ಅರವಿಂದ ಚೊಕ್ಕಾಡಿಯವರ ಗಾಂಧಿ ಕೃತಿಯ ಕುರಿತು.
ಕಳೆದ ವಾರ ಮೈಸೂರಿನಲ್ಲಿ ಭೇಟಯಾದ ಮಿತ್ರ ಅರವಿಂದ ಚೊಕ್ಕಾಡಿಯವರು ಗಾಂಧಿಯವರ ಕುರಿತಾಗಿ 79 ಪುಟ್ಟ ಲೇಖನಗಳನ್ನು ಒಳಗೊಂಡ ಕೃತಿಯನ್ನು ನೀಡಿದರು. ಈ ತಲೆಮಾರಿಗೆ ಗಾಂಧಿ ವ್ಯಕ್ತಿತ್ವ ಮತ್ತು ಅವರ ಚಿಂತನೆಗಳನ್ನು ಪ್ರಭಾವಶಾಲಿಯಾಗಿ ತಲುಪಿಸುವ ಶೈಲಿಯಲ್ಲಿ ಈ ಕೃತಿ ಇರುವುದು ವಿಶೇಷ.
ಕಳೆದ ಹತ್ತು ವರ್ಷಗಳಿಂದ ನಾನು ಗಾಂಧೀಜಿ ಕುರಿತಾಗಿ ಸರಳವಾಗಿ ಮತ್ತು ಚೊಕ್ಕವಾಗಿ ಅವರ ವಿಚಾರಧಾರೆಗಳನ್ನು ಹಿಡಿದಿಡಬೇಕು ಎಂದು ಗೆಳೆಯರ ಬಳಿ ಹೇಳುತ್ತಾ ಬಂದಿದ್ದೀನಿ.
2014 ರ ಜುಲೈ ತಿಂಗಳಲ್ಲಿ ನಾನು 58 ನೇ ವಯಸ್ಸಿಗೆ ಅಧಿಕೃತವಾಗಿ ಉದಯ ಟಿ.ವಿ.ಯಿಂದ ನಿವೃತ್ತನಾದೆ. ನಂತರ ಬೆಂಗಳೂರು ಗಾಂಧಿ ಭವನದ ಕಾರ್ಯದರ್ಶಿಯಾಗಿ ನೇಮಕವಾಗಿ ಗಾಂಧಿ ಕುರಿತಾಗಿ ಹೊಸ ಆಲೋಚನೆಯ ಐವತ್ತು ಕೃತಿಗಳನ್ನು ತರಬೇಕೆಂದು ಯೋಜನೆ ಹಾಕಿಕೊಂಡಿದ್ದೆ. ಆದರೆ ಉದಯ ಟಿವಿ. ಸಂಸ್ಥೆ ನನ್ನನ್ನು ಮತ್ತೇ ನಾಲ್ಕು ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಸಿದ ಕಾರಣ ಗಾಂಧಿ ಭವನಕ್ಕೆ ಹೋಗಲಿಲ್ಲ.ನನ್ನ ಯೋಜನೆಗಳು ಸಫಲವಾಗಲಿಲ್ಲ.
ಆದರೂ ಕೂಡ ಗಾಂಧಿ ಕುರಿತಾಗಿ ನನ್ನ ಅಧ್ಯಯನ ಮತ್ತು ಆಸಕ್ತಿ ಕಡಿಮೆಯಾಗಲಿಲ್ಲ. 2018 ರಿಂದ ಇಲ್ಲಿಯವರೆಗೆ ಗಾಂಧಿಗಿರಿಯ ಫಸಲುಗಳು, ಮಹಾತ್ಮನ ಪುತ್ರ ಮತ್ತು ಗಾಂಧಿ ವಿಚಾರಧಾರೆ ಮತ್ತು ಅಭಿವೃದ್ಧಿಯ ಆತಂಕಗಳು ಎಂಬ ಹೆಸರಿನಲ್ಲಿ ಮೂರು ಕೃತಿಗಳು ಸಪ್ನ ಬುಕ್ ಹೌಸ್ ಸಂಸ್ಥೆಯಿಂದ ಬಿಡುಗಡೆಯಾದವು.
