ಸೈಬರ್ ಅಪರಾಧ ಪ್ರಕರಣದಲ್ಲಿ ಕರ್ನಾಟಕ ದ್ವಿತೀಯ, ಬೆಂಗಳೂರು ಪ್ರಥಮ

2 years ago

#Karnataka #second #Bangalore #first #cybercrimecases

ಬೆಂಗಳೂರು: ದೇಶದಲ್ಲಿ ದಾಖಲಾಗುವ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ದೇಶದಲ್ಲಿ ಕಳೆದ 2021ರಲ್ಲಿ 52,974 ಸೈಬರ್ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 65,893 ಕೇಸ್ ದಾಖಲಾಗಿದ್ದು, ಅವುಗಳಲ್ಲಿ ಕರ್ನಾಟಕ 2ನೇ ಸ್ಥಾನ ಹಾಗೂ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಗಳಿಸಿದೆ.

ವಿವಿಧ ರಾಜ್ಯಗಳಲ್ಲಿ 2022ರಲ್ಲಿ ದಾಖಲಾದ ಸೈಬರ್ ಕ್ರೈಮ್ ಪ್ರಕರಣಗಳು:
ತೆಲಂಗಾಣ – 15,297
ಕರ್ನಾಟಕ – 12,556
ಉತ್ತರಪ್ರದೇಶ – 10,117

ಸೈಬರ್ ಅಪರಾಧಗಳಷ್ಟೇ ಅಲ್ಲದೇ ಶೇ.11ರಷ್ಟು ಆರ್ಥಿಕ ಅಪರಾಧ ಪ್ರಕರಣಗಳು, ಶೇ. 9ರಷ್ಟು ಹಿರಿಯ ನಾಗರಿಕರ ವಿರುದ್ಧದ ಅಪರಾಧ ಪ್ರಕರಣಗಳು, ಶೇ.4ರಷ್ಟು ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಹೆಚ್ಚಳವಾಗಿರುವ ಮಾಹಿತಿಯನ್ನು ಇತ್ತೀಚಿಗೆ ಬಿಡುಗಡೆಯಾಗಿರುವ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ (ಎನ್ಸಿಆರ್ಬಿ) ವರದಿ ಬಹಿರಂಗಗೊಳಿಸಿದೆ.

ದೇಶದ ಮಹಾನಗರಗಳಲ್ಲಿ ದಾಖಲಾದ ಸೈಬರ್ ಅಪರಾಧ ಪ್ರಕರಣಗಳ ಪೈಕಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 2021ರಲ್ಲಿ 6,423 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, 2022ರಲ್ಲಿ 9,940 ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. 4724 ಪ್ರಕರಣಗಳು ದಾಖಲಾಗಿರುವ ಮುಂಬೈ ಮತ್ತು 4436 ಪ್ರಕರಣಗಳು ದಾಖಲಾಗಿರುವ ಹೈದರಾಬಾದ್ 2 ಮತ್ತು 3ನೇ ಸ್ಥಾನ ಗಳಿಸಿವೆ.

ಮಕ್ಕಳ ಮೇಲಿನ ಸೈಬರ್ ಅಪರಾಧ ಪ್ರಕರಣಗಳಲ್ಲಿಯೂ ಕರ್ನಾಟಕ ಮೊದಲನೇ ಸ್ಥಾನ ಪಡೆದಿದೆ. 2022ನೇ ಸಾಲಿನಲ್ಲಿ ಮಕ್ಕಳನ್ನೊಳಗೊಂಡ ಅಶ್ಲೀಲ ವಿಡಿಯೋಗಳ ಚಿತ್ರೀಕರಣ ಹಾಗೂ ಪ್ರಕಟಿಸುವ ಅಪರಾಧ ಸೇರಿದಂತೆ ಮಕ್ಕಳ ಮೇಲಿನ 239 ಸೈಬರ್ ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ತಲಾ 182 ಪ್ರಕರಣಗಳನ್ನು ಹೊಂದಿರುವ ಕೇರಳ ಹಾಗೂ ರಾಜಸ್ಥಾನ ಎರಡನೇ ಸ್ಥಾನದಲ್ಲಿದ್ದರೆ, 178 ಪ್ರಕರಣಗಳಿರುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.

