ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ.ಹ್ಯಾರಿಸ್ ಅಭಿಮಾನಿಗಳ ವೇದಿಕೆ ಮತ್ತು ಕರ್ನಾಟಕ ಫುಟ್ಬಾಲ್ ಸಂಸ್ಥೆ ವತಿಯಿಂದ ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಎನ್.ಹ್ಯಾರಿಸ್ ಅವರಿಗೆ ಅಭಿನಂದನಾ ಸಮಾರಂಭವನ್ನು ಸಿಟಿ ಪ್ಯಾಲೇಸ್ ನಲ್ಲಿ ಆಯೋಜಿಸಲಾಗಿತ್ತು.
ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ದೇಶದ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ. ಫುಟ್ಬಾಲ್ ಆಟದಲ್ಲಿ ದೈಹಿಕ ಸಾಮ್ಯರ್ಥ ಹೆಚ್ಚು ಬೇಕಾಗುತ್ತದೆ ಮತ್ತು ಆರ್ಥಿಕವಾಗಿ ಸ್ಥಿತಿವಂತರು ಇದ್ದಾರೆ. ಆರ್ಥಿಕವಾಗಿ ಸಬಲರಲ್ಲದ ಉತ್ತಮ ಕ್ರೀಡಾಪಟುಗಳಿಗೆ ಸರ್ಕಾರ ಆರ್ಥಿಕ ಸಹಾಯ ಕೊಡಬೇಕು ಎಂದರು.
ಕರ್ನಾಟಕದವರು ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ ಸಂಸ್ಥೆಗೆ ನಮ್ಮ ಶಾಸಕ ಎನ್.ಎ.ಹ್ಯಾರಿಸ್ ಆಯ್ಕೆಯಾಗಿರುವುದರಿಂದ ರಾಜ್ಯದ ಫುಟ್ಬಾಲ್ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ಲಭಿಸಲಿದೆ ಎಂದರು.
ಅಭಿನಂದನೆ ಸ್ವೀಕರಿಸಿ ಮಾತಾಡಿದ ಎನ್.ಎ.ಹ್ಯಾರಿಸ್, ನಿಮ್ಮೆಲ್ಲರ ಸಹಕಾರದಿಂದ ಅಖಿಲ ಭಾರತ ಫುಟ್ ಬಾಲ್ ಸಂಘಕ್ಕೆ ಉಪಾಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನನ್ನ ಸಾಧನೆಗೆ ನಮ್ಮ ತಂದೆಯವರು ಮತ್ತು ಜನರ ಸಹಕಾರ ಕಾರಣ ಎಂದರು.
ಪ್ರತಿಯೊಬ್ಬರು ಜೀವನದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಮಾನಸಿಕ, ದೈಹಿಕವಾಗಿ ಸಧೃಡವಾಗಿರಲು ಚಟುವಟಿಕೆಯಿಂದ ಇರಲು ಕ್ರೀಡಾ ಚಟುವಟಿಕೆ ಮುಖ್ಯ ಎಂದರು.
ದೇಶದ ಪ್ರತಿಷ್ಟಿತ ಪುಟ್ಬಾಲ್ ಸಂಸ್ಥೆಗೆ ದಶಕಗಳ ಕಾಲದ ನಂತರ ಕನ್ನಡಿಗರಿಗೆ ಅತ್ಯುತ್ತಮ ಹುದ್ದೆ ಲಭಿಸಿರುವುದು ಸಂತೋಷದಾಯಕ ಸಂಗತಿಯಾಗಿದೆ. 34 ಜನ ಮತದಾನದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಕರ್ನಾಟಕ್ಕೆ 29 ಮತ ನೀಡಿ ಆಯ್ಕೆ ಮಾಡಿದರು. ಕರ್ನಾಟಕ ಫುಟ್ಬಾಲ್ ತಂಡ ದೇಶದ ನಂಬರ್ 1 ತಂಡವಾಗಬೇಕು ಮತ್ತು ಮಹಿಳಾ ಫುಟ್ಬಾಲ್ ತಂಡಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಮುಂದಿನ ದಿನಗಳಲ್ಲಿ ಫುಟ್ಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗುವುದು ಮತ್ತು ಯುವ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರಾಜ್ಯ ಸರ್ಕಾರ ಕ್ರೀಡೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ ಕೊಡಬೇಕು ಎಂದರು.
ಸಮಾಜ ಸೇವಕ ಎಮ್.ಎ.ಮಹಮದ್ಮ, ಮಾಜಿ ಲೋಕಸಭಾ ಸದಸ್ಯ ಚಂದ್ರಪ್ಪ, ಜಿಲ್ಲಾಧ್ಯಕ್ಷರಾದ ಜಿ.ಶೇಖರ್, ಕೃಷ್ಣಪ್ಪ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎನ್.ಎ.ಮಹಮದ್ ಹ್ಯಾರಿಸ್ ನಲಪಾಡ್, ಶಾಂತಿನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.



