ಜೈನ ಮುನಿ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆ ಇಲ್ಲ

3 years ago

#no #question #handing #over #Jain #Muni #murder #case #CBI

ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಜೈನ ಮುನಿ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ಕೂಡ ನಡೆಯುತ್ತಿದೆ. ನಮ್ಮ ಪೊಲೀಸರ ಮೇಲೆ ವಿಶ್ವಾಸವಿದೆ. ಹೀಗಾಗಿ, ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ನಿಯಮ‌ 69 ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಬಸವರಾಜ ಬೊಮ್ಮಾಯಿ, ಆರ್.ಅಶೋಕ್  ಬಸನಗೌಡ ಪಾಟೀಲ್‌ಯತ್ನಾಳ್, ಆರಗ ಜ್ಞಾನೇಂದ್ರ, ವಿ.ಸುನೀಲಕುಮಾರ ಅವರು ಜೈನ ಮುನಿ ಹತ್ಯೆಯಲ್ಲಿ ಹಲವು ಕಾಣದ ಕೈಗಳ ಕೈವಾಡವಿರುವ ಶಂಕೆಯಿದೆ. ಅಹಿಂಸಾವಾದಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರಲ್ಲಿ ಉಗ್ರ ಸಂಘಟನೆಯ ಕೈವಾಡವಿರುವ ಶಂಕೆಯಿದ್ದು, ಹಂತಕರ ಪತ್ತೆಗಾಗಿ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಡಾ.ಪರಮೇಶ್ವರ್, ಜೈನಮುನಿಗಳ ಕೊಲೆ ಅತ್ಯಂತ ಅಮಾನುಷವಾದುದು. ಯಾರು ಕೊಲೆ ಮಾಡಿದರೂ ಶಿಕ್ಷೆ ಆಗಲೇಬೇಕು. ಪೊಲೀಸರು ದೂರು ಬಂದ 6 ಗಂಟೆಗೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ನಿರಂತರ 7 ಗಂಟೆಗಳ ಕಾಲ ಕೊಳವೆಬಾವಿಯಿಂದ ಪ್ರಯತ್ನಿಸಿ ಮೃತದೇಹವನ್ನು ತೆಗೆದಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದ್ದು, ಯಾರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಒತ್ತಡ ಮತ್ತು ಪ್ರಭಾವಗಳಿಗೆ ಮಣಿಯದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಕೆಲಸ ಮಾಡಲಾಗುವುದು ಎಂದರು.

ಪ್ರಕರಣವನ್ನು ‌ಸರ್ಕಾರ ಗಂಭೀರವಾಗಿ ಪರಿಗಣಿಸಲಾಗಿದ್ದು, ಅತ್ಯಂತ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಾಗುವುದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು. ಯಾರು ಎಷ್ಟೇ ಪ್ರಭಾವಿಯಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ತಾವು, ಜೈನಮುನಿಗಳ ಆಶ್ರಮ ಹಾಗೂ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಈ ವಿಷಯದಲ್ಲಿ ನಮ್ಮ ಪೊಲೀಸರು ಎಲ್ಲ ಆಯಾಮಗಳಿಂದಲೂ ಅತ್ಯಂತ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು,ಸಿಬಿಐ ತನಿಖೆ ಅಗತ್ಯವಿಲ್ಲ ಎಂದರು.

Leave a Reply