ವಿಧಾನ ಪರಿಷತ್ ಸದಸ್ಯರ ನಾಮಕರಣ: ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ದಂಡು

1 year ago

ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ನಾಮಕರಣ ಸದಸ್ಯರಾಗಿದ್ದ ಕ್ರೀಡಾಪಟು ಪ್ರಕಾಶ್ ರಾಥೋಡ್, ಪತ್ರಕರ್ತ ಯು ಬಿ ವೆಂಕಟೇಶ್, ಆಡಳಿತ ಸೇವೆಯ ತಿಪ್ಪೇಸ್ವಾಮಿ ಅವರ ನಿವೃತ್ತಿ ಮತ್ತು ಸಾಮಾಜಿಕ ಸೇವೆ ಖೋಟಾ ಅಡಿಯಲ್ಲಿ ನಾಮಕರಣಗೊಂಡಿದ್ದ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರ ರಾಜೀನಾಮೆಯಿಂದ ತೆರವಾದ ನಾಲ್ಕು ಸ್ಥಾನಗಳಿಗೆ ನಾಮಕರಣ ಮಾಡಬೇಕಾಗಿದೆ. 

ಈ ನಾಲ್ಕು ಸ್ಥಾನಗಳಿಗೆ ನಾಮಕರಣ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸಿ ಸಿದ್ದರಾಮಯ್ಯ ಅವರಿಗೆ ಸಚಿವ ಸಂಪುಟ ಪರಮಾಧಿಕಾರ ನೀಡಿದೆ. 

ಶಿಕ್ಷಣ, ಆರೋಗ್ಯ, ಸಾಹಿತ್ಯ, ಮಾಧ್ಯಮ, ಕ್ರೀಡೆ, ಸಿನಿಮಾ ಹೀಗೆ ಸಮಾಜದ ನಾನಾ ವಲಯಗಳ ಖ್ಯಾತನಾಮರನ್ನು ಮೇಲ್ಮನೆಯ ನಾಮಕರಣ ಸದಸ್ಯರನ್ನಾಗಿ ನೇಮಕ ಮಾಡಲು ಸರ್ಕಾರಕ್ಕೆ ಅವಕಾಶವಿದೆ.

ತೆರವಾಗಿರುವ ಈ ಸ್ಥಾನಗಳಿಗೆ ಆಯ್ಕೆ ಬಯಸಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರು ತಮ್ಮ ತಮ್ಮ ನಾಯಕರನ್ನು ಓಲೈಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.

ಇದಲ್ಲದೇ, ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದ 25ಕ್ಕೂ ಹೆಚ್ಚು ನಾಯಕರು ಪ್ರಯತ್ನ ಆರಂಭಿಸಿದ್ದಾರೆ. ಮತ್ತೊಂದೆಡೆ ಸಾಹಿತಿಗಳು, ಬರಹಗಾರರು, ಕಲಾವಿದರು, ಪತ್ರಕರ್ತರು ಮತ್ತು ವಿವಿಧ ಜನಪರ ಹೋರಾಟಗಳಲ್ಲಿ ತೊಡಗಿಕೊಂಡವರು ಈ ಹುದ್ದೆಗೆ ಆಯ್ಕೆ ಬಯಸಿ ಪ್ರಯತ್ನ ಮಾಡುತ್ತಿದ್ದಾರೆ. 

ಈ ನಾಲ್ಕು ಸ್ಥಾನಗಳ ಆಯ್ಕೆಯೊಂದಿಗೆ ವಿಧಾನಪರಿಷತ್ತಿನಲ್ಲಿ ಆಡಳಿತಾರೂಢ ಕೂಡ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಲಿದೆ. ಪರಿಷತ್ತಿನ ಸಭಾಪತಿ ಮತ್ತು ಉಪ ಸಭಾಪತಿ ಹುದ್ದೆಗಳು ಕಾಂಗ್ರೆಸ್ ಪಾಲಾಗಲಿದ್ದು ಪ್ರಮುಖ ಮಸೂದೆಗಳ ಮಂಡನೆ ಸಮಯದಲ್ಲಿ ಸದ್ಯ ಮೇಲ್ಮನೆಯಲ್ಲಿ ಕಾಂಗ್ರೆಸ್ ಎದುರಿಸುವ ಮುಜುಗರ ಮತ್ತು ಮಸೂದೆ ಬಹುಮತ ಕೊರತೆಯಿಂದ ಬಿದ್ದು ಹೋಗಬಹುದೆಂಬ ಆತಂಕ ದೂರವಾಗಲಿದೆ.

