ಚೈತ್ರಾ ಕುಂದಾಪುರ ಮತ್ತು ತಂಡದಿಂದ ಎರಡು ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳ ವಶ

3 years ago

#twocrore #items #seized #ChaitraKundapur #team

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ, ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮತ್ತು ಅವರ ತಂಡದಿಂದ ಈವರೆಗೆ ನಗದು ಸೇರಿದಂತೆ ಎರಡು ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಒಡಿಶಾದ ಕಟಕ್ ನಲ್ಲಿ ಬಂಧಿಸಲ್ಪಟ್ಟ ಪ್ರಕರಣದ ಆರೋಪಿ ಅಭಿನವ ಹಾಲಶ್ರೀ ಅವರನ್ನು ಹೂವಿನ ಹಡಗಲಿಯ ಮಠಕ್ಕೆ ಕರೆತಂದ ಪೊಲೀಸರ ತಂಡ ಅಲ್ಲಿ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತು. ಮೊದಲು ಕುಟುಂಬದ ಸದಸ್ಯರನ್ನು ಆಚೆ ಕಳಿಸಿ ಸ್ವಾಮೀಜಿ ವಿಚಾರಣೆ ನಡೆಸಿ, ಪೆಟ್ರೋಲ್ ಬಂಕ್ ಮತ್ತು ಇತರೆ ಆಸ್ತಿಪಾಸ್ತಿಗಳ ಹೂಡಿಕೆಯ ಕುರಿತು ಹೇಳಿಕೆ ದಾಖಲಿಸಿಕೊಂಡರು. ನಂತರ ಕುಟುಂಬದ ಸದಸ್ಯರ ಹೇಳಿಕೆ ಪಡೆದುಕೊಂಡರು.ಇದೇ ವೇಳೆ ಸ್ವಾಮೀಜಿ ಕಾರು ಚಾಲಕ ಲಿಂಗರಾಜ ಅವರನ್ನೂ ಜತೆಯಲ್ಲಿ ಕರೆತಂದು ವಿಚಾರಣೆ ನಡೆಸಲಾಯಿತು.

ವಿಧಾನಸಭೆ ಚುನಾವಣೆಗೆ ಮುನ್ನ ದಿನಗಳಲ್ಲಿ ಉದ್ಯಮಿ ಹಾಗೂ ದೂರುದಾರ ಗೋವಿಂದಬಾಬು ಪೂಜಾರಿ, ಆರೋಪಿ ಚೈತ್ರಾ ಕುಂದಾಪುರ ಹಾಲಸ್ವಾಮಿ ಮಠಕ್ಕೆ ಬಂದು ಸ್ವಾಮೀಜಿ ಜತೆ ಮಾತುಕತೆ ನಡೆಸಿದ್ದರು. ಆ ಕುರಿತಾಗಿಯೂ ಸಿಸಿಬಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದರು.

ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮಿ ಪ್ರಣವ್ ಪ್ರಸಾದ್ ಎಂಬುವವರು ಸ್ವಾಮೀಜಿಗೆ ಸೇರಿದ್ದ ನಗದು ತುಂಬಿದ ಬ್ಯಾಗ್ ನ್ನು ಮಠದ ಪ್ರಾಂಗಣದಲ್ಲಿ ಇರಿಸಿ ಹೋಗಿದ್ದರು. ಆ ನಗದು ತುಂಬಿದ ಬ್ಯಾಗನ್ನು ಸಿಸಿಬಿ ಅಧಿಕಾರಿಗಳು ಪಂಚನಾಮೆ ನಡೆಸಿ, ಎಣಿಕೆ ಮಾಡಿದಾಗ ₹ 56.03 ಲಕ್ಷ ನಗದು ಅಲ್ಲಿತ್ತು. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದರು. ರಾತ್ರಿ 11-30ಕ್ಕೆ ಸ್ಥಳ ಸಿಸಿಬಿ ಪೊಲೀಸರು ಮಹಜರು ಪೂರ್ಣಗೊಳಿಸಿ, ಹಾಲಶ್ರೀ ಅವರನ್ನು ಹಿರೇಕೊಳಚಿ ಮಾರ್ಗವಾಗಿ ಕರೆದೊಯ್ದರು.

ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ  ಈ ಪ್ರಕರಣದಲ್ಲಿ ಎಂಟು ಮಂದಿಯನ್ನು ಬಂಧಿಸಿ ಕೂಲಂಕುಶವಾಗಿ ವಿಚಾರಣೆಗೊಳಪಡಿಸಿ ಮಾಹಿತಿಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಚೈತ್ರಾ ಕುಂದಾಪುರ ಅವರಿಂದ ಡಿಡಿ, ಚಿನ್ನಾಭರಣ, ಕಾರು, ಹಣ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಮೂರನೇ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ಮಠದಿಂದ 56 ಲಕ್ಷ ರೂ. ಹಾಗೂ ಮತ್ತೊಬ್ಬ ವ್ಯಕ್ತಿಯಿಂದ 20 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಹೀಗೆ ಎಲ್ಲರ ವಿಚಾರಣೆಗೊಳಪಡಿಸಿ ಅವರಿಂದ ಹಣ ಇನ್ನಿತರ ವಸ್ತುಗಳನ್ನು ರಿಕವರಿ ಮಾಡಲಾಗುತ್ತಿದೆ ಎಂದರು.

Leave a Reply