ಬೆಂಗಳೂರು: ನಿವೇಶನ ಮತ್ತು ಮನೆ ಪಡೆಯಲು ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಗೆ ಲಂಚ ಕೊಡಬೇಕು ಎಂದು ಹಿರಿಯ ಶಾಸಕ ಬಿ ಆರ್ ಪಾಟೀಲ್ ಮಾಡಿರುವ ಆರೋಪ ಸಂಚಲನ ಸೃಷ್ಟಿಸಿರುವ ಬೆನ್ನೆಲ್ಲೇ ಅಕ್ರಮ ಗಣಿಗಾರಿಕೆ ಕುರಿತಂತೆ ಕಾನೂನು ಸಚಿವ ಎಚ್ ಕೆ ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರಿಗೆ ಇಲ್ಲಿಯವರೆಗೆ ಶಿಕ್ಷೆ ವಿಧಿಸದ ಕುರಿತಂತೆ ತಮ್ಮ ಪತ್ರದಲ್ಲಿ ಎಚ್ ಕೆ ಪಾಟೀಲ್ ಆತಂಕ ವ್ಯಕ್ತಪಡಿಸಿರುವ ಬೆಳವಣಿಗೆ ಕುತೂಹಲ ಮೂಡಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿಯವರಿಗೆ ಬರೆದಿರುವ ಸುಮಾರು 7 ಪುಟಗಳ ಸುದೀರ್ಘ ಪತ್ರದಲ್ಲಿ ಅಂಕಿ ಅಂಶಗಳು, ಕಾನೂನಾತಕ ವಿಚಾರಗಳು, ಸಾಮಾಜಿಕ ಸ್ವಾಸ್ಥ್ಯ ಕಾಳಜಿ, ರಾಜ್ಯಕ್ಕಾದ ನಷ್ಟ ಮತ್ತು ಅಪಕೀರ್ತಿ ಬಗ್ಗೆ ಎಚ್.ಕೆ.ಪಾಟೀಲ್ ಎಳೆಎಳೆಯಾಗಿ ವಿವರಿಸಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ 1.50 ಲಕ್ಷ ಕೋಟಿ ರೂ. ನಷ್ಟ ಸಂಭವಿಸಿತ್ತು ಎಂದು ಪತ್ರದಲ್ಲಿ ವಿವರಿಸಿದ್ದಾರೆ.
2013 ರಿಂದ 2018ರ ನಡುವೆ ತಮ್ಮ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿ ಅಧ್ಯಯನ ನಡೆಸಿದಾಗ 2006 ರಿಂದ 2009ರ ಡಿಸೆಂಬರ್‌ವರೆಗೆ 12,891 ಪ್ರಕರಣಗಳು, 2010 ರಿಂದ 2011 ರ ನಡುವೆ 6,476 ಅಕ್ರಮ ಗಣಿಗಾರಿಕೆ ಪ್ರಕರಣಗಳು ವರದಿಯಾಗಿದ್ದವು. ಕಬ್ಬಿಣದ ಅದಿರಿನ ಕುರಿತು ಸರಿಯಾದ ಲೆಕ್ಕ ನಿರ್ವಹಿಸಿಲ್ಲ. ಇಂತಹ ವಿದ್ರೋಹಿ ಗುಂಪು ಸ್ವಾರ್ಥ ಸಾಧನೆಗೆ ಸಂಪತ್ತು ಲೂಟಿ ಮಾಡಿ ಅಟ್ಟಹಾಸದ ಕುಹಕ ನಗೆ ಬೀರುತ್ತಿದೆ ಎಂದಿದ್ದಾರೆ.
ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿದ್ದನ್ನು ಸರಿಸಿರುವ ಎಚ್.ಕೆ.ಪಾಟೀಲ್, 2010 ರಲ್ಲಿ ವಿವಿಧ ತನಿಖೆಗಳಿಗೆ ಪ್ರಕರಣಗಳನ್ನು ವಹಿಸಲಾಗಿತ್ತು. ಆರಂಭದಲ್ಲಿ ಇದು ರಾಜಕೀಯ ಪ್ರೇರಿತ ಆರೋಪ ಎಂಬ ಪ್ರತ್ಯುತ್ತರಗಳಿದ್ದವು. 18 ವರ್ಷಗಳ ನಂತರ ಅಪರಾಧಿಗಳಿಗೆ ಶಿಕ್ಷೆ ವಿಧಿಸಿರುವುದರಿಂದ ಪ್ರಕರಣದಲ್ಲಿ ಸತ್ಯಾಂಶವಿದೆ. ದೊಡ್ಡ ಲೂಟಿಯಾಗಿದೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಆದರೆ ಲೂಟಿಯಾಗಿರುವ ಸಂಪತ್ತನ್ನು ರಾಜ್ಯದ ಬೊಕ್ಕಸಕ್ಕೆ ವಾಪಸ್ ತರುವಲ್ಲಿ ಪ್ರಾಮಾಣಿಕ ಹಾಗೂ ನಿಷ್ಠೆಯ ಪ್ರಯತ್ನಗಳಾಗಿಲ್ಲ ಎಂಬುದು ಜನಾಕ್ರೋಶವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ ಶೇ. 7.6 ರಷ್ಟು ಮಾತ್ರ ತನಿಖೆಯಾಗಿವೆ. ಇನ್ನೂ 92.4 ರಷ್ಟು ಪ್ರಕರಣಗಳು ತನಿಖೆಯಾಗಬೇಕು. ತನಿಖೆಗೊಳಪಟ್ಟಿರುವ 7.6 ರಷ್ಟು ಪ್ರಕರಣಗಳಲ್ಲಿ ಶೇ. 2 ರಷ್ಟಕ್ಕೆ ತೀರ್ಪು ಬಂದು ಆರೋಪ ಸಾಬೀತಾಗಿದೆ. ಕೆಲವು ಆರೋಪಿಗಳು ಅನುಮಾನದ ತಾಂತ್ರಿಕ ಲಾಭ ಪಡೆದು ಬಿಡುಗಡೆಯಾಗಿದ್ದಾರೆ. ಅವರ ವಿರುದ್ಧ ಮೇಲನವಿ ಸಲ್ಲಿಸದೆ ನಿರ್ಲಕ್ಷಿಸಲಾಗಿದೆ. ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆ ಯಾವುದೇ ಪ್ರಗತಿ ಸಾಧಿಸಿಲ್ಲ. ಸರ್ಕಾರಿ ಕಡತಗಳಲ್ಲಿ ಅಧಿಕಾರಿಗಳ ವಿಳಂಬ ದ್ರೋಹದಿಂದ ಹೂತು ಹೋಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ರಿಮಿನಲ್ ಲಾ ಅಮೆಂಡ್‌ಮೆಂಟ್ ಆರ್ಡಿನೆನ್ಸ್ 1946ರ ಅಡಿ ಲೂಟಿ ಸಂಪತ್ತನ್ನು ಮರಳಿ ವಸೂಲಿ ಪಡೆಯಲು ಕ್ರಮ ಕೈಗೊಳ್ಳಬೇಕಿತ್ತು. ಈ ಪ್ರಯತ್ನಗಳು ಮುಂದುವರೆದೇ ಇಲ್ಲ. ಪಟ್ಟಭದ್ರ ಹಿತಾಸಕ್ತಿಗಳು ಅಕ್ರಮವಾಗಿ ಗಳಿಸಿದ ಸಂಪತ್ತನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿನಿಯೋಗಿಸಿ ಶಾಸಕರ ಕುದುರೆ ವ್ಯಾಪಾರ ಮಾಡಿ, ಸರ್ಕಾರವನ್ನು ಉರುಳಿಸಿ, ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿದ್ದನ್ನು ನಾವು ನೋಡಿದ್ದೇವೆ ಎಂದಿದ್ದಾರೆ.
