ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಮೊದಲನೇ ದಿನವೇ ಹಲವು ಸಚಿವರು ಕಲಾಪಕ್ಕೆ ಗೈರು ಹಾಜರಾದರೆ, ಅನೇಕ ಶಾಸಕರೂ ಕಲಾಪದತ್ತು ಸುಳಿಯಲಿಲ್ಲ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಮೊದಲ ಅಧಿವೇಶನ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಎಲ್ಲಾ ಶಾಸಕರು ಉತ್ಸಾಹದಿಂದ ಪಾಲ್ಗೊಳ್ಳಬೇಕಿತ್ತು. ಆದರೆ ಮೊದಲ ದಿನದ ಕಲಾಪದಲ್ಲಿ ಉತ್ಸಾಹ ಕಂಡುಬರಲಿಲ್ಲ.
ಸಮಯಕ್ಕೆ ಸರಿಯಾಗಿ ಹಾಜರಾಗುವ ಸದಸ್ಯರಿಗೆ ಉಡುಗೊರೆ ನೀಡುವುದಾಗಿ ಘೋಷಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಎಲ್ಲಾ ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದು, ಅದಕ್ಕೆ ಪರಿಹಾರ ಕಲ್ಪಿಸಲು ಪ್ರಯತ್ನ ಮಾಡಬೇಕು. ಅಷ್ಟೇ ಅಲ್ಲ ಶಾಸನ ರಚನೆಯ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಿದರು.
ಮತ್ತೊಂದೆಡೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸದಸ್ಯರ ಗೈರು ಹಾಜರಿ ಕುರಿತು ಗರಂ ಆದರು. ಮಂತ್ರಿಗಳ ಗೈರು ಹಾಜರಿ ಖಂಡಿಸಿ ಸರ್ಕಾರಕ್ಕೆ ಚಾಟಿ ಬೀಸಿದರು. ಪ್ರಶ್ನೋತ್ತರ ಕಲಾಪ ವೇಳೆ ಪ್ರಸ್ತಾಪಿಸಿದ ಅವರು, ಆರು ಸಚಿವರು ಗೈರಾಗಿದ್ದಾರೆ. ಜೊತೆಗೆ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವ ಹಿನ್ನೆಲೆ ಬರುವುದಿಲ್ಲ ಎಂದೂ ಪತ್ರವೊಂದನ್ನು ಕಳುಹಿಸಿದ್ದಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ. ಸಭಾನಾಯಕ ಬೋಸರಾಜು ಅವರು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ವಿಪಕ್ಷ ಸದಸ್ಯರು, ಅಧಿವೇಶನಕ್ಕಿಂತ ಪೂರ್ವ ನಿಯೋಜಿತ ಕಾರ್ಯಕ್ರಮ ಮುಖ್ಯವೇ? ಸಂಬಂಧಿಸಿದ ಸಚಿವರೇ ಇಲ್ಲದಿದ್ದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಹೇಗೆ ದೊರೆಯುತ್ತದೆ? ಎಲ್ಲವನ್ನೂ ಸಭಾ ನಾಯಕರೇ ಹೇಳುವುದು ಒಳ್ಳೆಯದಲ್ಲ ಎಂದು ಏರು ದನಿಯಲ್ಲಿ ಮಾತಿಗೆ ಮುಂದಾದರು. ಆಗ ಸಭಾ ನಾಯಕ ಬೋಸರಾಜು, ಸಚಿವರ ಹಾಜರಿ ಸರಿಪಡಿಸುವುದಾಗಿ ಭರವಸೆ ನೀಡಿದರು.




