ಶಂಕಿತ ಉಗ್ರರ ಬಂಧನ ಪ್ರಕರಣ: ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದ ಜಾಡು ಪತ್ತೆ

3 years ago

#Suspected #terrorist #arrest #case #Arms #supply #trail #found

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿ ಸಿಕ್ಕಿಬಿದ್ದಿರುವ ಐವರು ಶಂಕಿತ ಉಗ್ರರ ತನಿಖೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಆರೋಪಿಗಳಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದ ಜಾಡನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಬಿ ವಶದಲ್ಲಿರುವ ಶಂಕಿತ ಐವರು ಉಗ್ರರನ್ನು ಎಲ್ಲಾ ಅಯಾಮಗಳಲ್ಲಿ ವಿಚಾರಣೆ ಕೈಗೊಂಡಾಗ ಕಳೆದ ಜೂನ್ ನಲ್ಲಿ ತುಮಕೂರು ರಸ್ತೆಯ ಟಿ.ಬೇಗೂರಿನಲ್ಲಿ ಗನ್ ಗಳಿದ್ದ ಬ್ಯಾಗ್ ನ್ನು ಪಡೆದಿರುವುದು ಪತ್ತೆಯಾಗಿದೆ.

ಜೈಲಿನಲ್ಲಿ ಪರಿಚಯವಾಗಿದ್ದ ಪೋಕ್ಸೋ ಕೇಸ್ ಆರೋಪಿಯೊಬ್ಬ ಬ್ಯಾಗ್ ತರಲಿದ್ದಾನೆ ಎಂದು ಶಂಕಿತ ಉಗ್ರ ರಬ್ಬಾನಿಗೆ ಜುನೈದ್  ಹೇಳಿದ್ದು, ಅದರಂತೆ ಆತ ಹೇಳಿದ ವ್ಯಕ್ತಿಯಿಂದ ರಬ್ಬಾನಿ ಗನ್ ಇದ್ದ ಬ್ಯಾಗ್ ಪಡೆದು ಅದನ್ನು ತಬ್ರೇಜ್ ಗೆ ಕೊಟ್ಟಿದ್ದ ಮಾಹಿತಿ ಲಭ್ಯವಾಗಿದೆ.

ಈ ಹಿನ್ನಲೆಯಲ್ಲಿ ಗನ್ ಯಾರು ಕೊಟ್ಟಿದ್ದು ಎನ್ನುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಆರ್ ಟಿ ನಗರ, ಹೆಬ್ಬಾಳದ ಕಡೆಯುವರು ಎಂಬ ಶಂಕೆ ವ್ಯಕ್ತವಾಗಿದ್ದು, ಹೆಬ್ಬಾಳದ ಬಳಿಯ ಆಸ್ಪತ್ರೆಯೊಂದರಲ್ಲಿ ಗನ್ ತಂದುಕೊಟ್ಟವರ ಚಹರೆಯನ್ನು ಕೂಡ ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಿಸಿಟಿವಿ ದಾಖಲಾಗಿರುವ ದೃಶ್ಯಾವಳಿಯಲ್ಲಿ ಕಪ್ಪು ಬಣ್ಣದ ಕಾರಿನಲ್ಲಿ ವ್ಯಕ್ತಿಯೊಬ್ಬ ಗನ್ ತಂದು ಕೊಟ್ಟು ಹೋಗಿರುವ ಸುಳಿವು ಸಿಕ್ಕಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ತುಮಕೂರು ರಸ್ತೆಯ ಸಿಸಿಟಿವಿ, ಹೆಬ್ಬಾಳ ಸಿಸಿಟಿವಿಯ ದೃಶ್ಯಾವಳಿಗಳನ್ನು ಹೋಲಿಕೆ ಮಾಡಿ, ಗನ್ ತಂದುಕೊಟ್ಟವನನ್ನು ಪತ್ತೆ ಹಚ್ಚಿ, ಬಂಧಿಸಲು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ತಲೆಮರೆಸಿಕೊಂಡಿರುವ  ಜುನೈದ್ ಮಾಹಿತಿಯನ್ನು ಸಿಸಿಬಿ ಪೊಲೀಸರು ಆತನ ಪ್ರೇಯಸಿಯಿಂದ ಕಲೆ ಹಾಕತೊಡಗಿದ್ದಾರೆ.

