ಕೈ ಪಾಳೆಯದ ಆಂತರಿಕ ಸಂಘರ್ಷ ಒಳ್ಳೆಯ ಬೆಳವಣಿಗೆಯಲ್ಲ

3 years ago

#Congress #development #internalconflict #jagadeeshkoppa

ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದು ಭದ್ರವಾಗಿ ನೆಲೆಯೂರುವ ಸಂದರ್ಭದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ನಾಯಕರ ನಡುವಿನ ಕಚ್ಚಾಟ ಸಾರ್ವಜನಿಕವಾಗಿ ಬಹಿರಂಗಗೊಂಡಿರುವುದು ಪಕ್ಷಕ್ಕೆ ಮತ್ತು ಕರ್ನಾಟಕದ ಜನತೆಯ ಪಾಲಿಗೆ ಒಳ್ಳೆಯ ಬೆಳವಣಿಯಲ್ಲ.

ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಬಿ.ಕೆ.ಹರಿಪ್ರಸಾದ್ ತಮಗೆ ಸಚಿವ ಸ್ಥಾನ ನೀಡಲಿಲ್ಲ ಎಂಬ ಏಕೈಕ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಅಸಮಾಧಾನಗೊಂಡಿದ್ದರು. ಆದರೆ, ಮೊನ್ನೆ ಬೆಂಗಳೂರು ನಗರದಲ್ಲಿ ಈಡಿಗರ ಸಮಾವೇಶದಲ್ಲಿ ಆಕ್ರೋಶಗೊಂಡು ಸಿದ್ಧರಾಮಯ್ಯನವರನ್ನು ಕೆಟ್ಟ ಶಬ್ದಗಳಲ್ಲಿ ನಿಂದಿಸಿರುವುದು ಅವರ ವ್ಯಕ್ತಿತ್ವಕ್ಕೆ ಘನತೆ ತರುವಂತಹದ್ದಲ್ಲ.

ಎಪ್ಪತ್ತರ ದಶಕದಲ್ಲಿ ನಾನು ಬೆಂಗಳೂರು ನಗರದಲ್ಲಿ ಪದವಿ ಓದುತ್ತಿದ್ದಾಗ ಹರಿಪ್ರಸಾದ್, ಹೆಚ್.ಡಿ.ಗಂಗರಾಜು, ಆರ್.ವಿ.ಹರೀಶ್, ಪಿ.ಜಿ.ಆರ್. ಸಿಂಧ್ಯಾ, ರಘುಪತಿ, ವಾಲೆ ಮಂಜು ಇವರೆಲ್ಲಾ ವಿದ್ಯಾರ್ಥಿ ಸಂಘದ ನಾಯಕರಾಗಿ ಗುರುತಿಸಿಕೊಂಡವರು.

ಆರಂಭದಿಂದಲೂ ಉಗ್ರ ಪ್ರತಿಭಟನಾಕಾರರಾಗಿದ್ದ ಬಿ.ಕೆ. ಹರಿಪ್ರಸಾದ್ ತಮ್ಮ ರಾಜಕೀಯದ ಕೊನೆಯ ದಿನಗಳಲ್ಲಿ ತಾಳ್ಮೆ ವಹಿಸುವುದು ಸೂಕ್ತ. ಕರ್ನಾಟಕ ರಾಜಕೀಯ ಬೆಳವಣಿಗೆಯಲ್ಲಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದು ನಿಜಕ್ಕೂ ತಪ್ಪು ಹೆಜ್ಜೆ. ಇದಕ್ಕೆ ಅವರು ಹೈ ಕಮಾಂಡ್ ನಾಯಕರ ಜೊತೆ ಮಾತನಾಡಿ ಪರಿಹಾರ ಪಡೆಯಬಹುದಿತ್ತು. ಕಳೆದ ಇಪ್ಪತ್ತೈದು ವರ್ಷಗಳಿಂದ ಅವರು ದೆಹಲಿ ಹೈಕಮಾಂಡ್ ಆಶ್ರಯದಲ್ಲಿ ಗುರುತಿಸಿಕೊಂಡವರು. ಸೋನಿಯಾ ಅಥವಾ ರಾಹುಲ್ ಜೊತೆ ಮಾತನಾಡುವುದು ಅವರಿಗೆ ಕಷ್ಟವೇನಲ್ಲ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಈ ವಿಷಯದಲ್ಲಿ ಯಾವುದೇ ತೀಕ್ಷ್ಣವಾದ ಪ್ರತಿಕ್ರಿಯೆ ನೀಡದೆ ಅತ್ಯಂತ ಘನತೆಯಿಂದ ನಡೆದುಕೊಂಡಿದ್ದಾರೆ. ಅವರು ಸಚಿವ ಸಂಪುಟದಲ್ಲಿ ಹರಿಪ್ರಸಾದ್ ಗೆ ಸ್ಥಾನ ನೀಡಬೇಕಿತ್ತು. ಇಂದು ಕಾಂಗ್ರೇಸ್ ಪಕ್ಷದಲ್ಲಿ ಅತ್ಯಂತ ನಿರ್ಧಾಕ್ಷಿಣ್ಯವಾಗಿ ಬಿ.ಜೆ.ಪಿ. ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳುವವರಲ್ಲಿ ಹರಿಪ್ರಸಾದ್ ಮತ್ತು ಪ್ರಿಯಾಂಕ ಖರ್ಗೆ ಮುಂಚೂಣಿಯಲ್ಲಿದ್ದಾರೆ.