ಅನೈತಿಕ ಚಟುವಟಿಕೆಗಳು, ರಾಜಕಾರಣಿಗಳ ಮೋಜು ಮಸ್ತಿ ಆಡಂಬರ ಕಂಡಿದ್ದೇವೆ. 2 ದಶಕಗಳ ಕಾಲ ರಾಜ್ಯ ರಾಜಕಾರಣದಲ್ಲಿ ಈ ಅಕ್ರಮ ಹಣ ಬಳಕೆಯಾಗಿದೆ. ಪುಣ್ಯದ ಮೇಲೆ ಪಾಪ ವಿಜಯ ಸಾಧಿಸುತ್ತಲೇ ಬಂದಿದೆ ಎಂದಿದ್ದಾರೆ.
ಆರಂಭದಲ್ಲಿ ಆಕ್ರಮ ಗಣಿಗಾರಿಕೆಯ ತನಿಖೆ ನಡೆಸಿದ್ದ ಲೋಕಾಯುಕ್ತ 2.98 ಕೋಟಿ ಟನ್ ಅಕ್ರಮ ಅದಿರು ರಫ್ತಿನಿಂದ 12,228 ಕೋಟಿ ನಷ್ಟವಾಗಿದೆ. ಕರ್ನಾಟಕದ 10, ಗೋವಾ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ವಿವಿಧ ಬಂದರುಗಳಿಂದ ರಫ್ತಾದ ಅದಿರಿಗೆ ಮಾತ್ರ ಈ ಲೆಕ್ಕ ಸೀಮಿತವಾಗಿದ್ದು, ಬಳ್ಳಾರಿಯಿಂದ ರೈಲುಗಳ ಮೂಲಕ 20 ಕೋಟಿ ಟನ್‌ನಷ್ಟು ಅಕ್ರಮ ಅದಿರು ರಫ್ತಾಗಿದೆ. 2009ರಿಂದ ಜೂನ್ 10 ರ ನಡುವೆ 14 ಕೋಟಿಯಷ್ಟು ಕಬ್ಬಿಣದ ಅದಿರನ್ನು 20 ಸಾವಿರ ಟ್ರಕ್‌ಗಳ ಮೂಲಕ ಸಾಗಿಸಲಾಗಿದೆ. ಲೋಕಾಯುಕ್ತರು ಮಾಡಿದ 3 ಕೋಟಿ ಟನ್‌ನ ಅಕ್ರಮ ಗಣಿ ಸಾಗಾಣಿಕೆ ಹಾಗೂ ರೈಲ್ವೆ ಇಲಾಖೆ ಮೂಲಕ ಸಾಗಾಣಿಕೆಯಾಗಿರುವ 35 ಕೋಟಿ ಟನ್ ಅದಿರಿನ ಅಂಕಿ ಅಂಶಗಳ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ. 3 ಕೋಟಿ ಟನ್‌ಗೆ 12 ಸಾವಿರದಷ್ಟು ನಷ್ಟವಾಗುವುದಾದರೆ 35 ಕೋಟಿ ಟನ್‌ಗೆ 1.50 ಲಕ್ಷ ಕೋಟಿ ನಷ್ಟವಾಗಿದೆ ಎಂದು ವಿವರಿಸಿದ್ದಾರೆ
ನಾಡಿನ ಸಂಪತ್ತನ್ನು ಲೂಟಿ ಮಾಡಿದ ಪ್ರತಿಯೊಬ್ಬರಿಗೂ ಶಿಕ್ಷೆಯಾಗಬೇಕು. ರಾಜ್ಯಕ್ಕಾದ ನಷ್ಟದ ಮರು ವಸೂಲಿಗೆ ಅಗತ್ಯ ಇರುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು. ಎಲ್ಲಾ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿಶೇಷ ತನಿಖಾ ತಂಡವನ್ನು ರಚಿಸಿ ಪೂರಕ ಪೊಲೀಸ್ ವ್ಯವಸ್ಥೆ ರೂಪಿಸಬೇಕು. ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದ್ದಾರೆ.




