ನಾಗಾಭರಣ ಅವರ ದಶಕಗಳ ಒಡನಾಟದ ಅನುಭವ ಬರೆದಷ್ಟು ಮುಗಿಯದು

2 years ago

ಇವತ್ತು ಟಿ.ಎಸ್.ನಾಗಾಭರಣ ಅವರ ಹುಟ್ಟು ಹಬ್ಬ..

ನಾನು ಮೊದಲ ಸಲ ಅವರ ಜೊತೆ ಕೆಲಸ ಮಾಡಿದ್ದು ‘ಮೈಸೂರು ಮಲ್ಲಿಗೆ’ ಚಿತ್ರಕ್ಕೆ. ಕೆ.ಎಸ್.ನರಸಿಂಹ ಸ್ವಾಮಿಯವರ ಕಾವ್ಯ ಪ್ರಪಂಚಕ್ಕೆ ಜೀವ ನೀಡಿದ ಈ ಪ್ರಯೋಗವೇ ವಿಶಿಷ್ಟವಾಗಿತ್ತು. ಸಿನಿಮಾ ಎಂದರೆ ಏನು ಎಂದೇ ಗೊತ್ತಿಲ್ಲದ ನನ್ನ ಕಲಿಕೆ ಆರಂಭವಾಗಿದ್ದೇ ಇಲ್ಲಿಂದ.

ಅಲ್ಲಿಂದ ಮುಂದೆ ಅವರ ಸಿನಿಮಾ, ನಾಟಕ, ಕಿರುಚಿತ್ರ, ಯೋಜನೆ ಎಲ್ಲಾ ಪ್ರಯೋಗಗಳಲ್ಲಿಯೂ ನಾನಿದ್ದೇನೆ. ಸಿನಿಮಾ ಸ್ಕಿಪ್ಟ್ ಬರೆಯುವುದನ್ನು ನನಗೆ ಕಲಿಸಿ ಕೊಟ್ಟಿದ್ದೇ ನಾಗಾಭರಣ. ಅವರದಂತೂ 20-30 ವರ್ಷನ್ಗದಳು. ಕೆಲವು ಐವತ್ತನ್ನು ಮುಟ್ಟಿದ್ದೂ ಇದೆ. ಕಥೆಯೊಂದನ್ನು ಹೇಗೆ ದೃಶ್ಯಕ್ಕೆ ತರಬೇಕು ಎನ್ನುವುದನ್ನ ಅವರು ಕಲಿಸಿದ ರೀತಿಯೇ ವಿಶಿಷ್ಟ.

ನಾಗಾಭರಣ ಅವರ ಸಮಸ್ಯೆ ಎಂದರೆ ರಾಜಿ.. ಎಷ್ಟೋ ಸಿನಿಮಾಗಳಲ್ಲಿ ಅವರ ರಾಜಿಯನ್ನು ಒಪ್ಪದೆ ತಾತ್ವಿಕ ಕಾರಣಗಳನ್ನು ಮುಂದಿಟ್ಟು ನಾನು ಟೀಂ ನಿಂದ ಹೊರ ಬಂದಿ‍ದ್ದಿದೆ. ‘ಜನುಮದ ಜೋಡಿ’ ಮತ್ತು ‘ನಾಗ ಮಂಡಲ’ ಇದಕ್ಕೆ ದೊಡ್ಡ ಉದಾಹರಣೆಗಳು. ಈ ಚಿತ್ರಗಳ ಕುರಿತ ನನ್ನ ಆಕ್ಷೇಪಗಳನ್ನು ನಾನು ಸಾರ್ವಜನಿಕವಾಗಿಯೇ ಬರೆದಿದ್ದೇನೆ, ವ್ಯಕ್ತ ಪಡಿಸಿದ್ದೇನೆ. ಹೀಗಿದ್ದರೂ ಅವರ ಜೊತೆಗಿನ ನನ್ನ ಸಂಬಂಧ ಮುರಿದಿಲ್ಲ. ಮುಂದಿನ ಚಿತ್ರಕ್ಕೆ ಎಲ್ಲವನ್ನೂ ಮರೆತು ‘ಹೀಗೆ ಹೊಸ ಚಿತ್ರ ಶುರು ಮಾಡ್ತಾ ಇದ್ದೇನೆ.. ಬಂದು ಬಿಡಿ’ ಎಂದು ಕರೆದ ಸಹೃದಯತೆ ಅವರದು. ‘ಅಲ್ಲಮ’ ಚಿತ್ರ ಕೊಟ್ಟ ಅನುಭವ ವಿಶಿಷ್ಟವಾಗಿದ್ದು ನಾನು, ಶ್ರೀಪತಿ, ಭಾಸ್ಕರ್, ಬಾಪು ಮಾಡಿದ ಚರ್ಚೆಗಳು, ಓದು ಎಲ್ಲವೂ ಮಹತ್ವದ್ದು. ಚಿತ್ರ ಪುನ‍: ನಾವು ಎಂದು ಕೊಂಡಂತೆ ಬರಲಿಲ್ಲ. ಆದರೆ ಸಂಗೀತದ ಕುರಿತು ನಮ್ಮ ಕನಸು ಈಡೇರಿತ್ತು. ಇದಕ್ಕೆ ಅರ್ಹವಾಗಿ ರಾಷ್ಟ್ರಪ್ರಶಸ್ತಿಯೂ ಬಂದಿತು.

