ಬೆಂಗಳೂರು: ಸಾಲ ವಸೂಲಾತಿ ಹೆಸರಿನಲ್ಲಿ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸುಗ್ರೀವಾಜ್ಞೆಯನ್ನು ಮತ್ತೆ ರಾಜ್ಯಪಾಲರಿಗೆ ರವಾನಿಸಲಾಗಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಸುಗ್ರೀವಾಜ್ಞೆಗೆ ಅಂಕಿತ ಹಾಕಲು ನಿರಾಕರಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಈ ಸಂಬಂಧ ಎತ್ತಿದ್ದ ತಕರಾರುಗಳಿಗೆ ಸ್ಪಷ್ಟನೆ ನೀಡಿರುವ ಕಾನೂನು ಇಲಾಖೆ ಇದೀಗ ಮತ್ತೆ ರಾಜಭವನಕ್ಕೆ ಮಸೂದೆಯನ್ನು ರವಾನಿಸಿದ್ದು ಅಂಕಿತ ಹಾಕುವಂತೆ ಮನವಿ ಮಾಡಿದೆ.
ರಾಜ್ಯಪಾಲರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಸಹಕಾರ ಮತ್ತು ಕಾನೂನು ಇಲಾಖೆ ಉತ್ತರ ನೀಡಿದ್ದು ಮೈಕ್ರೋ ಫೈನಾನ್ಸ್ ಗಳ ಹಾವಳಿಯನ್ನು ತಡೆಗಟ್ಟಲು ಸುಗ್ರೀವಾಜ್ಞೆ ಮೂಲಕ ಮಸೂದೆ ಜಾರಿ ಅನಿವಾರ್ಯವಾಗಿದೆ ಎಂದು ಸಮರ್ಥಿಸಿದೆ.
ನೋಂದಾಯಿತವಲ್ಲದ ಮತ್ತು ಸಾಲ ನೀಡಲು ಲೈಸನ್ಸ್ ಹೊಂದಿರದ ಯಾವುದೇ ವ್ಯಕ್ತಿಯು ಯಾರಿಗೇ ಸಾಲ ಕೊಡಲು ಮತ್ತು ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿರುವುದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವೂ ಅಲ್ಲ, ಯೋಗ್ಯವೂ ಅಲ್ಲ ಎಂದು ಸ್ಪಷ್ಟಪಡಿಸಿದೆ.
ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹ. ಬೇರೆ ಯಾವುದೇ ಅಕ್ರಮ ಸಾಲ ಮತ್ತು ಬಡ್ಡಿ ವಸೂಲಾತಿ ಅರ್ಜಿಗಳನ್ನು ಕಾನೂನಾತ್ಮಕವಾಗಿ ನ್ಯಾಯಾಲಯಗಳು ಕೂಡಾ ವಿಚಾರಣೆಗೆ ಒಳಪಡಿಸಲು ಸಾಧ್ಯವೇ ಇಲ್ಲ. ಇಂತಹ ಸಾಲವನ್ನು ವಸೂಲಿ ಮಾಡಲು ಮತ್ತು ವಿಧಿಸಿದ ಬಡ್ಡಿಯನ್ನು ಕಾನೂನಾತ್ಮಕವಾಗಿ ಕೂಡ ವಸೂಲಾತಿಗೆ ಅವಕಾಶ ನೀಡಿದರೆ ಸಂವಿಧಾನದ ಬಹುದೊಡ್ಡ ರಕ್ಷಣೆಯು ಸಮಾಜದಲ್ಲಿ ಅಕ್ರಮ ಬಡ್ಡಿ ವಿಧಿಸಿ ಅಕ್ರಮವಾಗಿ ಕಾನೂನುಬಾಹಿರವಾಗಿ ಸಾಲ ವಸೂಲಿ ಮಾಡುವ ವ್ಯಕ್ತಿಗಳಿಗೆ ಲಭ್ಯವಾಗುತ್ತದೆ. ಇದು ಸಂವಿಧಾನ ಮತ್ತು ಕಾನೂನು ವಿರೋಧಿ. ಜೊತೆಗೆ ಸಮಾಜಕ್ಕೆ ಕಂಟಕ ತರುವಂತಹ ಕ್ರಮವೇ ಹೊರತು ಸಂವಿಧಾನಾತ್ಮಕವಾಗುವುದಿಲ್ಲ ಎಂದು ತಿಳಿಸಿದೆ.
ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು/ನಿಷೇಧಿಸಲು ಸುಗ್ರೀವಾಜ್ಞೆ ಪ್ರಸ್ತಾಪಿಸುತ್ತದೆ. ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆತರುವಂತಹ ಯಾವುದೇ ಕ್ರಮ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.