ಮುಂದಿನ ವರ್ಷದ ಡಿಸೆಂಬರ್ ಗೆ ಗಾಂಧಿಯವರ ಕೊನೆಯ ದಿನಗಳ ಏಕಾಂತ ಮತ್ತು ವಿಭಜನೆಯ ದುರಂತ ಕುರಿತಾಗಿ ಏಕಾಂಗಿ ಗಾಂಧಿ ಹೆಸರಿನಲ್ಲಿ ಕೃತಿ ರಚಿಸಲು ನನ್ನ ಬಳಿ ಇರುವ ನೂರಕ್ಕೂ ಹೆಚ್ಚು ಗಾಂಧಿ ಕುರಿತಾದ ಕೃತಿಗಳನ್ನು ಕಲೆ ಹಾಕಿಕೊಂಡು ಓದುತ್ತಿರುವಾಗ ಈ ವರ್ಷ ಎರಡು ಅಮೂಲ್ಯ ಕೃತಿಗಳು ನನ್ನ ಕೈ ಸೇರಿದವು. ಒಂದು- ನಟರಾಜ್ ಹುಳಿಯಾರ್ ಅವರ ಎಲ್ಲರ ಗಾಂಧೀಜಿ ಮತ್ತು ಎರಡನೆಯದು ಅರವಿಂದ ಚೊಕ್ಕಾಡಿಯವರ ಗಾಂಧಿ; ಮೌಲ್ಯಗಳ ನಡುವಿನ ಮೌನ.
ಇಂದಿನ ವರ್ತಮಾನದ ದಕ್ಷಿಣ ಕನ್ನಡ ಜಿಲ್ಲೆಯ ನೆಲದಲ್ಲಿ ಗಾಂಧಿ ವಿಚಾರಧಾರೆಯನ್ನು ವಿಸ್ತರಿಸಲು ನಿರಂತರವಾಗಿ ಶ್ರಮಿಸುತ್ತಿರುವ ಮಿತ್ರರಲ್ಲಿ ಅರವಿಂದ ಚೊಕ್ಕಾಡಿ ಒಬ್ಬರು. ಕಳೆದ ಹನ್ನೆರೆಡು ವರ್ಷಗಳಿಂದ ಅವರು ನನಗೆ ಪರಿಚಿತರು. ಉತ್ತರ ಕರ್ನಾಟಕದ ಕಡೆ ಬಂದಾಗ ಧಾರವಾಡದಲ್ಲಿ ಮನೆಗೆ ಬಂದು ಹೋಗುತ್ತಿದ್ದ ಮಿತ್ರರು. ಅವರ ನಿರಂತರ ಫೇಸ್ ಬುಕ್ ಸಂವಾದ ಇವುಗಳ ಕುರಿತಾಗಿ ನನಗೆ ಆಸಕ್ತಿ ಇಲ್ಲದಿದ್ದರೂ ಗಾಂಧಿ ಕುರಿತಾದ ಅವರಲ್ಲಿರುವ ಚಿಂತನೆಯ ಬಗ್ಗೆ ನನಗೆ ಅಪಾರ ಗೌರವ ಇದೆ.
