ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ: ಚಲುವರಾಯಸ್ವಾಮಿ

2 years ago

ಬೆಳಗಾವಿ: ಅಡಿಕೆ ಬೆಳೆಗೆ ತಗುಲಿರುವ ಎಲೆಚುಕ್ಕೆ ರೋಗ ಹಾಗೂ ಹಳದಿ ಎಲೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನಸಭೆಗೆ ತಿಳಿಸಿದರು.

ಎಲೆಚುಕ್ಕೆ ರೋಗ ಹಾಗೂ ಹಳದಿ ಎಲೆ ರೋಗ ತಡೆಗಟ್ಟಲು ಸಂಶೋಧನೆ ನಡೆಸಲು ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ತೋಟಗಾರಿಕಾ ಸಚಿವರ ಪರವಾಗಿ ಸಚಿವ ಚೆಲುವರಾಯಸ್ವಾಮಿ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದರು.

ಅಡಿಕೆ ಬೆಳೆಗೆ ತಗುಲಿರುವ ರೋಗಗಳನ್ನು ತಡೆಗಟ್ಟಲು ಸರಕಾರ ಗಮನಹರಿಸಿದೆ. ಆದಷ್ಟು ಬೇಗ ರೋಗ ತಡೆಗಟ್ಟಲು ಸಂಶೋಧನೆ ನಡೆಸಿ ಔಷಧಿಗಳನ್ನೂ ಕಂಡುಹಿಡಿಯಲು ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗಿದೆ ಎಂದರು.

ಅಡಿಕೆಗೆ ತಗುಲಿರುವ ಎಲೆಚುಕ್ಕೆ ಮತ್ತು ಹಳದಿ ರೋಗದ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯುವ ರೈತರಿಗೆ ಸರಕಾರ ಸಹಾಯಧನವನ್ನು ಒದಗಿಸಲಾಗುತ್ತಿದೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ನಾನೂ ಈ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಎಂದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಆರಗ ಜ್ಞಾನೇಂದ್ರ, ಕರ್ನಾಟಕ ರಾಜ್ಯದಲ್ಲಿ ಶೇ.೬೫ರಷ್ಟು ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಗೆ ಹಳದಿ ಎಲೆ ರೋಗ ಮತ್ತು ಎಲೆಚುಕ್ಕೆ ರೋಗದಿಂದ ಅಡಿಕೆ ಬೆಳೆ ಇಳುವರಿ ಕುಸಿದಿದೆ. ಎಲೆಚುಕ್ಕೆ ರೋಗ ಗಾಳಿಯಲ್ಲಿ ಹರಡುತ್ತಿದ್ದು, ಬೆಳೆಗಾರರಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ, ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ದುಃಸ್ಥಿತಿ ಬಂದಿದೆ ಎಂದರು.

ಅಡಿಕೆ ಬೆಳೆಗೆ ತಗುಲಿರುವ ಎಲೆ ಚುಕ್ಕೆ ರೋಗಕ್ಕೆ ಔಷಧಿ ಇದೆ, ರೈತರು ಒಬ್ಬರು, ಇಬ್ಬರು ಮಾತ್ರ ರೋಗಕ್ಕೆ ಔಷಧಿ ಸಿಂಪಡಿಸಿದರೆ ಅದು ಹೋಗುವುದಿಲ್ಲ. ಹೀಗಾಗಿ ಸರಕಾರವೇ ಸಿಂಪಡಿಸಬಹುದು ಎಂದು ಆಗ್ರಹಿಸಿದ ಅವರು, ಅಡಿಕೆ ಬೆಳೆಯುವ ರೈತರ ಸಂಕಷ್ಟಕ್ಕೆ ಸರಕಾರ ಕೂಡಲೇ ಧಾವಿಸಿ ಔಷಧಿ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದರು.

Leave a Reply