ಜಮ್ಮು: ಕಾಂಗ್ರೆಸ್ ನಲ್ಲಿ ಐದು ದಶಕಗಳ ಕಾಲ ವಿಧಾನಸಭೆ ಸದಸ್ಯ, ರಾಜ್ಯ ಸಚಿವ, ಸಿಎಂ, ಲೋಕಸಭೆ ಸದಸ್ಯ, ರಾಜ್ಯಸಭೆ ಸದಸ್ಯ, ಕೇಂದ್ರ ಸಚಿವ, ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಗಳನ್ನು ಅಲಂಕರಿಸಿ, ಕಡೆಗೆ ಪಕ್ಷ ತೊರೆದ ಗುಲಾಂ ನಬಿ ಆಜಾದ್, ನಾಳೆ ಜಮ್ಮುವಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ಘೋಷಿಸಲು ವೇದಿಕೆ ಸಜ್ಜಾಗಿದೆ.
ಜಮ್ಮುವಿನಲ್ಲಿ ಅವರ ಮೊದಲ ಸಾರ್ವಜನಿಕ ಸಭೆಗೆ ಅಂತಿಮ ಹಂತದ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿವೆ. ದೆಹಲಿಯಿಂದ ಬೆಳಗ್ಗೆ ಜಮ್ಮುವಿಗೆ ಬರುವ ಗುಲಾಂ ನಬಿ ಆಜಾದ್ ಅವರಿಗೆ ಅದ್ದೂರಿ ಸ್ವಾಗತ ನೀಡಲು ಸೈನಿಕ ಕಾಲೋನಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಸಾರ್ವಜನಿಕ ಸಮಾವೇಶ ಸ್ಥಳಕ್ಕೆ ಮೆರವಣಿಗೆಯ ಮೂಲಕ ಕ್ರಮಿಸಲಿದ್ದಾರೆ.
73 ವರ್ಷದ ಗುಲಾಂ ನಬಿ ಆಜಾದ್ ಅವರು 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನೆರವಿನಿಂದ ವಿವಿಧ ಹುದ್ದೆಗಳನ್ನು ಹೊಂದಿದ್ದರು. ಇದೀಗ ಇಳಿ ವಯಸ್ಸಿನಲ್ಲಿ ಹೊಸ ಪಕ್ಷವನ್ನು ಘೋಷಿಸಲು ಸನ್ನದ್ಧರಾಗಿದ್ದಾರೆ.
ಗುಲಾಂ ಅವರಿಗೆ ಸ್ವಾಗತಿಸುವ ಹೋರ್ಡಿಂಗ್, ಬ್ಯಾನರ್ ಗಳನ್ನು ಜಮ್ಮು ವಿಮಾನ ನಿಲ್ದಾಣ ರಸ್ತೆ ಹಾಗೂ ಸಾರ್ವಜನಿಕ ಸಮಾವೇಶ ನಡೆಯುವ ದಾರಿಯುದ್ದಕ್ಕೂ ಕಟ್ಟಲಾಗಿದ್ದು, 20,000 ಜನ ಕುಳಿತುಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಈ ಸಮಾವೇಶದಲ್ಲಿ ಗುಲಾಂ ಬೆಂಬಲಿಸಿ ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿದ್ದನಾಯಕರು ಭಾವಹಿಸಲಿದ್ದಾರೆ.



