ಬ್ಲೂಟೂಥ್ ಬಳಕೆ ಪ್ರಕರಣ ಕುರಿತು ಅವಶ್ಯವೆನಿಸಿದರೆ ಉನ್ನತಮಟ್ಟದ ತನಿಖೆ: ಪ್ರಿಯಾಂಕ್ ಖರ್ಗೆ

2 years ago

#Highlevel #investigation #necessary #Bluetooth #usage #case #PriyankKharge #KEA #exam #illegal

ಕಲಬುರ್ಗಿ: ಇತ್ತೀಚಿಗೆ ಕರ್ನಾಟಕ‌ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಬ್ಲೂಟೂಥ್ ಬಳಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದು, ಅವಶ್ಯವೆನಿಸಿದರೆ ಉನ್ನತಮಟ್ಟದ ತನಿಖೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲು ಅಗತ್ಯ ಮತ್ತು ಸೂಕ್ತ ಕ್ರಮಕೈಗೊಳ್ಳಲಾಗಿತ್ತು ಎಂದು ಹೇಳಿದರು.‌

ಹ್ಯಾಂಡ್ ಹೆಲ್ಡ್ ಡಿಟೆಕ್ಟರ್ ಹಾಗೂ ಮೆಟಲ್ ಡಿಟೆಕ್ಟರ್ ಬಳಸಲಾಗಿತ್ತು. ಆದರೂ ಕೂಡಾ ಕೆಲವೊಬ್ಬ ಅಭ್ಯರ್ಥಿಗಳು ಶರ್ಟ್ ಗಳಲ್ಲಿ ಡಿವೈಸ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಗಳಿಗೆ ಹೋಗಿದ್ದರು. ಈ ಮಾಹಿತಿ ಸಿಕ್ಕ ಕೂಡಲೇ ಪೊಲೀಸರು ಅನುಮಾನಾಸ್ಪದ ಅಭ್ಯರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ ನಂತರ ಬ್ಲೂಟೂಥ್ ಬಳಸಿ ಪರೀಕ್ಷೆಗಳಲ್ಲಿ ಉತ್ತರ ಬರೆಯುತ್ತಿದ್ದವರನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿರುವ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು ಅವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ತಕ್ಷಣ ಅಗತ್ಯ ಕ್ರಮ ವಹಿಸಿದ್ದರಿಂದ ಪ್ರಕರಣ ಕೂಡಲೇ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಯಾರೇ ಆಗಿದ್ದರೂ ಕೂಡಾ ಅವರನ್ನು ಬಂಧಿಸಿ ಕಾನೂನಿನ ಚೌಕಟ್ಟಿನಲ್ಲಿ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಹೇಳಿದರು.

Leave a Reply