವಾಟಿನ ಕುರಿತು ಲೆಕ್ಕಪತ್ರಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ತೆರಿಗೆದಾರರು, ಉಪ ಗುತ್ತಿಗೆದಾರರು ಮತ್ತು ಕೆಲವು ನಗದು ನಿರ್ವಾಹಕರ ಬಳಿ ಈ ರೀತಿಯ ಅಕ್ರಮಕ್ಕೆ ಸಾಕ್ಷ್ಯಗಳು ಲಭಸಿವೆ ಎಂದು ಮಾಹಿತಿ ನೀಡಿದೆ.

ತೆರಿಗೆ ವಂಚನೆ, ಅಘೋಷಿತ ನಗದು ವಹಿವಾಟು, ಗುತ್ತಿಗೆಗಳಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಲೆಕ್ಕಪತ್ರದ ಹಾಳೆಗಳು, ಪುಸ್ತಕಗಳು, ಡಿಜಿಟಲ್ ಡೇಟಾ ಸೇರಿದಂತೆ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು  ತಿಳಿಸಿದೆ.

ಸಿಬಿಐ ತನಿಖೆ: ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದಾಳಿಯಲ್ಲಿ 100 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಯಾರಿಗೆ ಸೇರಿದ ಹಣ ಎಂಬುದು ಗೊತ್ತಾಗಬೇಕಾದರೆ ಇಡಿ ಅಥವಾ ಸಿಬಿಐಯಿಂದಲೇ ತನಿಖೆ ಆಗಬೇಕು ಎಂದು  ಒತ್ತಾಯಿಸಿದ್ದಾರೆ.

ಸೂಕ್ತ ತನಿಖೆಯಿಂದಲೇ ಯಾರಿಗೆ ಸೇರಿದ ಹಣ ಎಂಬುದು ಬಹಿರಂಗವಾಗಲಿದೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಬಳಸಲೆಂದು ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದರು.

SST ಮತ್ತುYST: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ ಐಟಿ ದಾಳಿ ವೇಳೆ ಮೊದಲ ದಿನ ಸಿಕ್ಕಿದ್ದು ಎಸ್.ಎಸ್.ಟಿ. ಟ್ಯಾಕ್ಸ್ ಹಣ, 2ನೇ ದಿನದ್ದು ವೈ.ಎಸ್.ಟಿ. ಟ್ಯಾಕ್ಸ್ ಹಣ ಎಂದು ಬಣ್ಣಿಸಿದರು.

ಹಣ ಸಿಕ್ಕವರು ದೊಡ್ಡ ಗುತ್ತಿಗೆದಾರರೇನಲ್ಲ. ಗುತ್ತಿಗೆದಾರನಿಗೂ -ವಾಸ್ತುಶಿಲ್ಪಿಗೂ ಏನು ಸಂಬಂಧ? ಬೆಂಗಳೂರಿನ ಸಿಎಂ ಮನೆ ನವೀಕರಿಸುತ್ತಿರುವವರು ಯಾರು? ಅವರ ಮೈಸೂರಿನ ಮನೆಯ ವಾಸ್ತುಶಿಲ್ಪದ ಕೆಲಸ ಮಾಡುತ್ತಿರುವವರು. ಈ ವಾಸ್ತುಶಿಲ್ಪಿ ಯಾರೊಂದಿಗೆ ಹತ್ತಿರವಿದ್ದಾರೆ? ಎಲ್ಲವೂ ತನಿಖೆ ಆಗಬೇಕು. ತನಿಖೆ ನಡೆದರೆ ಎಲ್ಲವೂ ಬಯಲಾಗುತ್ತದೆ ಎಂದು ಒತ್ತಾಯಿಸಿದರು.