ರಂಗಭೂಮಿಯಲ್ಲಿಯೂ ಬಿ.ವಿ.ಕಾರಂತರ ಶಿಷ್ಯರಾಗಿ ಭರಣ ಸಾಗಿದ ರೀತಿ ಮಹತ್ವದ್ದು ‘ಜೋಕುಮಾರ ಸ್ವಾಮಿ’ ‘ಗೋಕುಲ ನಿರ್ಗಮನ’ ಮತ್ತು ‘ಸತ್ತವರ ನೆರಳು’ ಮತ್ತೆ ಮತ್ತೆ ಪ್ರದರ್ಶನವನ್ನು ಕಾಣುತ್ತಿವೆ. ಪ್ರತಿಸಲವೂ ಹೊಸತನ ಕಾಣುವಲ್ಲಿ ಭರಣ ಅವರ ಪಾತ್ರವಿದೆ. ಅವರು ಉತ್ತಮ ನಟರೂ ಕೂಡ ಹೌದು. ‘ರೋಮಿಯೋ ಜ್ಯೂಲಿಯೆಟ್’ ನಾಟಕದಲ್ಲಿ ಅವರ ಪಾದ್ರಿಯ ಪಾತ್ರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಮುಖ್ಯವಾಗಿ ಎರಡು ಸಂಸ್ಥೆಗಳಲ್ಲಿ ಅವರ ಜೊತೆ ಕೆಲಸ ಮಾಡಿದೆ. ಕರ್ನಾಟಕ ಚಲನಚಿತ್ರ ಅಕಾಡಮಿಯ ಮೊದಲ ಅಧ್ಯಕ್ಷರು ಅವರು. ಅದನ್ನು ಬೆಳೆಸಿದ ರೀತಿ, ಕಟ್ಟಿದ ಕನಸುಗಳು ಎಲ್ಲವೂ ಮಧುರ ಅನುಭವಗಳು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಂತೂ ನನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಅಲ್ಲಿನ ಅನುಭವಗಳು ಇನ್ನಷ್ಟು ಅಚ್ಚಳಿಯದೆ ಉಳಿಯುವಂತಹವು.

ನಾಗಾಭರಣ ಸಂಗೀತವನ್ನು ಬಲ್ಲವರು. ಹೀಗಾಗಿಯೇ ಅವರ ಸಿನಿಮಾ-ನಾಟಕಗಳಲ್ಲಿ ಸಂಗೀತಕ್ಕೆ ಮಹತ್ವ. ಅವರ ಚಿತ್ರಗಳ ಗೀತೆಗಳು ಜನಪ್ರಿಯವಾಗಲು ಇದೂ ಕೂಡ ಕಾರಣ. ‘ಬಂಗಾರದ ಜಿಂಕೆ’ ಮತ್ತು ‘ನೀಲಾ’ ಚಿತ್ರಕ್ಕೆ ವಿಜಯಭಾಸ್ಕರ್ ಮಾಡಿದ ಪ್ರಯೋಗಗಳು. ‘ಮಕ್ಕಳಿರಲ್ವ ಮನೆ ತುಂಬಾ’ಕ್ಕೆ ಜಿ.ಕೆ.ವೆಂಕಟೇಶ್… ‘ಆಕಸ್ಮಿಕ’ ಮತ್ತು ‘ಕಲ್ಲರಳಿ ಹೂವಾಗಿ’ಗೆ ಹಂಸಲೇಖ ತಮ್ಮ ಜಾಡನ್ನು ಬಿಟ್ಟ ಸಂಗೀತ ಕೊಟ್ಟಿದ್ದು ಭರಣ ಅವರಿಂದ. ‘ಜನುಮದ ಜೋಡಿ’ ಚಿತ್ರದ ಮೂಲಕ ಅವರು ಮನೋಹರ್ ಅವರನ್ನು ಸ್ಟಾರ್ ಆಗಿಸಿ ಬಿಟ್ಟರು. ಕಂಸಾಳೆ ಕೈಸಾಲೆ ಮೂಲಕ ಕೆ.ಕಲ್ಯಾಣ್ ವಿಭಿನ್ನರಾದರು. ‘ಅಲ್ಲಮ’ಕ್ಕೆ ಬಾಪು ಪದ್ಮನಾಭ್ ರಾಷ್ಟ್ರಪ್ರಶಸ್ತಿಯನ್ನು ಪಡೆದರು. ಸಿ.ಅಶ್ವತ್ಥ್ ಅಂತಹ ಮಹಾ ಮೂಡಿ ಸಂಗೀತ ನಿರ್ದೇಶಕರ ಮಹಾನ್ ಪ್ರತಿಭೆಯನ್ನು ಪೂರ್ಣ ಬಳಸಿಕೊಳ್ಳಲು ಸಾಧ್ಯವಾಗಿದ್ದು ಭರಣ ಅವರ ಶಕ್ತಿ. ‘ಸಂತ ಶಿಶುನಾಳ ಶರೀಫ’ ‘ಮೈಸೂರು ಮಲ್ಲಿಗೆ’ ‘ಚಿನ್ನಾರಿ ಮುತ್ತ’ ‘ನಾಗಮಂಡಲ’ ಚಿತ್ರಗಳು ಗೆಲ್ಲಲು ಸಂಗೀತವೇ ಕಾರಣವಾಗಿದ್ದು ಈಗ ಇತಿಹಾಸ. ಒಮ್ಮೆ ಅಶ್ವತ್ಥ್ ನಾನು ಸಂಗೀತ ಕೊಡಲಾರೆ ಎಂದು ಹಾರ್ಮೋನಿಯಂದ ಎಸೆಯಲು ಹೋದಾಗ ಸಮಾಧಾನ ಮಾಡಿ ಭರಣ ಕರೆ ತಂದಿದ್ದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ.

