ಬೆಳಗಾವಿ: ಕೃಷ್ಣಾ ನದಿಯಲ್ಲಿ ಮುಳುಗುತ್ತಿದ್ದ 10 ವರ್ಷದ ಹಿಂದೂ ಬಾಲಕನನ್ನು ರಕ್ಷಿಸಲು ನದಿಗೆ ಧುಮುಕಿದ ವ್ಯಕ್ತಿ ಬಾಲಕನನ್ನು ರಕ್ಷಿಸಿ ಮುಸ್ಲಿಂ ವ್ಯಕ್ತಿ ಸ್ವತಃ ನೀರು ಪಾಲಾದ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.
ಹುಕ್ಕೇರಿಯ ಶರೀಫ್ ನಜೀರಅಹ್ಮದ ಖಾನಜಾದೆ (34) ನೀರಿನಲ್ಲಿ ಮುಳುಗಿದ ವ್ಯಕ್ತಿ. ಶರೀಫ್ ಹವ್ಯಾಸಿ ಮೀನುಗಾರನಾಗಿದ್ದು, ಬಿಡುವಿನ ಸಮಯದಲ್ಲಿ ಮೀನು ಹಿಡಿಯಲು ತೆರಳುತ್ತಿದ್ದ.
ಮಂಗಳವಾರ ಮಾಂಜರಿ ಗ್ರಾಮದಲ್ಲಿ ಕೃಷ್ಣಾ ನದಿಯ ಹಳೆ ಸೇತುವೆ ಬಳಿ ಮೀನು ಹಿಡಿಯುವ ಸಮಯದಲ್ಲಿ ಪಕ್ಕದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆ ಜೊತೆಗೆ ಇದ್ದ ಬಾಲಕ ಜಾರಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು, ಬಾಲಕನ ರಕ್ಷಣೆಗೆ ಮುಂದಾಗಿದ್ದಾರೆ. ಬಾಲಕ ಓಂಕಾರ ಮಾಯನ್ನವರ (10) ನನ್ನು ರಕ್ಷಿಸಿದ ಶರೀಫ್ ನಂತರ ತಾನು ಕೃಷ್ಣಾ ನದಿಯ ನೀರಿನ ರಭಸಕ್ಕೆ ಸಿಲುಕಿ ಹೊರಗೆ ಬಾರದೆ ನೀರು ಪಾಲಾಗಿದ್ದಾರೆ.
ಸ್ಥಳದಲ್ಲಿ NDRF ತಂಡ ಹಾಗೂ ಅಂಕಲಿ ಪೊಲೀಸರು ಬೀಡುಬಿಟ್ಟಿದ್ದು ಶೋಧ ಕಾರ್ಯ ನಡೆಸಿರು. ಬುಧವಾರ ಮಧ್ಯಾಹ್ನದವರೆಗೂ ಕಾರ್ಯಾಚರಣೆ ಮುಂದುವರೆದಿದೆ. ಘಟನೆ ಸಂಬಂಧ ಅಂಕಲಗಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಒಟ್ಟಿನಲ್ಲಿ ಹಿಂದೂ – ಮುಸ್ಲಿಮರ ನಡುವೆ ಧರ್ಮ, ಮತ ಭೇದವನ್ನು ಬಿತ್ತುವವರಿಗೆ ಇದೊಂದು ಮಹತ್ವದ ಸಂದೇಶವನ್ನು ನೀಡಿದ್ದು, ಹಿಂದೂವಿನ ರಕ್ಷಣೆಗೆ ಮುಂದಾದ ವ್ಯಕ್ತಿ ಬಲಿಯಾಗಿದ್ದು ಮಾತ್ರ ದುರಂತವೆನ್ನದೇ ವಿಧಿಯಿಲ್ಲ.