ಐಟಿ ದಾಳಿ ವೇಳೆ ಸಿಕ್ಕ ಹಣಕ್ಕೆ ಮೈಸೂರಿನ ನಂಟು ಇದೆಯಾ ಎನ್ನುವುದು ಕೂಡ ತನಿಖೆಯಾಗಲಿ. ಪಂಚ ರಾಜ್ಯಗಳ ಎಲೆಕ್ಷನ್ಗಾಗಿ ಹೈಕಮಾಂಡ್ ಹಣ ಕೇಳಿಲ್ಲ ಎನ್ನುತ್ತಾರೆ. ಕೇಳದೆಯೇ ಇಷ್ಟೊಂದು ಹಣ ಕಲೆಕ್ಷನ್ ಮಾಡುತ್ತಿದ್ದಾರೆ. ಇನ್ನು ಹೈಕಮಾಂಡ್ ಕೇಳಿದರೆ ಎಷ್ಟು ಕಲೆಕ್ಷನ್ ಮಾಡುತ್ತಿದ್ದರು? ಎಂದು ಕೇಳಿದರು.

ರಾಜ್ಯದಲ್ಲಿ ಈಗ ಜಿ.ಎಸ್.ಟಿ ಕಲೆಕ್ಷನ್ಗಿಂತ ಎಸ್.ಎಸ್.ಟಿ. ಮತ್ತು ವೈ.ಎಸ್.ಟಿ. ಟ್ಯಾಕ್ಸ್ ಕಲೆಕ್ಷನ್ ಜೋರಾಗಿ ನಡೆಯುತ್ತಿದೆ ಎಂದು ದೂರಿದರು.

ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರವಿದು. ಜನ ಭಾರೀ ನಿರೀಕ್ಷೆಯಿಂದ ಇವರನ್ನು ಗೆಲ್ಲಿಸಿದರಲ್ಲ, ಜನರೇ ತಿರುಗಿ ಬೀಳುವ ಕಾಲ ದೂರವಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ನುಡಿದಂತೆ ನಡೆದಿದ್ದೇವೆ ಎನ್ನುತ್ತಾರಲ್ಲಾ ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕೆಲಸಗಳು ಏನಾದರೂ ಆಗುತ್ತಿವೆಯಾ? ಹೊಸದಾಗಿ ಗೆದ್ದ ಶಾಸಕರು ಕ್ಷೇತ್ರದ ಕಡೆ ತಲೆಹಾಕುತ್ತಿಲ್ಲ. ಜನರ ಪ್ರಶ್ನೆಗೆ ಉತ್ತರಿಸಲು ಆಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾನು ಸತ್ಯ ಹರಿಶ್ಚಂದ್ರ, ಸಿದ್ಧಿ ಪುರುಷ ಎಂದು ಹೇಳುವ ಮುಖ್ಯಮಂತ್ರಿ ಐಟಿ ದಾಳಿ ಬಗ್ಗೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಐಟಿ ದಾಳಿ ಮಾಡುವಾಗ ರಾಜ್ಯದ ಅಧಿಕಾರಿಗಳು ಇರೋದಿಲ್ವಾ? ಅವರಿಗೂ ಮಾಹಿತಿ ಇರುತ್ತದೆ. ಅವರಿಂದಲಾದರೂ ಮಾಹಿತಿ ಪಡೆದು ಸತ್ಯಾಂಶ ಹೇಳಿ ಎಂದರು.

ಐಟಿ ದಾಳಿಯಲ್ಲಿ ಸಿಕ್ಕ ನೂರು ಕೋಟಿ ರೂಪಾಯಿ ಹಣ ಜನರ ತೆರಿಗೆ ಹಣ. ಇದು ಯಾವುದೋ ಗುತ್ತಿಗೆದಾರ ಅಥವಾ ಬೇರೆ ವ್ಯಕ್ತಿಗೆ ಸೇರಿದ್ದಲ್ಲ. ಹಣ ಯಾರಿಗೆ ಸೇರಿದ್ದೆಂದು ಸರಿಯಾಗಿ ತನಿಖೆಯಾದರೆ ಇವರ ಬಣ್ಣ ಬಯಲಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

Leave a Reply