ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ನಿಂದ ಮೊಳೆ ತೆಗೆಯುವ ಅಭಿಯಾನ

4 years ago

ಬೆಂಗಳೂರು: ನಗರದಲ್ಲಿ ತಮ್ಮ ಸ್ವಾರ್ಥ, ದುರಾಸೆಗೋಸ್ಕರ ಮರಗಳಿಗೆ ಮೊಳೆ ಹೊಡೆದು ಭಿತ್ತಿಪತ್ರಗಳನ್ನು ಹೊಡೆಯುತ್ತಾರೆ. ಮರಗಳನ್ನು ಸಂರಕ್ಷಿಸಲು ಐಕೇರ್ ಬ್ರಿಗೇಡ್ ಹಾಗೂ ಜಯಕರ್ನಾಟಕ ಜನಪರ ವೇದಿಕೆ ಟೊಂಕಕಟ್ಟಿ ನಿಂತಿವೆ.

ಕಳೆದ ನಾಲ್ಕು ವರ್ಷಗಳಿಂದಲೂ ಐಕೇರ್ ಬ್ರಿಗೇಡ್ ಗಿಡನೆಡುವ ಅಭಿಯಾನ ಸೇರಿದಂತೆ ಪರಿಸರ ಸಂರಕ್ಷಿಸುವ ಅಭಿಯಾನ ನಡೆಸುತ್ತಿದೆ. ಕಳೆದ 1 ವರ್ಷದಿಂದ ಜಯಕರ್ನಾಟಕ ಜನಪರ ವೇದಿಕೆ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಂಡಗಿಕೊಂಡಿದೆ.

ಜಯಕರ್ನಾಟಕ ಜನಪರ ವೇದಿಕೆ ಹಾಗೂ ಐಕೇರ್ ಬ್ರಿಗೇಡ್ ಸಹಭಾಗಿತ್ವದಲ್ಲಿ ಯುವ ಸಂಸ್ಥಾಪಕ ಅಧ್ಯಕ್ಷ ಬಿ ಗುಣರಂಜನ್ ಶೆಟ್ಟಿ ಮಾರ್ಗದರ್ಶನ ಹಾಗೂ ಐಕೇರ್ ಬ್ರಿಗೇಡ್ ಅಧ್ಯಕ್ಷ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಸದಾಶಿವನಗರದ ಭಾಷ್ಯಂ ಸರ್ಕಲ್ ಸುತ್ತಮುತ್ತಲಿನ ಪ್ರದೇಶದಲ್ಲಿ ಮರಗಳ ಮೊಳೆ ಮುಕ್ತ ಅಭಿಯಾನ ನಡೆಸಿ ಮರಗಳಿಗೆ ಹೊಡೆದಿದ್ದ ಮೊಳೆ ಸಲಾಕೆಗಳನ್ನು ಹೊರತೆಗೆದರು. ಸದಾಶಿವನಗರ, ಮಲ್ಲೇಶ್ವರಂ, ಕಾವೇರಿ ಚಿತ್ರಮಂದಿರ ರಸ್ತೆ ಬದಿಗಳ ಮರಗಳಿಗೆ ಹೊಡೆದಿದ್ದ ಕೆಜಿಗಟ್ಟಲೆ ಮೊಳೆ ಸಲಾಕೆಗಳನ್ನು ತೆಗೆದು ಮರಗಳಿಗೆ ಚಿಕಿತ್ಸೆ ನೀಡಲಾಯಿತು.

ಈ ವೇಳೆ ಐಕೇರ್ ಬ್ರಿಗೇಡ್ ಸದಸ್ಯೆ ಶಿಲ್ಪಾ ಸ್ಪೂರ್ತಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಗಿಡ ನೆಟ್ಟು ಪೋಷಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಎರಡು ವರ್ಷಗಳಿಂದ ಮರಗಳ ಮಳೆಮುಕ್ತ ಅಭಿಯಾನ ಮಾಡಲಾಗುತ್ತಿದೆ. ಇಂದು ಮರಗಳಿಗೆ ಬಾರ್ ಬೆಂಡಿಂಗ್ ಕೆಲಸಕ್ಕೆ ಹೊಡೆದಿದ್ದ ಸಲಾಕೆ, ಮೊಳೆ, ಪಿನ್ ಗಳನ್ನು ಮುಕ್ತಗೊಳಿಸಿದ್ದೇವೆ. ಮಕ್ಕಳು ಅಭಿಯಾನದಲ್ಲಿ ಪಾಲ್ಗೊಂಡು ಮೊಳೆತೆಗೆಯುವ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದರು.

ಜಯಕರ್ನಾಟಕ ಜನಪರ ವೇದಿಕೆ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಜೆ.ಶ್ರೀನಿವಾಸ್ ಮಾತನಾಡಿ, ಆಧುನಿಕ ಯುಗದ ಭರಾಟೆಯಲ್ಲಿ ಪರಿಸರ ಹಾನಿಯಿಂದ ಆಮ್ಲಜನಕದ ಪ್ರಮಾಣ ಕುಸಿಯುತ್ತಿದೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಗಿಡಗಳನ್ನು ಹಾಕಿ ಪೋಷಿಸಬೇಕಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಮರಗಳಿಗೆ ಹಾನಿಯಾಗುವಂತೆ ಕಬ್ಬಿಣದ ಮೊಳೆ, ಸಲಾಕೆಯನ್ನು ಹೊಡೆದು ಮರಗಳಿಗೆ ಹಾನಿಮಾಡುತ್ತಿದ್ದಾರೆ. ಇಂದು ಇವುಗಳನ್ನು ತೆಗೆಯುವ ಕೆಲಸ ಮಾಡಿದ್ದೇವೆ ಎಂದರು.

ಇದೇ ವೇಳೆ ಅಭಿಯಾನದಲ್ಲಿ ಭಾಗವಹಿಸಿದ ಸ್ವಯಂಸೇವಕರಿಗೆ ಪ್ರಶಂಸೆ ಪತ್ರ ವಿತರಿಸಲಾಯಿತು. ಅಭಿಯಾನದಲ್ಲಿ ಐಕೇರ್ ಬ್ರಿಗೇಡ್ ಸದಸ್ಯರಾದ ಪೂರ್ಣಿಮ, ಸ್ಪೂರ್ತಿ, ಶಿಲ್ವಾಸ್ಪೂರ್ತಿ, ಆಂತಮಾಲಜಿಸ್ಟ್ ಎಥಾರ್ಧ್, ಡಿಆರ್ಎಫ್ಓ ಮೂರ್ತಿ, ಸುದರ್ಶನ್, ಪವನ್ ಕುಮಾರ್, ವಿಂದುಕುಮಾರ್, ಚಂದ್ರಪ್ಪ, ಮಂಜುನಾಥ್, ವೆಂಕಟಸ್ವಾಮಿ, ಸುಬ್ರಹ್ಮಣ್ಯ ರೆಡ್ಡಿ ಸೇರಿದಂತೆ ತಂಡದ ಇನ್ನಿತರೆ ಸದಸ್ಯರು ಪಾಲ್ಗೊಂಡಿದ್ದರು‌.

Leave a Reply