ಅಂತರರಾಷ್ಟ್ರೀಯ ಲಿಂಕ್: 2021ರಲ್ಲಿ ಜುನೈದ್ ಬೆಂಗಳೂರು ಬಿಟ್ಟಿದ್ದು, ಕೊಲೆ ಪ್ರಕರಣಕ್ಕೂ ಮುನ್ನವೇ ಜುನೈದ್ ಬಳಿಯಿದ್ದ ಪಾಸ್ ಪೋರ್ಟ್ ಬಳಸಿ ಜುನೈದ್ ವಿದೇಶಕ್ಕೆ ಹಾರಿದ್ದು, ಒರಿಜಿನಲ್ ಪಾಸ್ ಪೋರ್ಟ್ ಮೂಲಕ ಪ್ರಯಾಣ ಮಾಡಿರುವುದು ಪತ್ತೆಯಾಗಿದೆ.

2017ರಲ್ಲಿ ಕೊಲೆ ಕೇಸ್​​​ನಲ್ಲಿ ಜುನೈದ್ ಭಾಗಿಯಾಗಿದ್ದು, ಕೊಲೆ ಕೇಸ್​​​​ನಲ್ಲಿ ಯಾವ ಅಂತರಾಷ್ಟ್ರೀಯ ಲಿಂಕ್ ಇರಲಿಲ್ಲ. ಹೀಗಾಗಿ ಪೊಲೀಸರು ಪಾಸ್ ಪೋರ್ಟ್ ಜಪ್ತಿ ಮಾಡಿರಲಿಲ್ಲ. 2021ರಲ್ಲಿ ಜುನೈದ್ ದುಬೈ ವೀಸಾ ಪಡೆದು ಹೋಗಿದ್ದು, ನಂತರ ದುಬೈನಿಂದ ಮಿಡಲ್ ಈಸ್ಟ್​​​​ನಲ್ಲಿರುವ ದೇಶದ ನಗರವೊಂದಕ್ಕೆ ಜಂಪ್ ಮಾಡಿದ್ದಾನೆ.

ಪ್ರೇಯಸಿಯಿಂದ ಮಾಹಿತಿ: ಅಜೆರ್ಬೈಜಾನ್ ದೇಶದ ಬಾಕು ಎಂಬ ನಗರದಲ್ಲಿ ಜುನೈದ್ ಇರೋ ಮಾಹಿತಿ ಸಿಕ್ಕಿದ್ದು, ಸದ್ಯ ಇಂಟರ್ ಪೋಲ್ ಮೂಲಕ ಜುನೈದ್ ಪತ್ತೆಮಾಡಲು ಸಿಸಿಬಿ ಮುಂದಾಗಿದೆ. ದುಬೈನಲ್ಲಿ ಕೆಲಸಕ್ಕೆ ತೆರಳಿರುವುದಾಗಿ ಜುನೇದ್ ಪ್ರೇಯಸಿಗೆ ಹೇಳಿದ್ದು ಕೊಲೆ ಪ್ರಕರಣಗಳ ಬಗ್ಗೆ ಆಕೆಗೂ ಮಾಹಿತಿ ನೀಡಿರಲಿಲ್ಲ. ಆತನ ವರ್ತನೆಗಳು ಹೇಗಿದ್ದವು ಎಂಬುದರ ಮಾಹಿತಿಯನ್ನು  ಪ್ರೇಯಸಿಯಿಂದ ಪಡೆದು ತನಿಖೆಯನ್ನು ತೀವ್ರಗೊಳಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Leave a Reply