ಯಾಕೆ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ?: ಪ್ರಿಯಾಂಕ್ ಖರ್ಗೆ

3 years ago

ಕಲಬುರಗಿ: ಚಿತ್ತಾಪುರ ತಾಲೂಕಿನಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯಿಂದ ಸಂಗ್ರಹವಾದ DMF ಸುಂಕದ ಹಣ ಕಲಬುರಗಿಗೆ ವರ್ಗಾವಣೆ ಆಗುತ್ತಿದೆ, ಆದರೆ ಸಂಗ್ರಹವಾದ ಸುಂಕವನ್ನು ಚಿತ್ತಾಪುರಕ್ಕೆ ಮಾತ್ರ ಬಳಕೆಯಾಗಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಚಿತ್ತಾಪುರದಲ್ಲಿ ಮರುಳು, ಗಣಿಗಾರಿಕೆ‌ ಕುರಿತಂತೆ ನಡೆದ ಸಭೆಯಲ್ಲಿ ಭಾಗವಹಿಸಿ ಕ್ಷೇತ್ರದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆ ಅಕ್ರಮದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮಾತನಾಡಿದ ಅವರು, ಕಾನೂನುಬಾಹಿರವಾಗಿ 24 ತಾಸು ಕಾಲ ಗುತ್ತಿಗೆದಾರರು ಅಕ್ರಮ ಮರುಳು ಸಾಗಾಣಿಕೆ ಮಾಡುತ್ತಿದ್ದಾರೆ. ಓವರ್ ಲೋಡ್ ಕೂಡಾ ಒಂದು ಸಮಸ್ಯೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಸರ್ಕಾರ ಈ ರಸ್ತೆಗಳನ್ನು ಕೂಡಾ ಮೇಲ್ದರ್ಜೆಗೆ ಏರಿಸುತ್ತಿಲ್ಲ. ಅಕ್ರಮ ಮರಳು ಸಾಗಾಣಿಕೆಯಿಂದ ಇಷ್ಟೆಲ್ಲ ಅನಾನೂಕೂಲ ಇದ್ದರೂ ಯಾಕೆ ಅಕ್ರಮ ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದರು.

ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ, ಸಾರಿಗೆ ಇಲಾಖೆ, ಗೃಹ ಇಲಾಖೆಯ ಅಧಿಕಾರಿಗಳಿಂದ ಹಿಡಿದು ಪಿಡಿಓವರೆಗೆ ಹಿಡಿದು ಎಲ್ಲ ಹಂತದ ಎಲ್ಲ ಇಲಾಖೆಯ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಒಬ್ಬ ವ್ಯಕ್ತಿ ಗರಿಷ್ಠ 70 ವಾಹನಗಳನ್ನು ನೋಂದಣಿ ಮಾಡಿಸಬಹುದು. ಒಂದು ಲಾರಿಗೆ ಕನಿಷ್ಠ 16 ಟನ್ ಗಳಿಂದ 22 ಟನ್ ಮರಳು ಸಾಗಾಣಿಕೆ ಮಾಡಬಹುದಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ ಇದರಿಂದ ವಿ ಆರ್ ರಸ್ತೆ ಸಂಪೂರ್ಣ ಹಾಳಾಗಿರುವುದು ಎಂದರು.

ಕೃಷಿ‌ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹ ಮಾಡಲಾಗುತ್ತಿದೆ. ನಾನು ಈ ಮೊದಲು ಹೇಳಿದಂತೆ ಅಂತಹ ಜಮೀನುಗಳನ್ನ ವಶಪಡಿಸಿಕೊಳ್ಳಲಾಗಿದೆಯಾ? ಹಾಗಾದರೆ ಎಷ್ಟು ಜಮೀನು ವಶಪಡಿಸಿಕೊಂಡಿದ್ದೀರಾ? ಎಂದು ಪ್ರಶ್ನಿಸಿದರು.

ಕಾಟದೇವರಹಳ್ಳಿ ಹಾಗೂ ಮುತ್ತಗಾ ಗ್ರಾಮಗಳಲ್ಲಿ ಅಕ್ರಮ ಜಾಸ್ತಿ ನಡೆಯುತ್ತಿದೆ. ನಾನು ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಅವರೊಂದಿಗೆ ಮಾತನಾಡುವವರೆಗೆ ಮರಳು ಸಾಗಾಣಿಕೆಗೆ ಬಂದ್ ಮಾಡಿಸಿ. ಜೊತೆಗೆ ಮರಳು ಸಾಗಾಣಿಕೆ ನಡೆಯುವ ಗ್ರಾಮಗಳ ರಸ್ತೆಗಳ ಫೋಟೋ ತೆಗೆದುಕೊಂಡು ಬರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ 12ರಂದು ಮತ್ತೊಮ್ಮೆ ಸಭೆ ಕರೆದು ಆ ಸಭೆಯಲ್ಲಿ ಗುತ್ತಿಗೆದಾರರನ್ನೂ ಕೂಡಾ ಕರೆಯಬೇಕು ಎಂದರು.

ಈ ಸಂಧರ್ಭದಲ್ಲಿ ತಾಪಂ ಇಒ ಚಿತ್ತಾಪುರ ನೀಲಗಂಗಾ ಹಾಗೂ ಶಹಾಬಾದ ಬಸಲಿಂಗಪ್ಪ ಡಿಗ್ಗಿ, ಶಹಾಬಾದ್ ತಹಸೀಲ್ದಾರ ಸುರೇಶ ವರ್ಮಾ,ಸಿಪಿಐ ಶಹಾಬಾದ ರಾಘವೇಂದ್ರ, ಸಿಪಿಐ ಚಿತ್ತಾಪುರ ಪ್ರಕಾಶ ಯಾತನೂರು, ಹಾಗೂ ಟಾಸ್ಕ್ ಪೋರ್ಸ್ ಸಮಿತಿಯ ಸದಸ್ಯ ಅಧಿಕಾರಿಗಳು ಹಾಜರಿದ್ದರು.

Leave a Reply