ನೈಜೀರಿಯಾದ ಮೋಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್ ಬಂಧನ

3 years ago

#Nigeria #most #wanted #drug #peddler #arrested

ಬೆಂಗಳೂರು: ನಗರದಲ್ಲಿ ಬಾಡಿಗೆಗೆ  ಮನೆ ಮಾಡಿಕೊಂಡು ಅಂತರರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್  ಸರಬರಾಜು ಮಾಡುತ್ತಿದ್ದ ನೈಜೀರಿಯಾದ ಮೋಸ್ಟ್ ವಾಂಟೆಡ್ ಡ್ರಗ್ ಪೆಡ್ಲರ್ ನನ್ನು ಬಂಧಿಸಿ 2 ಕೋಟಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ವಿವಿಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.

ನೈಜೀರಿಯನ್ ಪ್ರಜೆ ಜಾನ್ ಬಂಧಿತ ಆರೋಪಿಯಾಗಿದ್ದು ಆತನಿಂದ  2 ಕೋಟಿ ಮೌಲ್ಯದ 1 ಕೆಜಿ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.

ಆರೋಪಿಯು‌ ಬಾಡಿಗೆಗೆ ಮಾಡಿಕೊಂಡ‌ ಮನೆಯಲ್ಲಿದ್ದ ಸಿಲಿಂಡರ್ ತಳದಲ್ಲೇ ಡ್ರಗ್ಸ್ ಸಂಗ್ರಹಿಸಿ, ಕಚ್ಚಾ ವಸ್ತುವಿನಿಂದ ದುಬಾರಿ ಡ್ರಗ್ಸ್ ತಯಾರಿಸಿ ಹಲವು ದಿನಗಳಿಂದ ಪೊಲೀಸರ ಕಣ್ತಪ್ಪಿಸಿ ಮಾರಾಟ ಮಾಡುತ್ತಿದ್ದ.

ಆರ್.ಟಿ ನಗರದಲ್ಲಿ ಬಾಡಿಗೆಗೆ ಮನೆ ಪಡೆದಿದ್ದ ಜಾನ್ ಖುದ್ದು ತಾನೇ ಕಚ್ಛಾವಸ್ತುಗಳನ್ನ ಬಳಸಿ ಎಂಡಿಎಂಎ ಪೌಡರ್ ತಯಾರಿಸಿ ಮಾರಾಟ ಮಾಡುತ್ತಿದ್ದು  ಅದನ್ನ ಮನೆಯಲ್ಲಿನ ಸಿಲಿಂಡರ್ ಕೆಳಗೆ ಸಂಗ್ರಹಿಸಿದ್ದು ಈ ಬಗ್ಗೆ ಖಚಿತ ಮಾಹಿತಿ ಪಡೆದ ವಿವಿ ಪುರಂ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ.

ಪೊಲೀಸರು ದಾಳಿ ಮಾಡುತ್ತಿದ್ದಂತೆ ಆರೋಪಿ ಡ್ರಗ್ಸ್ ಪ್ಯಾಕೆಟ್‌ಗಳನ್ನು ಶೌಚಾಲಯದ ಕಾಮೌಡ್ ನಲ್ಲಿ ಹಾಕಿ ಫ್ಲಷ್ ಮಾಡಿ ಪರಾರಿಯಾಲು ಪ್ರಯತ್ನಿಸಿದ್ದಾನೆ. ಕಿಟಕಿ ಮೂಲಕ ಜಂಪ್ ಮಾಡಿ ಪೈಪ್ ಮೂಲಕ ಮಹಡಿಯಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಚಾಣಾಕ್ಷತೆ ಮೆರೆದ ಪೊಲೀಸರು ಆರೋಪಿಯ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧನದ ಬಳಿಕ ಜಾನ್, ಅಕ್ರಮವಾಗಿ ನಗರದಲ್ಲಿ ನೆಲೆಸಿ ಡ್ರಗ್ಸ್ ತಯಾರು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಎಂಡಿಎಂಎ ತಯಾರಿಸಿ ಹೋಲ್‌ಸೇಲ್ ದರದಲ್ಲಿ ಮಾರಾಟ ಮಾಡುತ್ತಿದ್ದು, ಗೋವಾ ಹಾಗೂ ಮಹಾರಾಷ್ಟ್ರ  ಕಡೆಯಿಂದ ಕಚ್ಛಾ ವಸ್ತುಗಳನ್ನ ತರಿಸಿಕೊಂಡು ಎಂಡಿಎಂಎ ತಯಾರಿಸುತ್ತಿರುವುದನ್ನು ಬಾಯ್ಬಿಟ್ಟಿದ್ದಾನೆ.

ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ವಿವಿ ಪುರಂ ಪೊಲೀಸರು ಆರೋಪಿಯ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿರುವ ಆಯಾಮದಲ್ಲಿ ತನಿಖೆಯನ್ನು ಕೈಗೊಂಡಿದ್ದಾರೆ.

Leave a Reply