ಗಾಂಧಿ ಕುರಿತಾಗಿ ಅರವಿಂದ್ ದಾಖಲಿಸಿರುವ , ಗಾಂಧಿಯಲ್ಲಿ ವ್ಯಾಸನ ಸಮಗ್ರತೆ, ವಾಲ್ಮೀಕಿಯ ತನ್ಮಯತೆ, ಮಾಹಾವೀರನ ಅಹಿಂಸೆ, ಬುದ್ಧನ ಪ್ರೀತಿ, ಕಭೀರನ ಮಾರ್ದವತೆ,ಅಲ್ಲಮನ ತೀಕ್ಷಣತೆ, ಬಸವಣ್ಣನ ಸ್ಪಷ್ಟತೆ, ಮೀರಾಬಾಯಿಯ ಶ್ರದ್ಧೆ, ಷರೀಪನ ತಾತ್ವಿಕತೆ ಮತ್ತು ನಾರಾಯಣ ಗುರುಗಳ ಕಳಕಳಿ ಎಲ್ಲವೂ ಇವೆ, ಎಂಬ ಮಾತುಗಳು ಅವರ ಗಾಂಧಿ ಕುರಿತಾದ ಬದ್ಧತೆಗೆ ಸಾಕ್ಷಿಯಾಗಿವೆ.
79 ವರ್ಷ ಬದುಕಿದ್ದ ಮಹಾತ್ಮ ತಮ್ಮ ಜೀವಿತಾವಧಿಯಲ್ಲಿ 52ಸಾವಿರ ಪುಟಗಳಲ್ಲಿ ತಮ್ಮ ಚಿಂತನೆಗಳನ್ನು ಮಾಹಿತಿ ರೂಪದಲ್ಲಿ ದಾಖಲಿಸಿದ್ದಾರೆ. ಇವುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ನಮಗೆ ಕನಿಷ್ಠ ಎರಡು ಜನ್ಮ ಬೇಕು. ನಮ್ಮಗಳ ಬೌದ್ಧಿಕ ಮಿತಿಯಲ್ಲಿ ಅವರ ಚಿಂತನೆಗಳನ್ನು ಹಿಡಿದಿಟ್ಟು ಎಲೆಯಿಂದ ಎದೆಗೆ ದಾಟಿಸುವುದಷ್ಟೇ ನಮ್ಮ ಕರ್ತವ್ಯ. ಈ ದಿಶೆಯಲ್ಲಿ ಅರವಿಂದ್ ಯಶಸ್ವಿಯಾಗಿದ್ದಾರೆ.
ಅರವಿಂದ್ ಅವರ ಇಲ್ಲಿಯ ಕೆಲವು ಲೇಖನಗಳು ನಮಗೆ ಗಾಂಧೀಜಿ ಕುರಿತಾಗಿ ಸ್ಪಷ್ಟತೆಯನ್ನು ಒದಗಿಸುವುದರ ಜೊತೆಗೆ ಗಾಂಧೀಜಿಯವರನ್ನು ದ್ವೇಷಿಸುವವರ ಎದೆಯೊಳಗಿನ ಕಲ್ಮಶಗಳನ್ನು ತೊಳೆಯುವಷ್ಟು ಪರಿಣಾಮಕಾರಿಯಾಗಿವೆ. ವಸ್ತು,ವಿಷಯ ಗಳ ಆಯ್ಕೆಯಲ್ಲಿ ಎಚ್ಚರ ವಹಿಸಿರುವ ಲೇಖಕರು ವರ್ತಮಾನದ ಜಗತ್ತಿಗೆ ಬೇಕಾದ ಗಾಂಧೀಜಿಯವರನ್ನು ಪರಿಚಯಿಸಿದ್ದಾರೆ.
ಇಂತಹ ಕೃತಿಗಳು ಮತ್ತು ಚಿಂತನೆಗಳು ಅರವಿಂದ್ ಚೊಕ್ಕಾಡಿಯವರಿಂದ ಮತ್ತಷ್ಟು ಬರಲಿ ಎಂದು ಆಶಿಸುತ್ತೇನೆ. ಮೈಸೂರಿನ ರೂಪ ಪ್ರಕಾಶನದಿಂದ ಬಿಡುಗಡೆಯಾಗಿರುವ ಈ ಕೃತಿ ನಾಡಿನೆಲ್ಲೆಡೆ ದೊರೆಯುತ್ತದೆ. ಆಸಕ್ತರು ಪ್ರಕಾಶಕರನ್ನು ಸಂಪರ್ಕಿಸಬಹುದು-9342274331
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




