#ಕುವೆಂಪು ಆಶಯಗಳಿಗೆ ವಿರುದ್ಧದ ನಡೆ!
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನವು ಈಗ ತೇಜಸ್ವಿ ಸ್ಮಾರಕದ ಪಕ್ಕದಲ್ಲಿದ್ದ ಸುಂದರವಾದ ಕಾಡನ್ನು ಕಡಿದು, ಆ ಜಾಗದಲ್ಲಿ ಅಂಗಡಿ, ಹೋಟೆಲ್, ವಾಹನ ನಿಲ್ದಾಣ, ಟಿಕೆಟ್ ಕೌಂಟರ್, ಶೌಚಾಲಯಗಳಂತಹ ಕಾಮಗಾರಿ ಕೆಲಸಕ್ಕೆ ಕೈಹಾಕಿದೆ. ಮೊದಲಿನಿಂದಲೂ ಈ ರೀತಿಯ ಅನಗತ್ಯ ಕಾಮಗಾರಿಗಳನ್ನು ನಿರ್ಮಿಸಿ, ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆ ಉಂಟುಮಾಡುವುದರ ಬಗ್ಗೆ ಪೂರ್ಣಚಂದ್ರ ತೇಜಸ್ವಿ, ರಾಜೇಶ್ವರಿ ತೇಜಸ್ವಿ, ತಾರಿಣಿ ಚಿದಾನಂದ ಸೇರಿದಂತೆ ಅನೇಕ ಸಾಹಿತಿ- ಪ್ರಗತಿಪರರ ವಿರೋಧವಿತ್ತು.
ಆದರೆ ಈಗ ಕವಿಯ ಕನಸು- ಆಶಯವನ್ನು ಗಾಳಿಗೆ ತೂರಿ, ಸಾಮಾಜಿಕ ಹಿತಾಸಕ್ತಿಗೆ ವಿರುದ್ಧವಾಗಿ ಸಾರ್ವಜನಿಕರ ಹಣವನ್ನು ದುಂದುಗಾರಿಕೆ ಮಾಡಲು ಪ್ರತಿಷ್ಠಾನ ಹೊರಟಿದೆ. ವಾಸ್ತವವಾಗಿ ಕುಪ್ಪಳಿಯಲ್ಲಿ ಇಷ್ಟೆಲ್ಲಾ ಕಾಮಗಾರಿಗಳನ್ನು ಮಾಡುವ ಅಗತ್ಯವೇ ಇಲ್ಲ! ತೇಜಸ್ವಿಯವರ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನದಂತೆ ಕುವೆಂಪು ಜನ್ಮ ಶತಮಾನೋತ್ಸವದ ಸಂದರ್ಭದಲ್ಲೇ(2004) ಸುಂದರವಾದ ಸಭಾ ಭವನ, ಕವಿಮನೆಯ ಪುನರ್ ನವೀಕರಣ, ಕವಿಶೈಲ, ಕಲಾ ಗ್ಯಾಲರಿಗಳು ನಿರ್ಮಾಣವಾಗಿದ್ದವು. ಅಲ್ಲಿ ವಾಹನಗಳ ನಿಲುಗಡೆಗೆ ಕವಿಮನೆ, ಹೇಮಾಂಗಣದ ಮುಂಭಾಗದಲ್ಲಿ ಸುಸಜ್ಜಿತವಾದ ವಿಶಾಲವಾದ ಡಾಂಬರು ರಸ್ತೆ ಇದೆ. ಶೌಚಾಲಯಗಳು, ಅಂಗಡಿ ಮುಗ್ಗಟ್ಟುಗಳೂ ಇವೆ. ಇಷ್ಟಾದರೂ ಅವುಗಳನ್ನು ಸರಿಯಾಗಿ ನಿರ್ವಹಿಸದೇ ಈಗ ಮತ್ತೆ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿರುವುದು ಖಂಡನೀಯ!
ಸ್ವತಃ ಕುವೆಂಪು ಅವರೇ ಕುಪ್ಪಳಿಯನ್ನು ‘ಪ್ರವಾಸಿ ತಾಣವನ್ನಾಗಿ ಮಾಡಬಾರದು!’ ಹಾಗೂ ಅಲ್ಲಿ ‘ಹೆಚ್ಚು ಆಡಂಬರವಿಲ್ಲದ ಕಟ್ಟಡ ಕಟ್ಟಲಿ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಅಂದರೆ ಕುಪ್ಪಳಿ ಒಂದು ‘ಸಾಂಸ್ಕೃತಿಕ ಕೇಂದ್ರ’ವಾಗಲಿ ಎಂಬ ಬಯಕೆ ಕುವೆಂಪು ಅವರದಾಗಿತ್ತು. ಆದರೆ ಪ್ರತಿಷ್ಠಾನವು ಮದುವೆ ಛತ್ರ ಕಟ್ಟಲು ಬೆಂಗಳೂರಿನಲ್ಲಿ ಜಾಗ ಖರೀದಿಸುವುದೂ ಸೇರಿದಂತೆ ಕೇವಲ ಅನಗತ್ಯ ಕಟ್ಟಗಳನ್ನು ಕಟ್ಟುವ ಬಗ್ಗೆಯೇ ಚಿಂತಿಸುತ್ತಿರುವುದು ಆಶ್ಚರ್ಯ ಉಂಟುಮಾಡುತ್ತದೆ. ಜನರಲ್ಲಿ ವೈಚಾರಿಕ, ವೈಜ್ಞಾನಿಕ ಮನೋಭಾವವನ್ನು ಭಿತ್ತಬೇಕಾದ ಸಾಂಸ್ಕೃತಿಕ ಸಂಸ್ಥೆಯೊಂದು ಕಾಮಗಾರಿಗಳ ಬೆನ್ನೇರಿ ನಡೆಯುತ್ತಿರುವುದು ವಿಷಾದನೀಯ!
“ಸದ್ದಿರದ ಪಸುರೊಡೆಯ ಮಲೆನಾಡ ಬನಗಳಲಿ/
ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ” ಎಂಬ ಕುಪ್ಪಳಿ ಕುರಿತ ಕವಿಯ ಆಶಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು, ಕುಪ್ಪಳಿ ಪರಿಸರವನ್ನು ಉಳಿಸಬೇಕು.
ಈಗಲಾದರೂ ಕುವೆಂಪು- ತೇಜಸ್ವಿಯವರ ಸಾಹಿತ್ಯಾಸಕ್ತರು, ಅವರ ಅಭಿಮಾನಿಗಳು, ಮಲೆನಾಡಿನ ಪ್ರಜ್ಞಾವಂತರು, ಪರಿಸರ ಪ್ರೇಮಿಗಳು ಹಾಗೂ ಕನ್ನಡಿಗರೆಲ್ಲರೂ ಈ ಕುವೆಂಪು ಆಶಯ ವಿರೋಧಿ ಕೆಲಸ-ಕಾರ್ಯಗಳ ವಿರುದ್ಧ ಧನಿ ಎತ್ತಬೇಕಿದೆ.
– ಡಾ.ನರಸಿಂಹಮೂರ್ತಿ ಹಳೆಹಟ್ಟಿ, ಕನ್ನಡ ಅಧ್ಯಾಪಕ
