124ಎ. ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ: – [ಸಂವಿಧಾನ (99ನೆಯ ತಿದ್ದುಪಡಿ) ಅಧಿನಿಯಮ, 2014ನ್ನು ಸರ್ವೋಚ್ಚ ನ್ಯಾಯಾಲಯವು ತನ್ನ ಆದೇಶ ದಿನಾಂಕ:16-10-2015ರಲ್ಲಿ ಅಸಿಂಧುಗೊಳಿಸಿದೆ.]
(1) ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗ ಎಂಬ ಆಯೋಗವು ಇರತಕ್ಕದ್ದು, ಅದು ಈ ಕೆಳಕಂಡವರುಗಳನ್ನು ಒಳಗೊಂಡಿರತಕ್ಕದ್ದು ಎಂದರೆ:-
(ಎ) ಭಾರತದ ಮುಖ್ಯ ನ್ಯಾಯಮೂರ್ತಿ, ಅಧ್ಯಕ್ಷರು, ಪದನಿಮಿತ್ತ;
(ಬಿ) ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯ ನಿಕಟ ತರುವಾಯದ ಇತರ ಇಬ್ಬರು ಹಿರಿಯ ನ್ಯಾಯಾಧೀಶರು ಸದಸ್ಯರುಗಳು, ಪದನಿಮಿತ್ತ;
(ಸಿ) ಕಾನೂನು ಮತ್ತು ನ್ಯಾಯ ಮಂತ್ರಾಲಯದ ಪ್ರಭಾರ ಹೊಂದಿರುವ ಕೇಂದ್ರ ಮಂತ್ರಿ – ಸದಸ್ಯ, ಪದನಿಮಿತ್ತ;
(ಡಿ) ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯಲ್ಲಿನ ವಿರೋಧಪಕ್ಷದ ನಾಯಕ ಅಥವಾ ಲೋಕಸಭೆಯಲ್ಲಿ ಅಂಥ ವಿರೋಧಪಕ್ಷದ ನಾಯಕ ಇಲ್ಲದೆ ಇದ್ದಲ್ಲಿ, ಲೋಕಸಭೆಯಲ್ಲಿ ಏಕೈಕ ಬಹುದೊಡ್ಡ ವಿರೋಧ ಪಕ್ಷದ ನಾಯಕ ಇವರುಗಳನ್ನು ಒಳಗೊಂಡಿರುವ ಸಮಿತಿಯಿಂದ ನಾಮನಿರ್ದೇಶಿತರಾಗುವ ಇಬ್ಬರು ಪ್ರಖ್ಯಾತ ವ್ಯಕ್ತಿಗಳು – ಸದಸ್ಯರು:
ಪರಂತು, ಒಬ್ಬರು ಪ್ರಖ್ಯಾತ ವ್ಯಕ್ತಿಯನ್ನು ಅನುಸೂಚಿತ ಜಾತಿಗಳ, ಅನುಸೂಚಿತ ಬುಡಕಟ್ಟುಗಳ, ಇತರೆ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ಅಥವಾ ಮಹಿಳೆ ವ್ಯಕ್ತಿಗಳ ಪೈಕಿಯಿಂದ ನಾಮನಿರ್ದೇಶನ ಮಾಡತಕ್ಕದ್ದು:
ಮತ್ತೂ ಪರಂತು, ಪ್ರಖ್ಯಾತ ವ್ಯಕ್ತಿಯನ್ನು ಮೂರು ವರ್ಷಗಳ ಅವಧಿಯವರೆಗೆ ನಾಮನಿರ್ದೇಶನ ಮಾಡತಕ್ಕದ್ದು ಮತ್ತು ಆ ವ್ಯಕ್ತಿಯು ಪುನರ್ ನಾಮ ನಿರ್ದೇಶನಕ್ಕೆ ಅರ್ಹನಾಗಿರತಕ್ಕದ್ದಲ್ಲ.
(2) ರಾಷ್ಟ್ರೀಯ ನ್ಯಾಯಾಂಗ ನೇಮಕಗಳ ಆಯೋಗದ ಯಾವುದೇ ಕಾರ್ಯವನ್ನು ಅಥವಾ ವ್ಯವಹರಣೆಗಳನ್ನು ಆಯೋಗದ ರಚನೆಯಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ಖಾಲಿ ಸ್ಥಾನ ಅಥವಾ ನ್ಯೂನತೆಯ ಕಾರಣ ಮಾತ್ರದಿಂದಲೇ ಪ್ರಶ್ನಿಸತಕ್ಕದ್ದಲ್ಲ ಅಥವಾ ಅಸಿಂಧುಗೊಳ್ಳತಕ್ಕದ್ದಲ್ಲ.
124ಸಿ. ಆಯೋಗದ ಪ್ರಕಾರ್ಯಗಳು:- ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗದ ಕರ್ತವ್ಯಗಳೆಂದರೆ-
(ಎ) ಭಾರತದ ಮುಖ್ಯ ನ್ಯಾಯಮೂರ್ತಿಯನ್ನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳನ್ನು, ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ಉಚ್ಚ ನ್ಯಾಯಾಲಯಗಳ ಇತರೆ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕಾಗಿ ವ್ಯಕ್ತಿಗಳನ್ನು ಶಿಫಾರಸ್ಸು ಮಾಡುವುದು;
(ಬಿ) ಒಂದು ಉಚ್ಚ ನ್ಯಾಯಾಲಯದಿಂದ ಇತರ ಯಾವುದೇ ಉಚ್ಚ ನ್ಯಾಯಾಲಯಕ್ಕೆ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಮತ್ತು ಇತರ ನ್ಯಾಯಾಧೀಶರನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡುವುದು; ಮತ್ತು
(3) ಸಕ್ಷಮತೆ ಮತ್ತು ನಿಷ್ಠೆ ಉಳ್ಳ ವ್ಯಕ್ತಿಯನ್ನೇ ಶಿಫಾರಸ್ಸು ಮಾಡಲಾಗಿದೆಯೆಂಬುದನ್ನು ಖಚಿತಪಡಿಸಿಕೊಳ್ಳುವುದು.
124 ಕಾನೂನನ್ನು ರಚಿಸಲು ಸಂಸತ್ತಿನ ಅಧಿಕಾರ: – ಸಂಸತ್ತು, ಕಾನೂನಿನ ಮೂಲಕ, ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯನ್ನು ಮತ್ತು ಇತರ ನ್ಯಾಯಾಧೀಶರುಗಳನ್ನು ಮತ್ತು ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಯನ್ನು ಮತ್ತು ಇತರ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕಾಗಿ ಕಾರ್ಯವಿಧಾನವನ್ನು ವಿನಿಯಮಿಸಬಹುದು ಮತ್ತು ಆಯೋಗವು ತನ್ನ ಪ್ರಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಕಾರ್ಯವಿಧಾನವನ್ನು ನೇಮಕ ಮಾಡುವುದಕ್ಕಾಗಿ ವ್ಯಕ್ತಿಗಳ ಆಯ್ಕೆ ವಿಧಾನವನ್ನು ಮತ್ತು ಅದು ಅವಶ್ಯವೆಂದು ಪರಿಗಣಿಸಬಹುದಾದಂತಹ ಇತರ ವಿಷಯಗಳನ್ನು ವಿನಿಯಮಗಳ ಮೂಲಕ ಗೊತ್ತುಪಡಿಸಲು ಆಯೋಗಕ್ಕೆ ಅಧಿಕಾರ ಕೊಡಬಹುದು.
Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 48-50