ಪತ್ರಕರ್ತರ ವಲಯವನ್ನು ಪ್ರತಿನಿಧಿಸುತ್ತಿರುವ ಲೋಕ ಶಿಕ್ಷಣ ಟ್ರಸ್ಟ್ ವ್ಯವಸ್ಥಾಪಕ ಧರ್ಮದರ್ಶಿ ಯು ಬಿ ವೆಂಕಟೇಶ್ ತಮ್ಮ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಮರು ಆಯ್ಕೆ ಬಯಸಿ ಪ್ರಯತ್ನ ನಡೆಸಿದ್ದಾರೆ. ಇವರ ಜೊತೆಗೆ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಪರಿಷತ್ ಸದಸ್ಯತ್ವದ ನಿರೀಕ್ಷೆಯಲ್ಲಿದ್ದಾರೆ. 

ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ಪತ್ರಕರ್ತ ಎಂ.ಎ.ಪೊನ್ನಪ್ಪ ಕಾಂಗ್ರೆಸ್ ನಾಯಕರ‌ ಜೊತೆಗಿನ ತಮ್ಮ ಹಳೆಯ ನಂಟನ್ನು ನೆನಪಿಸುತ್ತ ಈ ಹುದ್ದೆಯ ಆಕಾಂಕ್ಷೆಯೊಂದಿಗೆ ವಿಶೇಷ ಪ್ರಯತ್ನ ನಡೆಸಿದರೆ, ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಮೈಸೂರಿನ ಶಿವಕುಮಾರ್ ಪ್ರಬಲ ಲಾಭಿ ನಡೆಸುತ್ತಿದ್ದಾರೆ. 

ಸಾಮಾಜಿಕ ಹೋರಾಟಗಾರ ಹಿನ್ನೆಲೆಯೊಂದಿಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ ಎಸ್ ದ್ವಾರಕಾನಾಥ್, ಶಿಕ್ಷಣ ಕ್ಷೇತ್ರದ ಕೋಟ ಹೆಸರಿನಲ್ಲಿ ಪ್ರೊ.ಕೆ.ಇ.ರಾಧಾಕೃಷ್ಣ, ಸಿನಿಮಾ ನಂಟಿನ ಹೆಸರಿನಲ್ಲಿ ಭಾವನಾ ರಾಮಣ್ಣ, ಭವ್ಯ, ಮದನ್ ಪಟೇಲ್, ಸಾಧುಕೋಕಿಲ ಅವರುಗಳು ವಿಶೇಷ ಪ್ರಯತ್ನ ನಡೆಸಿದ್ದಾರೆ. 

ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಸರ್ಕಾರ ಮತ್ತು ಪಕ್ಷವನ್ನು ಟೀವಿ ಮಾಧ್ಯಮಗಳ ಚರ್ಚಾ ವೇದಿಕೆಯಲ್ಲಿ ಪ್ರಬಲವಾಗಿ ಸಮರ್ಥಿಸುವ ರಮೇಶ್ ಬಾಬು ಅವರು ಶಿಕ್ಷಣ ಮತ್ತು ಸಹಕಾರ ಕ್ಷೇತ್ರದ ಪ್ರತಿನಿಧಿಯಾಗಿ ಮೇಲ್ಮನೆಗೆ ನಾಮಕರಣಗೊಳ್ಳಲು ಯತ್ನಿಸುತ್ತಿದ್ದಾರೆ ಲಾಬಿ ನಡೆಸಿದ್ದಾರೆ. 

ಡಿ ಕೆ ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಖಜಾಂಚಿ ವಿನಯ್ ಕಾರ್ತೀಕ್, ವಿಜಯ್ ಮುಳಗುಂದ, ರಘುನಂದನ್ ರಾಮಣ್ಣ ಮತ್ತು ಲಕ್ಷ್ಮಣ್ ಅವರು ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. 

ಈ ಎಲ್ಲರ ಜೊತೆಯಲ್ಲಿ ಕಾಂಗ್ರೆಸಿನ ಹಿರಿಯ ನಾಯಕರಾದ ಎಚ್ ಎಂ ರೇವಣ್ಣ, ಬಿ ಎಲ್ ಶಂಕರ್, ವಿ ಎಸ್ ಉಗ್ರಪ್ಪ, ಪಿ ಆರ್ ರಮೇಶ್, ಎಂ ರಾಮಚಂದ್ರಪ್ಪ, ಆರತಿ ಕೃಷ್ಣ, ರಾಣಿ ಸತೀಶ್, ವಿ. ಆರ್. ಸುದರ್ಶನ್, ನಂಜಯ್ಯನಮಠ, ಡಿಆರ್ ಪಾಟೀಲ್ ಸೇರಿದಂತೆ ಹಲವರ ಹೆಸರುಗಳು ಚರ್ಚೆಯಲ್ಲಿವೆ. 

Leave a Reply