ತಮ್ಮ ರಾಜಕೀಯ ಜೀವನದಲ್ಲಿ ಅತಿ ಹೆಚ್ಚು ಕಾಲ ದೆಹಲಿಯಲ್ಲಿ ಕಳೆದ ಬಿ.ಕೆ.ಹರಿಪ್ರಸಾದ್ ಗೆ ಈವರೆಗೆ ನೇರ ಚುನಾವಣೆಗೆ ಸ್ಪರ್ಧಿಸಲು ತಮ್ಮದೇ ಆದ ಒಂದು ಕ್ಷೇತ್ರವಿಲ್ಲ. ಒಂದೆರೆಡು ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಒಕ್ಕಲಿಗರು ಮತ್ತು ಬ್ರಾಹ್ಮಣರು ಸಮನಾಗಿ ಇರುವ ಈ ಕ್ಷೇತ್ರದಲ್ಲಿ ಹರಿಪ್ರಸಾದ್ ಅಂತಹವರು ಗೆಲ್ಲುವುದು ಅಷ್ಟು ಸುಲಭವಲ್ಲ.

ಇತ್ತೀಚೆಗೆ ತಾನೆ ವಿಧಾನಪರಿಷತ್ ಮೂಲಕ ರಾಜ್ಯ ರಾಜಕೀಯಕ್ಕೆ ಬಂದಿರುವ ಅವರು ಸಾವಕಾಶದಿಂದ ಕಾಯುವುದು ಸಹ ಒಳಿತು. ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಇಲ್ಲಿನ ಮತದಾರರು ಮುವತ್ತು ವರ್ಷಗಳ ನಂತರ ತಮ್ಮ ನಿರ್ಣಾಯಕ ಮತಗಳ ಮೂಲಕ ಕಾಂಗ್ರೇಸ್ ಪಕ್ಷವನ್ನು ಚುನಾಯಿಸಿದ್ದಾರೆ. ಆಪರೇಷನ್ ಕಮಲದಂತಹ ಹೀನ ಕೃತ್ಯಕ್ಕೆ ಕೈ ಹಾಕಬಾರದು ಎಂಬ ಕಾರಣಕ್ಕಾಗಿ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಎರಡೂ ಪಕ್ಷಗಳನ್ನು ಗುಡಿಸಿ ಮೂಲೆಗೆ ಎಸೆದಿದ್ದಾರೆ.

ಇದು ಕಾಂಗ್ರೇಸ್ ಪಕ್ಷದ ಗೆಲುವಲ್ಲ ಕರ್ನಾಟಕದ ಪ್ರಜ್ಞಾವಂತ ಮತದಾರರ ಗೆಲವು. ಈ ಕನಿಷ್ಠ ಪ್ರಜ್ಞೆ ಕಾಂಗ್ರೇಸ್ ನಾಯಕರಿಗೆ ಇರಬೇಕು. 1983 ರಲ್ಲಿ ಕರ್ನಾಟಕದ ಜನತೆ ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರವನ್ನು ಅದರ ದುರಂಕಾರದ ಆಡಳಿತಕ್ಕಾಗಿ ಕಿತ್ತೊಗೆದು ಜನತಾದಳ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿ.ಜೆ.ಪಿ. ಸರ್ಕಾರದ ದುರಂಕಾರ ಮತ್ತು ವೈಫಲ್ಯಕ್ಕಾಗಿ ಅದನ್ನ ಮೂಲೆಗುಂಪು ಮಾಡಿ ಕಾಂಗ್ರೇಸ್ ಸರ್ಕಾರವನ್ನು ಸ್ಪಷ್ಟ ಬಹುಮತಗಳಿಂದ ಅಧಿಕಾರಕ್ಕೆ ತಂದಿದ್ದಾರೆ. ಇದು ಕಾಂಗ್ರೇಸ್ ಪಕ್ಷದ ಜಯವಲ್ಲ. ಜನತೆಯ ಗೆಲುವು.