ಸೈಬರ್ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ಪೊಲೀಸರು ಹಿಂದೆ ಬಿದ್ದಿದ್ದಾರೆ. 2022ರಲ್ಲಿ ದಾಖಲಾದ 12,556 ಪ್ರಕರಣಗಳ ಪೈಕಿ 612 ಪುರುಷರು ಹಾಗೂ 67 ಮಹಿಳೆಯರು ಸೇರಿ 679 ವಂಚಕರನ್ನಷ್ಟೇ ಬಂಧಿಸುವಲ್ಲಿ ಕರ್ನಾಟಕದ ಪೊಲೀಸರು ಯಶಸ್ವಿಯಾಗಿದ್ದಾರೆ. 10,117 ಪ್ರಕರಣಗಳಿಂದ 7107 ಪುರುಷ ಹಾಗೂ 15 ಮಹಿಳೆಯರು ಸೇರಿ 7,122 ಆರೋಪಿಗಳನ್ನು ಪತ್ತೆ ಹಚ್ಚಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ.

ದೇಶದ ಮಹಾನಗರಗಳ ಪೈಕಿ ಬೆಂಗಳೂರು ನಗರ ಐಟಿ ಹಬ್ ಎಂದು ಹೆಸರುವಾಸಿಯಾಗಿದೆ. ಇಲ್ಲಿ ತಂತ್ರಜ್ಞಾನ ಆಧಾರಿತ ಕೆಲಸಗಳು ಹೆಚ್ಚಿರುವುದರಿಂದ ಸಹಜವಾಗಿಯೇ ಬೆಂಗಳೂರು ಸೈಬರ್ ವಂಚಕರ ಟಾರ್ಗೆಟ್ ಆಗಿದೆ. ಪ್ರತಿನಿತ್ಯದ ಕೆಲಸಗಳಿಗೂ ಜನರು ಆ್ಯಪ್ಗಳನ್ನು ಅವಲಂಬಿಸಿರುವುದು ಇದಕ್ಕೆ ಕಾರಣ. ತಂತ್ರಜ್ಞಾನಗಳ ಹೆಚ್ಚಿನ ಬಳಕೆಯನ್ನು ನಾವು ಬೆಂಗಳೂರಿನಲ್ಲಿ ಕಾಣುತ್ತೇವೆ. ಹಾಗಾಗಿ ಸೈಬರ್ ವಂಚನೆ ವಿಷಯದಲ್ಲಿ ಅತಿ ಹೆಚ್ಚು ಜನರು ಬೆಂಗಳೂರಿನಲ್ಲಿ ಸಿಗುತ್ತಿದ್ದಾರೆ ಸೈಬರ್ ತಜ್ಞ ಫಣೀಂದ್ರ ಬಿ.ಎನ್. ಅಭಿಪ್ರಾಯಪಟ್ಟಿದ್ದಾರೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಬಿಡುಗಡೆಗೊಳಿಸಿರುವ ಮಾಹಿತಿಗೂ ಸಿಗದ ಅನೇಕ ಪ್ರಕರಣಗಳಿವೆ. ಎಷ್ಟೋ ಪ್ರಕರಣಗಳು ವರದಿಯಾಗುವುದೇ ಇಲ್ಲ. ಸೈಬರ್ ಕ್ರೈಂ ಕುರಿತು ಜನರಲ್ಲಿ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದಿದ್ದಾರೆ.

2022 ಪ್ರಕರಣಗಳು:

ತೆಲಂಗಾಣ – 15,297
ಕರ್ನಾಟಕ – 12,556
ಉತ್ತರ ಪ್ರದೇಶ – 10,117
ಮಹಾರಾಷ್ಟ್ರ – 8,249
ಆಂಧ್ರಪ್ರದೇಶ – 2,341

2022ರ ಹೆಚ್ಚು ಸೈಬರ್ ಕೇಸ್ :

ಬೆಂಗಳೂರು – 9,940
ಮುಂಬೈ – 4724
ಹೈದರಾಬಾದ್ – 4436
ಲಕ್ನೋ – 1134
ದೆಹಲಿ – 685

Leave a Reply