ಅವರ ನಿಂತು ಹೋದ ಚಿತ್ರಗಳದ್ದು ಇನ್ನೊಂದು ಕತೆ. ಈ ಬಹುತೇಕ ಚಿತ್ರಗಳಿಗೆ ನಾನು ಕೆಲಸ ಮಾಡಿದ್ದೇನೆ. ದಳವಾಯಿ ಮುದ್ದಣ್ಣ ಬಹು ದೊಡ್ಡ ಪ್ರಾಜೆಕ್ಟ್. ಅದಕ್ಕೆ ಎಷ್ಟು ವರ್ಷ ಕೆಲಸವೋ.. ಕೊನೆಗೆ ಸಣ್ಣ ತಕರಾರಿನಿಂದ ನಿಂತು ಹೋಯಿತು. ‘ಕೆಳದಿ ಶಿವಪ್ಪ ನಾಯಕ’ ನನಗೆ ಬಹಳ ಇಷ್ಟವಾಗಿದ್ದ ಸ್ಕಿಪ್ಟ್. ಎಸ್.ಎಲ್. ಭೈರಪ್ಪನವರ ‘ತಂತು’ ಕಾದಂಬರಿಯನ್ನು ಸೀರಿಯಲ್ ಆಗಿಸಲು ಹೊರಟಿದ್ದೆವು. ಆ ಕಾದಂಬರಿಯನ್ನು ಬೇರೆ ಬೇರೆ ಮೊಗ್ಗಲಿನಿಂದ ನೋಡಿದ್ದು ಹೊಸತನ ಕೊಟ್ಟಿತ್ತು. ತೇಜಸ್ವಿಯವರ ‘ಜುಗಾರಿ ಕ್ರಾಸ್‍’ ಕೂಡ ಬಹಳ ಒಳ್ಳೆಯ ಸ್ಕಿಪ್ಟ್ ಆಗಿತ್ತು. ಅದೂ ಕೂಡ ನಿಂತು ಹೋಯಿತು. ಆದರೆ ಇವೆಲ್ಲವೂ ನನ್ನ ಮನಸ್ಸಿನಲ್ಲಿ ಸಿನಿಮಾ ಆಗಿ ಬಿಟ್ಟಿದ್ದಾವೆ.

ನಾಗಾಭರಣ ಅವರ ಕುರಿತ ಮೂರು ದಶಕಗಳ ಒಡನಾಟದ ಅನುಭವ ಬರೆದಷ್ಟು ಮುಗಿಯದು. ಹುಟ್ಟು ಹಬ್ಬದ ಶುಭಾಶಯಗಳು ಸರ್.. ನಿಮ್ಮೊಂದಿಗೆ ಇನ್ನಷ್ಟು ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಲಿ.

  • ಎನ್.ಎಸ್.ಶ್ರೀಧರ ಮೂರ್ತಿ

Leave a Reply