ಸಿದ್ಧರಾಮಯ್ಯನವರು ರಾಜ್ಯದ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಲ್ಲಿದ್ದರೂ ಸಹ ತಮ್ಮ ಅನುಭವದ ಮೂಲಕ ಜಾಣ್ಮೆಯ ನಡೆಯ ಮೂಲಕ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಇದೇ ಜಾಣ್ಮೆ ತಾವು ತೆಗೆದುಕೊಳ್ಳುವ ನಿರ್ಧಾರದಲ್ಲಿಯೂ ಸಹ ಇರಬೇಕಿದೆ. ಪಕ್ಷದಲ್ಲಿ ಅಥವಾ ಸರ್ಕಾರದಲ್ಲಿ ಆಂತರೀಕ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಿದ್ದರೆ ಭವಿಷ್ಯದಲ್ಲಿ ಅದು ದುರಂತಕ್ಕೆ ಎಡೆ ಮಾಡಿಕೊಡಬಲ್ಲದು.

ಸಿ.ಗೋವಿಂದರಾಜ್ ಎಂಬ ಅನನುಭವಿಯನ್ನು ಮತ್ತು ಸುನೀಲ್ ಎಂಬ ಚುನಾವಣೆಯ ಸಲಹೆಗಾರನನ್ನು ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಿ ಅವರಿಗೆ ಸಚಿವ ಸಂಪುಟ ಸ್ಥಾನ ಮಾನ ನೀಡಿದ್ದು ಖಂಡಿತಾ ಒಳ್ಳೆಯ ನಿರ್ಧಾರವಲ್ಲ. ಅದೇ ರೀತಿ ಆರ್.ಸೀತಾರಾಂ, ಉಮಾಶ್ರೀ ಮತ್ತು ಸುಧಾಮದಾಸ್ ಅವರನ್ನು ವಿಧಾನಪರಿಷತ್ತಿಗೆ ನಾಮಕರಣ ಮಾಡಿರುವುದರಲ್ಲಿ ಸಿದ್ಧರಾಮಯ್ಯನವರ ಏಕಪಕ್ಷೀಯ ಧೋರಣೆ ಎದ್ದು ಕಾಣುತ್ತಿದೆ.

ಒಬ್ಬ ನಾಯಕ ಎನಿಸಿಕೊಂಡವನಿಗೆ ಪಕ್ಷದ ಸಾಮಾನ್ಯ ಕಾರ್ಯಕರ್ತನ ಸಲಹೆಗೂ ಮಾನ್ಯತೆ ನೀಡುವ ವ್ಯವಧಾನ ಇರಬೇಕು. ಈ ಕೊರತೆ ಸಿದ್ಧರಾಮಯ್ಯನವರಲ್ಲಿ ಎದ್ದು ಕಾಣಿಸುತ್ತಿದೆ. ತಮ್ಮ ಆಪ್ತ ಬಳಗದ ಸಲಹೆಯಷ್ಠೆ ಪಕ್ಷದ ಇತರೆ ನಾಯಕರ ಮತ್ತು ಕಾರ್ಯಕರ್ತರ ಸಲಹೆ ಕೂಡಾ ಮುಖ್ಯ ಎಂಬುದನ್ನು ಮುಖ್ಯಮಂತ್ರಿಯವರು ತಕ್ಷಣ ಅರಿತುಕೊಳ್ಳಬೇಕಿದೆ.

ಇನ್ನಾರು ತಿಂಗಳಲ್ಲಿ ಲೋಕಸಭಾ ಚುನಾವಣೆ ಇರುವಾಗ ಇಂತಹ ಆಂತರೀಕ ಕಚ್ಚಾಟಗಳು ಸಂಘಪರಿವಾರಕ್ಕೆ ಅಧಿಕಾರದ ಏಣಿಯ ಮೆಟ್ಟಿಲುಗಳಾಗುತ್ತವೆ. ಈ ಎಚ್ಚರಿಕೆ ಕಾಂಗ್ರೇಸ್ ಪಕ್ಷದಲ್ಲಿ ತಾನು ಸಾಕ್ರೇಟಿಸ್, ಪ್ಲೇಟೊ ಅಥವಾ ಅರಿಸ್ಠಾಟಲ್ ಎಂದು ಭ್ರಮೆಯಲ್ಲಿರುವ ಪ್ರತಿಯೊಬ್ಬ ನಾಯಕನಿಗೂ ಇರಬೇಕಾಗಿದೆ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply